ಬೆಂಗಳೂರು: ಕ್ರಿಮಿನಲ್ ಪ್ರಕರಣಗಳಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಪೊಲೀಸ್ ವರದಿ ಸಲ್ಲಿಸುವ ಮುಂಚೆ ದೂರುದಾರರು ಅಥವಾ ಮಾಹಿತಿದಾರರಿಗೆ ವರದಿಯ ಪ್ರತಿ ಒದಗಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಹೈಕೋರ್ಟ್ 50 ಸಾವಿರ ರೂ. ದಂಡ ವಿಧಿಸಿದೆ.
ಈ ಕುರಿತು ವಕೀಲ ಅಮರ್ ಕೊರಿಯಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಇದೊಂದು ವಿವೇಚನಾರಹಿತ ಅರ್ಜಿಯಾಗಿದೆ. ಇದರಿಂದ, ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿ, ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿತು. ಅಷ್ಟೇ ಅಲ್ಲದೆ, ದಂಡದ ಮೊತ್ತವನ್ನು ಒಂದು ತಿಂಗಳಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕೆಂದು ಆದೇಶಿಸಿತು.
ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಕ್ಕೂ ಮೊದಲೇ ದೂರುದಾರರು ಅಥವಾ ಮಾಹಿತಿದಾರರಿಗೆ ಪೊಲೀಸ್ ವರದಿಯ ಪ್ರತಿ ನೀಡಬೇಕು ಎಂದು ಕಾನೂನು ಹೇಳುವುದಿಲ್ಲ. ಆದ್ದರಿಂದ, ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಜತೆಗೆ,ದೂರುದಾರರು ಅಥವಾ ಮಾಹಿತಿದಾರರು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದರೂ ಪೊಲೀಸ್ ವರದಿಯ ಪ್ರತಿ ನೀಡಿಲ್ಲ ಎಂಬುದನ್ನು ತೋರಿಸಲು ಅರ್ಜಿದಾರರು ಯಾವುದೇ ದಾಖಲೆಗಳನ್ನೂ ಒದಗಿಸಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.