ಬೆಳ್ತಂಗಡಿ: ವಿದ್ಯಾರ್ಥಿಗಳ ಚಾರಿತ್ರ್ಯ ನಿರ್ಮಾಣ, ನೈತಿಕ ಶಿಕ್ಷಣ ಅಭ್ಯಸಿಸುವ ಅವಕಾಶವನ್ನು ಸಿದ್ಧವನ ಗುರುಕುಲದಲ್ಲಿ ಕಲ್ಪಿಸಿಕೊಡುತ್ತಿದ್ದೇವೆ. ಅವುಗಳ ಪರಿಪೂರ್ಣ ಮಾಹಿತಿ ಪಡೆದಲ್ಲಿ ಉತ್ತಮ ವ್ಯಕ್ತಿತ್ವ ರೂಪು ಗೊಳ್ಳಲು ಸಾಧ್ಯ.
ಸಿದ್ಧವನದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಒದಗಿಸಲಾಗುತ್ತಿದೆ. ಬದುಕಿನಲ್ಲಿ ಹೊಂದಾಣಿಕೆ ಅನುಸರಿಸಿ, ಅಳವಡಿಸಿಕೊಳ್ಳುವ ಮೂರಂಶದಲ್ಲಿ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡು ಯಶಸ್ವಿ ಯಾಗಬಹುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ, ಸಿದ್ಧವನ ಗುರುಕುಲದ ಗೌರವ ರಾಜ್ಯಪಾಲ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಉಜಿರೆ ಶ್ರೀ ಸಿದ್ಧವನ ಗುರುಕುಲದಲ್ಲಿ ಶನಿವಾರ 2019- 2020ನೇ ಸಾಲಿನ ವಿದ್ಯಾರ್ಥಿ ಸರಕಾರದ ಪ್ರತಿಜ್ಞೆ ಸ್ವೀಕಾರ ಸಮಾರಂಭದಲ್ಲಿ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿ. ಕಾಲೇಜು ಪ್ರಾಂಶುಪಾಲ ಡಾ| ಉದಯಕುಮಾರ್ ಇರ್ವತ್ತೂರು ಮಾತನಾಡಿ, ಬದುಕಿನಲ್ಲಿ ಕಲಿತದ್ದನ್ನು ಮರೆಯಲು ಸಾಧ್ಯವಿಲ್ಲ. ಕಲಿಕೆ ಜೀವನದಲ್ಲಿ ಅನುಭವ ಕೊಡುತ್ತದೆ ಎಂದರು.
ಸಚೇತಕ ಪ್ರೊ| ಎಸ್. ಪ್ರಭಾಕರ್ ಉಪಸ್ಥಿತರಿದ್ದರು. ಗುರುಕುಲದ ಮುಖ್ಯಮಂತ್ರಿ ಶ್ರೇಯಸ್ ಗೌಡ ವರದಿ ವಾಚಿಸಿದರು. ಗುರುಕುಲದ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ, ವಿಪಕ್ಷದ ನಾಯಕರು, ಸಭಾಪತಿ ಉಲ್ಲಾಸ್ ಗೌಡ ಉಪಸ್ಥಿತರಿದ್ದರು.
ಗುರುಕುಲದ ಪ್ರಧಾನ ಪಾಲಕ ಡಾ| ಬಿ. ಯಶೋವರ್ಮ ಸ್ವಾಗತಿಸಿ, ಪ್ರಸ್ತಾವಿಸಿದರು. ಡಾ| ಬಿ.ಎ. ಕುಮಾರ್ ಹೆಗ್ಡೆ ವಂದಿಸಿ, ಉಪನ್ಯಾಸಕ ಡಾ| ಬಿ.ಪಿ. ಸಂಪತ್ ಕುಮಾರ್ ನಿರೂಪಿಸಿದರು.
ಮಂಜಯ್ಯ ಹೆಗ್ಗಡೆ ಪುತ್ಥಳಿಗೆ ಮಾಲಾರ್ಪಣೆ
ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರ ಪುತ್ಥಳಿಗೆ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾಲಾರ್ಪಣೆ ಮಾಡಿದರು. ವಿದ್ಯಾರ್ಥಿಗಳ ಭಿತ್ತಿಪತ್ರಿಕೆ ಸೌರಭ ಅನಾವರಣಗೊಳಿಸಿ, ಚುನಾಯಿತ ಪ್ರತಿನಿಧಿಗಳಿಗೆ ಗುರುತಿನ ಪತ್ರ ನೀಡಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸರಕಾರದ ಆಡಳಿತ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.