ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಶುಕ್ರವಾರವೂ(ಜೂನ್ 11) ಮತ್ತೆ ಇಂಧನ ಬೆಲೆ ಏರಿಕೆಯಾಗಿದ್ದು, ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 102 ರೂಪಾಯಿ ದಾಟಿರುವುದಾಗಿ ವರದಿ ತಿಳಿಸಿದೆ.
ಇನ್ನೂ ಓದಿ:ಮುಂದಿನ ಎರಡು ವರ್ಷ ನಾನೇ ಸಿಎಂ: ಬದಲಾವಣೆ ಚರ್ಚೆಗೆ ಸೆಡ್ಡು ಹೊಡೆದ ಯಡಿಯೂರಪ್ಪ
ಸರ್ಕಾರಿ ಸ್ವಾಮ್ಯದ ಇಂಧನ ವ್ಯಾಪಾರಿಗಳ ಬೆಲೆ ಅಧಿಸೂಚನೆ ಪ್ರಕಾರ, ಶುಕ್ರವಾರ ಪೆಟ್ರೋಲ್ ಬೆಲೆ ಲೀಟರ್ ಗೆ 25-29 ಪೈಸೆ ಮತ್ತು ಡೀಸೆಲ್ ಲೀಟರ್ ಗೆ 27-30 ಪೈಸೆ ಹೆಚ್ಚಿಸಿರುವುದಾಗಿ ತಿಳಿಸಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 95.85 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಪ್ರತಿ ಲೀಟರ್ ಗೆ 86.75 ರೂಪಾಯಿ ಆಗಿರುವುದಾಗಿ ವರದಿ ಹೇಳಿದೆ.
ಈವರೆಗೆ 23 ಬಾರಿ ಇಂಧನ ಬೆಲೆ ಹೆಚ್ಚಳವಾಗಿದ್ದು, ಜೂನ್ ತಿಂಗಳಿನಲ್ಲಿ 6ನೇ ಬಾರಿ ದೇಶಾದ್ಯಂತ ಇಂಧನ ಬೆಲೆ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಲಡಾಖ್ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂಪಾಯಿ ದಾಟಿರುವುದಾಗಿ ವರದಿ ತಿಳಿಸಿದೆ.
ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 95.85 ರೂಪಾಯಿ, ಡೀಸೆಲ್ ಲೀಟರ್ ಗೆ 86.75 ರೂಪಾಯಿ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 97.19 ರೂಪಾಯಿ, ಡೀಸೆಲ್ ಲೀಟರ್ ಗೆ 91.42 ರೂಪಾಯಿ. ಉದ್ಯಾನಗರಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.05 ರೂಪಾಯಿ, ಡೀಸೆಲ್ ಲೀಟರ್ ಬೆಲೆ 91.97 ರೂಪಾಯಿ. ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 95.80 ರೂಪಾಯಿ, ಡೀಸೆಲ್ ಲೀಟರ್ ಗೆ 89.60 ರೂಪಾಯಿ ಎಂದು ವರದಿ ತಿಳಿಸಿದೆ.