ಕುಷ್ಟಗಿ: ಸೀಮಿತ ಅವಧಿಯಲ್ಲಿ ಸೇವೆ ಮಾಡುವ ಶಾಸಕರಿಗೆ, ಸಂಸದರಿಗೆ ಪಿಂಚಣಿ ವ್ಯವಸ್ಥೆ ಇದೆ. ಆದರೆ ಸರ್ಕಾರದ ಭಾಗವಾಗಿ 30-40 ವರ್ಷಗಳ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ನಿಶ್ಚಿತ ಪಿಂಚಣಿ ಯಾಕಿಲ್ಲ ಎಂದು ಎನ್ ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಿವರಾಮು ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರ ಸಂಘದ ‘ನಿಶ್ಚಿತ ಪಿಂಚಣಿ ನಮ್ಮ ಹಕ್ಕು’ ಘೋಷಣೆಯೊಂದಿಗೆ ವಿಜಯ ಸಂಕಲ್ಪ ಯಾತ್ರೆ ಕುಷ್ಟಗಿಗೆ ಆಗಮಿಸಿದ ಸಂದರ್ಭದಲ್ಲಿ ಎನ್ ಪಿಎಸ್ ನೌಕರರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡಿದರು.
ಸೇವೆಯಲ್ಲಿರುವ ಎನ್ ಪಿಎಸ್ ನೌಕರರ ಜೀವನ ಸಂಧ್ಯಾ ಕಾಲದ ಬೇಡಿಕೆಯಾಗಿದ್ದು, ಜೀವನದ ಕೊನೆಯ ಘಟ್ಟದಲ್ಲಿ ಗೌರವಯುತವಾಗಿ ಬದುಕಲು ಸಹಾಯವಾಗಲಿದೆ. ಎನ್. ಪಿ.ಎಸ್. ಅನಾನುಕೂಲದ ಹಿನ್ನೆಲೆಯಲ್ಲಿ ರಾಜಸ್ಥಾನ, ಛತ್ತೀಸ್ ಘಡ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಎನ್‌ಪಿಎಸ್ ರದ್ದು ಪಡಿಸಿವೆ.
ಅದೇ ಮಾದರಿ ಕರ್ನಾಟಕದಲ್ಲಿಯೂ ಎನ್‌ಪಿಎಸ್ ಯಾಕೆ ರದ್ದುಗೊಳಿಸಿಲ್ಲ? ಎನ್ ಪಿಎಸ್ ನೌಕರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮು ಪ್ರಶ್ನಿಸಿದರು. ಇದು ಸರ್ಕಾರಕ್ಕೆ ಅಂತಿಮ ಗಡವು, ಮಾಡು ಇಲ್ಲವೇ ಮಡಿ ಹೋರಾಟವಾಗಿದೆ ಎಂದರು.
ಸರ್ಕಾರಿ ನೌಕರರ ನಿವೃತ್ತಿ ಜೀವನವನ್ನು ಅಭದ್ರತೆಗೆ ತಳ್ಳುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವಂತೆ ಸರ್ಕಾರಿ ನೌಕರರು ಬೀದಿಗೆ ಇಳಿದಿದ್ದೇವೆ. ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅವಿರತ ಹೋರಾಟ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಶಾಂತರಾಮು ತಿಳಿಸಿದರು.
ಎನ್ ಪಿಎಸ್ ನೌಕರರ ಹೋರಾಟ ಬೆಂಬಲಿಸಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಎನ್ ಪಿಎಸ್ ನೌಕರರ ಈ ಬೇಡಿಕೆ ನ್ಯಾಯಯುತವಾಗಿದೆ. ಈ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.
ಪ್ರಧಾನ ಕಾರ್ಯದರ್ಶಿ ನಾಗನಗೌಡ, ಕುಷ್ಟಗಿ ತಾಲೂಕು ನೌಕರ ಸಂಘದ ಅಧ್ಯಕ್ಷ ಬಾಲಜ್ಜ ಬಳಿಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ಕುಷ್ಟಗಿ ತಾಲೂಕು ಅಧ್ಯಕ್ಷ ಶರಣಪ್ಪ ವಡ್ಡರ, ಉಪಾಧ್ಯಕ್ಷ ಬಸವರಾಜ ಸಂಕನಾಳ, ರುದ್ರೇಶ್ ಬೂದಿಹಾಳ ಶಿವಪ್ಪ ವಾಗ್ಮೋರೆ ಶರಣಪ್ಪ, ಭರಮಪ್ಪ ಪರಸಪೂರ್ ಶಂಕರ್ ಉಪ್ಪಾರ್ ಶರಣಗೌಡ ಸೇರಿದಂತೆ ಕಂದಾಯ, ಜೆಸ್ಕಾಂ, ಪಂಚಾಯತ್ ರಾಜ್ ನೌಕರರು ಹಾಜರಿದ್ದರು.