ಪಾಂಡವಪುರ: ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಪಡೆಯಲು ಪೊಲೀಸ್ ಠಾಣೆ ಅಥವಾ ತಾಲೂಕು ಕಚೇರಿಯಿಂದ ಅಧಿಕೃತ ಪಾಸ್ ಹೊಂದಿರಬೇಕು. ಆದರೆ ಕೆಲ ಬಂಕ್ ನಿರ್ವಾಹಕರು ಇದನ್ನೇ ಬಂಡವಾಳ ಮಾಡಿಕೊಂಡು ಕಾಳಸಂತೆಯಲ್ಲಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.
ಕೋವಿಡ್ ತಡೆಗಟ್ಟಿರುವ ಸರ್ಕಾರಗಳು ಲಾಕ್‌ಡೌನ್ ಆಗಿದ್ದು, ರಸ್ತೆಯಲ್ಲಿ ಸಾರ್ವಜನಿಕರು ಅಡ್ಡಾಡದಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ಅಗತ್ಯ ಕೆಲಸಗಳಿಗೆ ಹೋಗಬೇಕಾದ ವ್ಯಕ್ತಿಗಳಿಗಷ್ಟೆ ಪಾಸ್ ನೀಡಲಾಗಿದೆ. ಅವರಿಗೆ ಅಧಿಕೃತವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ನೀಡುವಂತೆ ಆದೇಶ ನೀಡಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾದ ಪೊಲೀಸ್ ಇಲಾಖೆ ಪ್ರತಿ ಬಂಕ್‌ಗೂ ಒಬ್ಬರಂತೆ ನೇಮಿಸಿ ಪಾಸ್ ಹೊಂದಿದ್ದವರಿಗೆ ಮಾತ್ರ ಪೆಟ್ರೋಲ್ ಪಡೆಯಲು ಅವಕಾಶ ಕಲ್ಪಿಸಿದ್ದಾರೆ.
ಪೆಟ್ರೋಲ್ ಪಡೆಯಲು ಬಂಕ್‌ಗಳ ಮುಂದೆ ಕಾರ್ಮಿಕರು ಅಂಗಲಾಚುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಪೆಟ್ರೋಲ್‌ಗೆ ಬೇಡಿಕೆ ಹೆಚ್ಚಾಗಿದ್ದು, ಕಾಳಸಂತೆಯಲ್ಲಿ ದುಪ್ಪಟ್ಟು ಹಣ ಕೊಟ್ಟು ಪೆಟ್ರೋಲ್ ಪಡೆದುಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ. ಕಾಳಸಂತೆಯಲ್ಲಿ ಪೆಟ್ರೋಲ್ ಮಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಲೀಟರ್‌ಗೆ 130 ರೂ.: ಪಟ್ಟಣದ ಕೆಲ ಬಂಕ್ ಮಾಲೀಕರು ಗ್ರಾಮೀಣ ಪ್ರದೇಶದ ಕೆಲ ಯುವಕರಿಗೆ ಕಮಿಷನ್ ನೀಡುವ ಭರವಸೆ ನೀಡಿ ರಾತ್ರೋರಾತ್ರಿ ಬಂಕ್‌ನಿಂದ ಪೆಟ್ರೋಲ್‌ನ್ನು ಕ್ಯಾನ್‌ಗಳಿಗೆ ತುಂಬಿಸಿ ಕಾಳಸಂತೆಯಲ್ಲಿ ಪ್ರತಿ ಲೀಟರ್‌ಗೆ 120ರಿಂದ 130 ರವರೆಗೂ ಮಾರಾಟ ಮಾಡಿಸುವ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ರೈತರು ದಿನನಿತ್ಯದ ಕೆಲಸಗಳಿಗೆ,
ಗೊಬ್ಬರ ಸಾಗಣೆಗೆ, ಜಾನುವಾರುಗಳಿಗೆ ಮೇವು ತರುವುದು ಇತ್ಯಾದಿ ಕೆಲಸಕ್ಕೆ ಬೈಕ್ ಓಡಿಸಲೇಕಾದ ಅನಿವಾರ್ಯತೆ ಇದೆ. ಹಾಗಾಗಿ ಪೆಟ್ರೋಲ್‌ಗೆ ದುಪ್ಪಟ್ಟು ಹಣ ನೀಡಿ ಕೊಂಡುಕೊಳ್ಳುವಂತಾಗಿದೆ.