Advertisement

ತುಳು ಸಂಶೋಧಕ ಪ್ರೊ|ಪೀಟರ್‌ ಜೆ. ಕ್ಲಾಸ್‌ ನಿಧನ

04:52 AM Dec 31, 2018 | Team Udayavani |

ಮಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾ ಸ್ಟೇಟ್‌ ಯೂನಿವರ್ಸಿಟಿ ಹೇವಾರ್ಡ್‌ ಇದರ ಮಾನವ ವಿಜ್ಞಾನ ಪ್ರಾಧ್ಯಾಪಕ ಹಾಗೂ ಜಾನಪದ ವಿದ್ವಾಂಸ, ಕರ್ನಾಟಕದ ಕರಾವಳಿಯಲ್ಲಿ ಮೂರೂವರೆ ದಶಕಗಳ ಕಾಲ ಜನರೊಂದಿಗೆ ಬೆರೆತು ತುಳು ಭಾಷೆಯನ್ನು ಕಲಿತು, ಇಲ್ಲಿನ ಪಾಡನಗಳ ಬಗ್ಗೆ ಅನೇಕ ಲೇಖನ ಹಾಗೂ ಪುಸ್ತಕಗಳನ್ನು ಪ್ರಕಟಿಸಿ ತುಳುಭಾಷೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಅಸಾಧಾರಣ ಕೊಡುಗೆ ನೀಡಿದ ಪ್ರೊ| ಪೀಟರ್‌ ಜೆ. ಕ್ಲಾಸ್‌ (76) ಇನ್ನಿಲ್ಲ. 

Advertisement

ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಡಿ. 28ರಂದು ಕ್ಯಾಲಿಫೋರ್ನಿಯಾದಲ್ಲಿ ನಿಧನ ಹೊಂದಿದರು.  ತುಳು ಸಂಪನ್ಮೂಲ ಹಾಗೂ ಕರಾವಳಿ ಕರ್ನಾಟಕದ ಜನಜೀವನದ ಬಗ್ಗೆ ವಿಶೇಷವಾಗಿ ಅಧ್ಯಯನ ನಡೆಸಿದ್ದ ಅವರು 1970ರಲ್ಲಿ ಡ್ನೂಕ್‌ ವಿವಿಯಿಂದ ಡಾಕ್ಟರೇಟ್‌ ಪಡೆದಿದ್ದರು. 

ಭಾರತ ಪರ್ಯಟನೆ, ಕರಾವಳಿ ಸಂಪರ್ಕ
1967ರಲ್ಲಿ ಸಂಶೋಧಕರಾಗಿ ಅವರು ಭಾರತದ ಪರ್ಯಟನೆ ಕೈಗೊಂಡಿದ್ದರು. ತುಳುನಾಡಿನ ಜನರ ಜೀವನಕ್ರಮ ಹಾಗೂ ಪ್ರಕೃತಿಯ ಚಿತ್ರಣ ಅವರನ್ನು ಆಕರ್ಷಿಸಿತ್ತು. ಸಂಸಾರ ಸಮೇತ ಬಂದಿದ್ದ ಪೀಟರ್‌ ಸಣ್ಣ ಟೇಪ್‌, ಫೋಟೋ ರೀಲ್‌ ಕ್ಯಾಮೆರಾ, ಮೂಕಿ ಚಿತ್ರಣದ ಯಂತ್ರವನ್ನು ತಂದಿದ್ದರು. ಜನಪದೀಯ ಶೋಧನೆ ನಡೆಸುತ್ತ ಬಜಪೆ ಸಮೀಪದ ಕಿನ್ನಿಕಂಬಳದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್‌ ಹೆಗ್ಡೆ ಅವರ ತಂದೆ ಕೆ.ಎಸ್‌. ಹೆಗ್ಡೆ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು. 

1988- 89ರಲ್ಲಿ ಉಡುಪಿಯ ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಜಾನಪದ ಕಮ್ಮಟವನ್ನು ನಡೆಸಿದ್ದರು. ಮಂಗಳೂರು ವಿವಿ ಪ್ರೊಫೆಸರ್‌ 1988ರಲ್ಲಿ ಪೀಟರ್‌ ಅವರು ಫೆಲೋಶಿಪ್‌ಗಾಗಿ ಅರ್ಜಿ ಹಾಕಿ ಮಂಗಳೂರು ವಿವಿಯಲ್ಲಿ 6 ತಿಂಗಳ ಕಾಲ ವಿಸಿಟಿಂಗ್‌ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸಿದ್ದರು. 1991ರಲ್ಲಿ “ಫೋಕ್‌ಲೋರಿಸ್ಟಿಕ್‌ ಆ್ಯಂಡ್‌ ಇಂಡಿಯನ್‌ ಫೋಕ್‌ಲೋರ್‌’ ಕೃತಿಯನ್ನು ಪ್ರಕಟಿಸಿದ್ದರು. 1989-90ರಲ್ಲಿ ಪ್ರೊ| ಬಿ.ಎ. ವಿವೇಕ ರೈ ಮತ್ತು ಪೀಟರ್‌ ಜೆ. ಕ್ಲಾಸ್‌ ಸೇರಿ “ಕರ್ನಾಟಕ ಫೋಕ್‌ಲೋರ್‌ ನ್ಯೂಸ್‌ ಲೆಟರ್‌’ ಎಂಬ ತ್ತೈಮಾಸಿಕ ಪತ್ರಿಕೆಯನ್ನು ನಡೆಸಿದ್ದರು. 

ಪೀಟರ್‌ ಜೆ. ಕ್ಲಾಸ್‌ ಅವರಿಗೆ ಉಡುಪಿಯಲ್ಲಿ ಪ್ರಥಮವಾಗಿ ಹಿರಿಯಡ್ಕದ ಚಂದಯ್ಯ ಹೆಗ್ಗಡೆ ಅವರ ಬಳಿ ಆಶ್ರಯ ಲಭಿಸಿತ್ತು. ಆ ಬಳಿಕ ಡಾ| ಎಲ್‌.ಸಿ. ಸೋನ್ಸ್‌ ಒಡನಾಟ ಸಿಕ್ಕಿತ್ತು. ಯಕ್ಷಗಾನದ ಹಲವು ಆಯಾಮಗಳನ್ನು ತಿಳಿಯಲು ಹಿರಿಯಡಕ ಗೋಪಾಲರಾವ್‌ ಅವರನ್ನು ಆಶ್ರಯಿಸಿದ್ದರು.

Advertisement

ಪ್ರೊ| ಕು.ಶಿ. ಹರಿದಾಸ ಭಟ್ಟ ಅವರ ಮೂಲಕ 1984ರಲ್ಲಿ ಎಸ್‌.ಎ.ಕೃಷ್ಣಯ್ಯ ಜತೆಗೂಡಿ ಹಿರಿಯಡ್ಕದ ಕರ್ಗಿ -ಪಯ್ಯು ಅವರಲ್ಲಿನ ಸಿರಿ ಪಠ್ಯ, ನಂದಳಿಕೆ ಅವಳಿ ಸಹೋದರಿಯರಾದ ಕರ್ಗಿ, ಅವರ ಮಕ್ಕಳು ಆವೇಶದಲ್ಲಿ ಭಾಗಿಯಾಗುತ್ತಿದ್ದ ಪಾತ್ರಿಣಿಯರನ್ನು ಇತ್ಯಾದಿ ಬಹುತೇಕ ಸಿರಿ ಆಲಡೆಗಳನ್ನು ಶೋಧನೆ ನಡೆಸಿದ್ದರು. “ಪೀಟರ್‌ ಜೆ. ಕ್ಲಾಸ್‌ ಅವರಿಗೆ ತುಳು ಭಾಷೆಯ ಬಗ್ಗೆ ಅಪಾರ ಪ್ರೀತಿ. ಅವರ ಅಪ್ರಕಟಿತ ಪಾಡ್ತನಗಳ ಮತ್ತು ಟಿಪ್ಪಣಿಗಳ ಸಂಗ್ರಹ ಬಹಳಷ್ಟಿದೆ. ಅವುಗಳನ್ನು  ಕಲೆ ಹಾಕಿ ಸಂಪುಟವಾಗಿ ಪ್ರಕಟಿಸ ಬೇಕಾಗಿದೆ. ಹಾಗೆಯೇ ಇಂಗ್ಲಿಷ್‌  ಸಮಗ್ರ ಲೇಖನ ಸಂಗ್ರಹವನ್ನು ಹೊರ ತರ ಬೇಕಾಗಿದೆ. ಇದರಿಂದ ತುಳು ಅಧ್ಯಯನಕ್ಕೆ ಸಹಕಾರಿಯಾಗಲಿದೆ’ ಎಂದು ಪ್ರೊ| ಬಿ.ಎ. ವಿವೇಕ ರೈ ಅಭಿಪ್ರಾಯ ಪಟ್ಟಿದ್ದಾರೆ.

ಕರಾವಳಿ ಜತೆ ಸಂಪರ್ಕ
“ಬಂಟರ ಯಾನೆ ನಾಡವರ ಸಮುದಾಯದ ಬಂಧುತ್ವ’ದ ಸಂಶೋಧನೆ ನಡೆಸುವುದಕ್ಕಾಗಿ ಬಂದಿದ್ದ ಪೀಟರ್‌ ಜೆ. ಕ್ಲಾಸ್‌ 2005ರ ವರೆಗೂ ಕರಾವಳಿಯ ಜತೆ ಸಂಪರ್ಕ ಹೊಂದಿದ್ದರು. ತುಳು ಕಲಿತ ಬಳಿಕ ಅವರಿಗೆ ಇಲ್ಲಿನ ಜಾನಪದದ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟಿಕೊಂಡಿತ್ತು. ಹಾಗಾಗಿ ತುಳು ಪಾಡªನಗಳ ಸಂಗ್ರಹದಲ್ಲಿ ತೊಡಗಿದ್ದರು. “ಸಿರಿ ಸಂಧಿ’ ಸಂಗ್ರಹಿಸಿದ್ದರು. ಸಿರಿ ಐತಿಹ್ಯ, ತುಳು ಮೌಖೀಕ ಸಾಹಿತ್ಯ ಮತ್ತು ವಿವಿಧ ಜಾನಪದ ಆಚರಣೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಸರಣಿ ಲೇಖನಗಳನ್ನು ಪ್ರಕಟಿಸಿದ್ದರಲ್ಲದೆ ಪುಸ್ತಕಗಳನ್ನು ಬರೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next