ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನ ಪೆರ್ವಾಡು ಕಡಪ್ಪುರ ನಾಂಗಿ ಪ್ರದೇಶದಲ್ಲಿ ಕಳೆದ 2016-17ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರದ ಕರಾವಳೀತೀರ ಅಭಿವೃದ್ಧಿ ನಿಧಿ ಯೋಜನೆಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸಮುದ್ರ ಕಿನಾರೆಗೆ ತಡೆಗೋಡೆ ನಿರ್ಮಿಸಲಾಗಿತ್ತು.ಕೊಯಿಪ್ಪಾಡಿ ಮತ್ತು ನಾಂಗಿ ಎಂಬಲ್ಲಿ ಕಳೆದ ವರ್ಷವೇ ಕಡಲ್ಕೊರೆತ ಉಂಟಾಗಿ ಹೆಚ್ಚಿನ ತಡೆಗೋಡೆ ಕಡಲ ಒಡಲು ಸೇರಿತ್ತು.ಅಲ್ಲದೆ ಎರಡು ಮನೆಗಳೂ ಕುಸಿದ್ದವು.
ಇದೀಗ ಪೆರ್ವಾಡು ಕಡಪ್ಪುರದಲ್ಲಿ ಕಡಲ್ಕೊರೆತ ಮುಂದುವರಿಯುತ್ತಿದ್ದು ತಡೆಗೋಡೆ ಸಮುದ್ರ ಪಾಲಾಗುತ್ತಿದೆ.ಸ್ಥಳೀಯ ನಿವಾಸಿಗಳ ತೆಂಗಿನ ತೋಟವಿರುವ ಸ್ಥಳವನ್ನೂ ಸಮುದ್ರ ನುಂಗಲಿದೆ.ಇದೇ ರೀತಿ ಮುಂದುವರಿದಲ್ಲಿ ಕೆಲವೇ ದಿನಗಳಳ್ಲಿ ಕೊಯಿಪ್ಪಾಡಿ ಕೊಪ್ಪಳ ರಸ್ತೆಯನ್ನು ಸಮುದ್ರ ಆಕ್ರಮಿಸಲಿದೆ.ಇದರಿಂದ ಸ್ಥಳೀಯರಿಗೆ ಸಂಪರ್ಕ ರಸ್ತೆ ಇಲ್ಲವಾಗಲಿದೆ.
ರಸ್ತೆಯನ್ನು ಕಡಲ ಅಲೆ ಆಕ್ರಮಿಸಲು ಸುಮಾರು 100-150 ಮೀಟರ್ ಮಾತ್ರ ಬಾಕಿ ಇದೆ.ಆದುದರಿಂದ ಸ್ಥಳೀಯ ನಿವಾಸಿಗಳು ಭಯ ಭೀತರಾಗಿರುವರು.
ಕೊಯಿಪ್ಪಾಡಿ ಕೊಪ್ಪಳ ಕರಾವಳಿಗೆ ಕಳೆದ 10 ವರ್ಷದಲ್ಲಿ ಕೋಟಿಗಟ್ಟಲೆ ನಿಧಿಯಲ್ಲಿ ನಿರ್ಮಿಸಿದ ಸುಮಾರು 3 ಕೀ.ಮಿ.ತಡೆಗೋಡೆ ವರ್ಷಂಪ್ರತಿ ಕುಸಿಯುತ್ತಲೇ ಇದ್ದು ಇನ್ನು ಅಲ್ಪಭಾಗ ಮಾತ್ರ ಬಾಕಿ ಉಳಿದಿದೆ.ಇದೀಗ ಇದನ್ನು ಕೂಡಾ ಸಮುದ್ರ ನುಂಗಲು ಮುಂದಾಗಿದೆ. ಇದರಿಂದಾಗಿ ಈ ಪ್ರದೇಶದ ಅನೇಕ ನಿವಾಸಿಗಳು ಮನೆಯನ್ನು ಕಳೆದುಕೊಂಡು ಅನಾಥರಾಗಲಿರುವರು.
ಪ್ರದೇಶವಾಸಿಗಳು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲವೆಂಬ ಆರೋಪ ಸ್ಥಳೀಯ ನಿವಾಸಿಗಳದು.ನೂತನವಾಗಿ ಆಯ್ಕೆಯಾದ ಲೋಕಸಭಾ ಸದಸ್ಯರು ಈ ಸಮಸ್ಯೆಯತ್ತ ಗಮನ ಹರಿಸಬೇಕೆಂಬ ಅಪೇಕ್ಷೆ ಸಂತ್ರಸ್ತರದು.