ದೊಡ್ಡಬಳ್ಳಾಪುರ: ನಗರದ ಗಗನಾರ್ಯಸ್ವಾಮಿ ಮಠದ ಕಲ್ಯಾಣಿ ಸೇರಿದಂತೆ ಕಲ್ಯಾಣಿಗಳಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡದಂತೆ ನಗರಸಭೆಗೆ ಸೂಚನೆ ನೀಡಬೇಕು ಎಂದು ಪರಿಸರ ಸಿರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ನೇತೃತ್ವದ ತಂಡ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದಲ್ಲಿ ಅತ್ಯಂತ ಪುರಾತನ ಹಾಗೂ ಸುಂದರ ಕಲ್ಯಾಣಿಗಳಲ್ಲಿ ಒಂದಾಗಿರುವ ಗಗನಾರ್ಯ ಮಠದ ಕಲ್ಯಾಣಿಯಲ್ಲಿ ಗಣೇಶನಮೂರ್ತಿಗಳನ್ನು ವಿಸರ್ಜನೆ ಮಾಡುವ ಸಾಧ್ಯತೆಗಳಿವೆ. ಇದರಿಂದಾಗಿ ಕಲ್ಯಾಣಿಯಲ್ಲಿ ಮಣ್ಣು ಹಾಗೂ ವಿಸರ್ಜನೆಗೆ ಬಳಸುವ ಪೂಜಾ ಸಾಮಗ್ರಿ, ಪ್ಲಾಸ್ಟಿಕ್‌ನಿಂದ ನೀರು ಮಲೀನ ಮತ್ತು ಹೂಳು ತುಂಬುತ್ತದೆ. ಇತ್ತೀಚೆಗಷ್ಟೇ ಶ್ರಮದಾನದಿಂದ ಕಲ್ಯಾಣಿ ಹೂಳು ತೆಗೆಯಲಾಗಿದೆ.
ನಗರದಲ್ಲಿನ ಸಾಂಪ್ರದಾಯಿಕ ಜಲಮೂಲವಾಗಿರುವ ಕಲ್ಯಾಣಿ ಹಾಳಾಗಲು ಅವಕಾಶ ನೀಡಬಾರದು. ಗಣೇಶ ಮೂರ್ತಿ ವಿಸರ್ಜನೆಗೆ ಬೇರೆ ಸ್ಥಳ ಗುರುತಿಸಬೇಕು. ಗಗನಾರ್ಯ ಮಠದ ಕಲ್ಯಾಣಿ ಸೇರಿದಂತೆ ನಗರದಲ್ಲಿನ ಯಾವುದೇ ಕಲ್ಯಾಣಿಯಲ್ಲೂ ಗಣೇಶನ ಮೂರ್ತಿ ವಿಸರ್ಜನೆ ಮಾಡದಂತೆ ಕ್ರಮಕೈಗೊಳ್ಳಬೇಕು ಎಂದರು. ಗಣೇಶ ಹಬ್ಬದ ಪ್ರಾರಂಭಕ್ಕೂ ಮುನ್ನವೇ ಗಣೇಶಮೂರ್ತಿಗಳ ತಯಾರಿ ಪ್ರಾರಂಭವಾಗಿದೆ.
ಗಣೇಶನ ಮೂರ್ತಿಗಳನ್ನು ತಯಾರಿ ಮಾಡುವ ಪ್ರತಿ ಸ್ಥಳಕ್ಕೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಸಾಧ್ಯವಾದಷ್ಟು ಬಣ್ಣ ಬಳಸದೆ ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸುವಂತೆ ಮನವೊಲಿಸಬೇಕು. ಬಣ್ಣದ ಹಾಗೂ ಪಿಒಪಿ ಗಣೇಶನ ಮೂರ್ತಿ ತಯಾರಿಸದಂತೆ ಮತ್ತು ಸಾರ್ವಜನಿಕರು ಸಹ ಇಂತಹ ಮೂರ್ತಿಗಳನ್ನು ಬಳಸುವುದರಿಂದ ಪರಿಸರ ಮೇಲೆ ಆಗುತ್ತಿರುವ ಹಾನಿಯ ಕುರಿತಂತೆ ಪ್ರಚಾರ ಕೈಗೋಳ್ಳಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎಸ್. ಕರೀಗೌಡ, ಸಾಧ್ಯವಾದಷ್ಟು ಪರಿಸರ ಸ್ನೇಹಿ ಗಣೇಶನಮೂರ್ತಿಗಳನ್ನು ತಯಾರಿಸುವಂತೆ, ಪಿಒಪಿ ಮೂರ್ತಿಗಳನ್ನು ತಯಾರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ, ಗ್ರಾಪಂ ಹಾಗೂ ನಗರಸಭೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಗಣೇಶ ಮೂರ್ತಿ ತಯಾರಿಸುವ ಮುನ್ನ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪರಿಸರಕ್ಕೆ ಹಾನಿಯುಂಟು ಮಾಡುವ ಬಣ್ಣಗಳನ್ನು ಬಳಸಿದರೆ ಕ್ರಮ ಕೈಗೊಳ್ಳುವಂತೆಯು ಸೂಚಿಸಲಾಗಿದೆ ಎಂದರು.