Advertisement

ರಾಜ್ಯಮಟ್ಟದ ಅತ್ಯುತ್ತಮ ಸಾವಯವ ಕೃಷಿಕ ಪೆರುವಾಜೆ ಈಶ್ವರ ಭಟ್‌

11:19 AM Jan 05, 2020 | mahesh |

ಹೆಸರು: ಪೆರುವಾಜೆ ಈಶ್ವರ ಭಟ್‌
ಏನು ಕೃಷಿ: ಹೈನುಗಾರಿಕೆ, ಅಡಿಕೆ ಕೃಷಿ
ವಯಸ್ಸು: 70
ಕೃಷಿ ಪ್ರದೇಶ: 7 ಎಕ್ರೆ

Advertisement

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ವಿಟ್ಲ: ವಿಟ್ಲಮುಟ್ನೂರು ಗ್ರಾಮದ ಪೆರುವಾಜೆ ಈಶ್ವರ ಭಟ್‌ ದನ, ಆಡು, ಜೇನು ಸಾಕಣೆ ಮಾಡುವ ರಾಜ್ಯಮಟ್ಟದ ಅತ್ಯುತ್ತಮ ಸಾವಯವ ಕೃಷಿಕರು. ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು. ವಿದ್ಯಾಭ್ಯಾಸ ಎಸೆಸೆಲ್ಸಿ. ದೇಶದಲ್ಲೇ ಮಾತ್ರವಲ್ಲ, ಕೃಷಿಯ ಮೂಲಕವೇ ವಿದೇಶವನ್ನೂ ಸುತ್ತಾಡಿ ಬಂದಿದ್ದಾರೆ. ಆಸ್ಟ್ರೇಲಿಯ, ಸಿಂಗಾಪುರಕ್ಕೆ ಭೇಟಿ ನೀಡಿ, ಮಾಹಿತಿ ಪಡೆದು ಇಲ್ಲಿ ಅಳವಡಿಸಿದ್ದಾರೆ. ಅಡಿಕೆ, ತೆಂಗು, ಬಾಳೆ, ಕೊಕ್ಕೋ, ಕಾಳುಮೆಣಸು ಇತ್ಯಾದಿ ಉಪಬೆಳೆ ಮಾಡಿದರು. ಅಡುಗೆಗೆ ಗೋಬರ್‌ ಗ್ಯಾಸ್‌, ತೋಟಕ್ಕೆ ಸೆಗಣಿ, ಸ್ಲರಿ, ಸೊಪ್ಪು ಗೊಬ್ಬರ ಬಳಸಿದರು. ಈಗ ತೋಟದಲ್ಲಿ 2,000ಕ್ಕೂ ಹೆಚ್ಚು ಅಡಿಕೆ, 150 ತೆಂಗು, 200 ಕಾಳುಮೆಣಸು ಬೆಳೆಯುತ್ತಿದ್ದಾರೆ. ಹಲಸು, ಮಾವು, ಸೀತಾಫಲ, ಚಿಕ್ಕು, ರಾಂಬೂಟಾನ್‌ ಫಲವಸ್ತುಗಳು ಇಲ್ಲಿವೆ. 4 ಕಡೆ ಆಡುಗಳ ಹಟ್ಟಿಗಳಲ್ಲಿ ಒಟ್ಟು 100 ಆಡುಗಳಿವೆ. ಆಡಿನ ಹಿಕ್ಕೆಯ ಗೊಬ್ಬರವೂ ಸಿಗುತ್ತದೆ. ಇವರ ಯಶಸ್ಸು ಹೈನುಗಾರಿಕೆ ಮೂಲಕ. ಈಶ್ವರ ಭಟ್‌ ಆರಂಭದಲ್ಲಿ 3 ದನಗಳ ಮೂಲಕ ಹೈನುಗಾರಿಕೆ ಯಶೋಗಾಥೆ ಆರಂಭಿಸಿದ್ದರು. ಈಗ 30 ದನಗಳಿವೆ. ಅವುಗಳಲ್ಲಿ ಜರ್ಮನ್‌ ಎಚ್‌ಎಫ್‌, ಕೆನಡ ಜರ್ಸಿಗಳಿವೆ. ಹಾಲು ಕರೆಯಲು ಯಂತ್ರ ಬಳಸುತ್ತಾರೆ. ಇಂದಿಗೂ ಪ್ರತಿದಿನ 200 ಲೀ. ಹಾಲು ಸಂಘಕ್ಕೆ ಮಾರಾಟ ಮಾಡುತ್ತಾರೆ. ಹಾಲಿಗೂ ಸೆಗಣಿಗೂ ಮಾರುಕಟ್ಟೆಯಿದೆ.

2 ಎಕ್ರೆಯಲ್ಲಿ ಹುಲ್ಲು
ಗುಡ್ಡದಲ್ಲಿ ಬೃಹತ್‌ ಮಣ್ಣಿನ ಟ್ಯಾಂಕ್‌ ನಿರ್ಮಿಸಿದ್ದಾರೆ. ಇಲ್ಲಿ ನೀರು ತುಂಬುತ್ತದೆ ಮತ್ತು ಇಂಗುತ್ತದೆ. ಆ ನೀರು ತೋಟಕ್ಕೆ ರವಾನೆಯಾಗುತ್ತದೆ. ಐದು ಎಕ್ರೆಯಲ್ಲಿ ಅಡಿಕೆ, ತೆಂಗು ತೋಟವಿದ್ದರೆ, 2 ಎಕ್ರೆ ಭೂಮಿಯಲ್ಲಿ ದನಗಳಿಗಾಗಿ ಹುಲ್ಲು ಬೆಳೆಯುತ್ತಿದ್ದಾರೆ. 2 ವರ್ಷಗಳಿಗೊಮ್ಮೆ ಹುಲ್ಲಿನ ಬುಡ ಬದಲಾವಣೆ ಮಾಡುತ್ತಾರೆ. ಗಮ್‌ಲೆಸ್‌ ಹಲಸು ಇಲ್ಲಿದೆ. ಇವುಗಳ ನಡುವೆಯೇ ಫಲವಸ್ತುಗಳು, ತರಕಾರಿ ಬೆಳೆಯಲಾಗುತ್ತದೆ. 12 ಜೇನಿನ ಪೆಟ್ಟಿಗೆಗಳಿದ್ದು, ಮರ ಗಳಲ್ಲಿಯೂ ಜೇನುಗೂಡು ಅಳವಡಿಸಲಾಗಿದೆ. ನಾಲ್ಕೈದು ಲೀಟರ್‌ ಜೇನು ಸಿಗುತ್ತದೆ.

ಸಂಶೋಧನೆ
ಸೆಗಣಿಯ ಸ್ಲರಿಯಿಂದ ತೋಟದ ಕೃಷಿ ಹೇಗೆ ಮಾಡ ಬಹುದು ಎಂಬುದನ್ನು ತೋರಿಸಿ ಕೊಟ್ಟವರು ಈಶ್ವರ ಭಟ್‌. ದನಗಳ ಆಯ್ಕೆ ಬಗ್ಗೆ ಮಹತ್ವಪೂರ್ಣ ಅಂಶ ಬೆಳಕಿಗೆ ತಂದು ಮಾರ್ಗದರ್ಶನ ಮಾಡುತ್ತಾರೆ. ಆಡು ಸಾಕಣೆಯ ವಿವಿಧ ಮಜಲು ತಿಳಿಸಿ ಕೊಡುತ್ತಾರೆ. ಆಡು ಮರಿಯನ್ನು ತಾಯಿಯಿಂದ 3 ತಿಂಗಳೊಳಗೆ ಬೇರ್ಪಡಿಸಿ, ಗಂಡು-ಹೆಣ್ಣು ಆಡುಗಳನ್ನು ಬೇರ್ಪ ಡಿಸಿ, ಅವುಗಳಲ್ಲಿ ಒಂದೂವರೆ ವರ್ಷ ಆದ ಆಡು ಗಳನ್ನು ವಿಂಗಡಿಸಿ, ಬೇರೆ ಬೇರೆ ಹಟ್ಟಿ ಗಳಲ್ಲಿ ಸಾಕುವುದು ರೂಢಿಯಾಗಿಸಿದ್ದಾರೆ. ಅದು ಫಲಪ್ರದವಾಗಿದೆ.

Advertisement

ಸಂಘಟನೆ
ಈಶ್ವರ ಭಟ್‌ ಅವರು ಕುಂಡಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ ಸ್ಥಾಪಿಸಿ, ಸ್ಥಾಪಕಾಧ್ಯಕ್ಷರಾಗಿ 32 ವರ್ಷಗಳ ಕಾಲ ಸೇವೆ, ಪ್ರಸ್ತುತ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರು, ವಿಟ್ಲ ಲಯನ್ಸ್‌ ಕ್ಲಬ್‌ ಮಾಜಿ ಅಧ್ಯಕ್ಷರು, ಸಮೃದ್ಧಿ ಸಂಘಟನೆಯ ಅಧ್ಯಕ್ಷರು.

ಪ್ರಶಸ್ತಿ-ಸಮ್ಮಾನ
1977ರಲ್ಲಿ ಜಿಲ್ಲಾ ಗ್ರಾಮಾಂತರ ಪ್ರದೇಶದ ಹೈನುಗಾರಿಕೆ ರೂವಾರಿ ಪ್ರಶಸ್ತಿ, 1997-98, 2000-01, 2001-02, 2002-03, 2007-08, 2008-09ರಲ್ಲಿ ಡೈರಿಗೆ ಅತೀ ಹೆಚ್ಚು ಹಾಲು ಸರಬರಾಜು ಮಾಡುವ ಹೈನುಗಾರರಾಗಿ ಪ್ರಶಸ್ತಿ, 2001ರಲ್ಲಿ ರಾಜ್ಯದ ಅತ್ಯುತ್ತಮ ಹೈನುಗಾರ ಪ್ರಶಸ್ತಿ, 2002ರಲ್ಲಿ ಬಂಟ್ವಾಳ ತಾ| ಗಣರಾಜ್ಯೋತ್ಸವ ಸಂದರ್ಭ ಸಮ್ಮಾನ, 2003- 04ರಲ್ಲಿ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ, 2005ರಲ್ಲಿ ವಿಷ್ಣುಮೂರ್ತಿ ಹವ್ಯಾಸಿ ಮಿತ್ರ ಮಂಡಳಿ ವತಿಯಿಂದ ಸಮ್ಮಾನ, 2007ರಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋ.ಯ ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ದ್ವಿತೀಯ, 2007ರಲ್ಲಿ ಪುತ್ತೂರು ಸಿಟಿ ರೋಟರಿ ಕ್ಲಬ್‌ ವತಿಯಿಂದ ಸಮ್ಮಾನ, 2007ರಲ್ಲಿ ಅಖೀಲ ಹವ್ಯಕ ಮಹಾಸಭಾ ವತಿಯಿಂದ ಸಮ್ಮಾನ, 2009ರಲ್ಲಿ ಬೀದರಿನ ಕರ್ನಾಟಕ ಪಶು ವೈದ್ಯಕೀಯ ಪಶು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಯದ ಅತ್ಯುತ್ತಮ ಕೃಷಿಕ ಪ್ರಶಸ್ತಿ, 2010ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಪರಿಷತ್‌ ವತಿಯಿಂದ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನ

ಹೈನುಗಾರಿಕೆ ನನಗೆ ಕೀರ್ತಿ ತಂದಿದೆ
ಅಡಿಕೆ, ತೆಂಗು, ಕಾಳುಮೆಣಸು, ತರಕಾರಿ, ಫಲವಸ್ತುಗಳ ಕೃಷಿಯ ಜತೆ ಹೈನುಗಾರಿಕೆ, ಹುಲ್ಲು ಬೆಳೆ, ಆಡು ಸಾಕಣೆ, ಜೇನು ಸಾಕಣೆ ಇತ್ಯಾದಿ ಮಾಡುತ್ತೇನೆ. ಹೈನುಗಾರಿಕೆ ನನಗೆ ಕೀರ್ತಿ ತಂದಿದೆ. ದೇಶ-ವಿದೇಶ ಸುತ್ತಾಡಿದ್ದೇನೆ. ಜಿಲ್ಲೆಯಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆಯಾಗಿರುವುದನ್ನು ಗಮನಿಸಿ, ಹಾಲು ಒಕ್ಕೂಟವು ಆಸ್ಟ್ರೇಲಿಯ ಪ್ರವಾಸವನ್ನು ಒದಗಿಸಿದೆ. ಹಾಲಿನಲ್ಲಿ ನನಗೆ ವರ್ಷಕ್ಕೆ 22 ಲಕ್ಷ ರೂ. ಆದಾಯ ಬರುತ್ತದೆ. ತೋಟಕ್ಕೆ ಗೊಬ್ಬರ, ಸ್ಲರಿಯನ್ನು ಒದಗಿಸುತ್ತದೆ. ಸಂಪೂರ್ಣವಾಗಿ ಸಾವಯವ ಕೃಷಿಯೇ ಜೀವಾಳ.
-ಪೆರುವಾಜೆ ಈಶ್ವರ ಭಟ್‌ , ಸಾವಯವ ಕೃಷಿಕರು
ಮೊಬೈಲ್‌: 9342233309

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next