ಫೆಬ್ರವರಿ 14 ರಂದು ಪುಲ್ವಾಮದ ಆವಂತಿಪೋರಾದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿ.ಆರ್.ಪಿ.ಎಫ್. ಜವಾನರು ಸಾಗುತ್ತಿದ್ದ ಬಸ್ಸಿನ ಮೇಲೆ ನಡೆದ ಆತ್ಮಾಹುತಿ ಉಗ್ರ ದಾಳಿಯನ್ನು ಜೈಶ್-ಎ-ಮಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ನಡೆಸಿದ್ದು ಎಂದು ಪಾಕಿಸ್ತಾನದ ಮಾಜೀ ಅಧ್ಯಕ್ಷ ಫರ್ವೇಜ್ ಮುಶ್ರಫ್ ಅವರು ಎಂದು ಒಪ್ಪಿಕೊಂಡಿದ್ದಾರೆ. ಖಾಸಗಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಪಾಕಿಸ್ಥಾನದ ಮಾಜೀ ಅಧ್ಯಕ್ಷ ಫರ್ವೇಜ್ ಅವರು ಈ ಸಂದರ್ಭದಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಮೇಲೆ ಕಿಡಿಕಾರಿದ್ದಾರೆ.
‘ಈ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಮತ್ತು ನಾನಿದನ್ನು ಕಟು ಶಬ್ದಗಳಿಂದ ಖಂಡಿಸುತ್ತೇನೆ. ಜೈಶ್ ಪಡೆಗಳು ನನ್ನ ಮೇಲೆಯೂ ದಾಳಿ ನಡೆಸಿದ್ದವು. ಈಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೂ ಸಹ ಜೈಶ್ ಕುರಿತಾಗಿ ಮೃದು ಧೋರಣೆ ಹೊಂದಿದ್ದಾರೆ ಎಂದು ನನಗನಿಸುವುದಿಲ್ಲ’ ಎಂದು ಮುಶರಫ್ ಅಭಿಪ್ರಾಯಪಟ್ಟರು.
‘ಈ ದಾಳಿಯನ್ನು ನಡೆಸಿದ್ದು ಮೌಲಾನ ಮಸೂದ್, ಇದಕ್ಕೆ ನೇರ ಹೊಣೆ ಜೈಶ್ ಸಂಘಟನೆ ; ಈ ದಾಳಿಗೂ ಪಾಕಿಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ದಯವಿಟ್ಟು ಈ ವಿಷಯದಲ್ಲಿ ಪಾಕಿಸ್ಥಾನ ಸರಕಾರವನ್ನು ದೂಷಿಸಬೇಡಿ’ ಎಂದು ಹೇಳುವ ಮೂಲಕ ಪಾಕ್ ಮಾಜೀ ಅಧ್ಯಕ್ಷ ಪ್ರಧಾನಿ ಇಮ್ರಾನ್ ಖಾನ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಜಂಟಿ ತನಿಖೆ ನಡೆಸುವಂತೆಯೂ ಅವರು ಆಗ್ರಹಿಸಿದ್ದಾರೆ. ಮಾತ್ರವಲ್ಲದೆ ಜೈಶ್ ಸಂಘಟನೆಯನ್ನು ನಿಷೇಧಿಸಬೆಕೆಂದೂ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ದೇಶ ಸದ್ಯ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಲ್ಲಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಲಾರದು ಎಂದು ಮುಶ್ರಫ್ ಅವರು ತನ್ನ ದೇಶವನ್ನು ಸಮರ್ಥಿಸಿಕೊಂಡಿದ್ದಾರೆ.