Advertisement

ಡ್ರಗ್ಸ್‌ ಮಾಫಿಯಾ ವಿರುದ್ಧ ಗೃಹ ಇಲಾಖೆಯಿಂದ ನಿರಂತರ ಸಮರ

10:01 AM Nov 07, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್‌ ಮಾರಾಟ ದಂಧೆಯನ್ನು ಮಟ್ಟ ಹಾಕಲು ಅಗತ್ಯ ಕ್ರಮ, ಜನರಿಂದ ಹಣ ಸಂಗ್ರಹಿಸಿ ವಂಚನೆ ಮಾಡುವ ಕಂಪೆನಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಹೊಸ ಕಾನೂನು, ಸೈಬರ್‌ ಅಪರಾಧ ಪತ್ತೆಗೆ ರಾಜ್ಯದ ಪೊಲೀಸರಿಗೆ ಅಗತ್ಯ ತರಬೇತಿ…

Advertisement

ಇವಿಷ್ಟು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ ಮಾತುಗಳು… ಉದಯವಾಣಿ ಕಚೇರಿಯಲ್ಲಿ ನಡೆದ “ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೃಹ ಸಚಿವರು, ಡ್ರಗ್ಸ್‌ ಮಾಫಿಯಾ ಸಹಿತ ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವಿದೇಶೀ ಪ್ರಜೆಗಳ ಬಗ್ಗೆ ನಿಗಾ ಇಡಲಾಗಿದೆ. ಆಯಾ ದೇಶಗಳ ರಾಯಭಾರಿ ಕಚೇರಿಗಳ ಮೂಲಕ ಅಂಥವರನ್ನು ಮತ್ತೆ ಅವರ ಮಾತೃದೇಶಗಳಿಗೆ ಕಳುಹಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಎನ್‌ಆರ್‌ಸಿ ವಿಚಾರದಲ್ಲಿ ಸರಕಾರದ ನಿಲುವು, ಔರಾದ್ಕರ್‌ ಸಮಿತಿ ವರದಿಯ ಜಾರಿ ಮತ್ತಿತರ ವಿಷಯ ಗಳ ಬಗ್ಗೆಯೂ ಸಚಿವರು ಬೆಳಕು ಚೆಲ್ಲಿದರು. ತಮ್ಮ ಇಲಾಖೆಯ ಯೋಜನೆಗಳು, ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು, ಅಪರಾಧ ನಿಯಂತ್ರಣಕ್ಕೆ ಇಲಾಖೆಯ ಮಾರ್ಗೋಪಾಯಗಳ ಬಗ್ಗೆ ವಿವರವಾಗಿ ಹೇಳಿದರು.  ಜತೆಗೆ, ಉದಯವಾಣಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಪತ್ರಿಕೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಡ್ರಗ್ಸ್‌ ಮಾಫಿಯಾ ವಿರುದ್ಧ ಶೂನ್ಯ ಸೈರಣೆ
ರಾಜ್ಯದಲ್ಲಿ ಹೊರ ರಾಜ್ಯ ಹಾಗೂ ದೇಶಗಳಿಂದ ಡ್ರಗ್ಸ್‌ ಮಾಫಿಯಾ ಕಾರ್ಯ ನಿರ್ವಹಿಸುತ್ತಿದ್ದು, ಈ ವಿಷಯದಲ್ಲಿ ಶೂನ್ಯ ಸೈರಣೆ ಪಾಲಿಸಲು ನಿರ್ಧ ರಿಸಲಾಗಿದ್ದು, ಅಧಿಕಾರಿಗಳಿಗೆ ಎಚ್ಚರಿಕೆ ನೀಡ ಲಾಗಿದೆ. ಡ್ರಗ್ಸ್‌ ಮಾಫಿಯಾದಲ್ಲಿ ಯಾವುದೇ ಅಧಿ ಕಾರಿ ಶಾಮೀಲಾಗಿರುವ ಮಾಹಿತಿ ದೊರೆತರೆ 24 ಗಂಟೆಗಳಲ್ಲಿ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಡ್ರಗ್ಸ್‌ ಮಾಫಿಯಾ ಹೆಚ್ಚಾಗುತ್ತಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು.

Advertisement

ಪೊಲೀಸ್‌ ತರಬೇತಿ ವಿನಿಮಯ
ರಾಜ್ಯದ ಪೊಲೀಸರಿಗೆ ಸೈಬರ್‌ ಕ್ರೈಮ್‌ ವಿಚಾರದಲ್ಲಿ ತತ್‌ಕ್ಷಣವೇ ಕ್ರಮ ಕೈಗೊಳ್ಳುವ ಕುರಿತು ಹೆಚ್ಚಿನ ತರಬೇತಿಯ ಅಗತ್ಯವಿದ್ದು, ಟ್ರಾಫಿಕ್‌ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಕೊಡಿಸಲು ತೀರ್ಮಾನ ಮಾಡಲಾಗಿದ್ದು, ಬೆಲ್ಜಿಯಂ ಹಾಗೂ ಪೋಲೆಂಡ್‌ ಜತೆಗೆ ತಂತ್ರಜ್ಞಾನ ಹಾಗೂ ತರಬೇತಿ ವಿನಿಮಯ ಮಾಡಿಕೊಳ್ಳಲು ಮಾತುಕತೆ ನಡೆದಿದೆ.

ವಂಚಕ ಸಂಸ್ಥೆಗಳ ವಿರುದ್ಧ ಕಾನೂನು
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಣ ಪಡೆದು ವಂಚಿಸುತ್ತಿರುವ ಕಂಪೆನಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಗೃಹ ಇಲಾಖೆಯಿಂದ ಕಾನೂನು ರೂಪಿಸಲು ನಿರ್ಧರಿಸಲಾಗಿದೆ.

ನಕ್ಸಲ್‌ ಚಟುವಟಿಕೆಗೆ ತಡೆ
ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದೇವೆ. ಹೀಗಿದ್ದೂ ನಕ್ಸಲ್‌ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿರಂತರ ಶೋಧ ಹಾಗೂ ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಗೃಹ ಸಚಿವರು ತಿಳಿಸಿದರು.

ಚಿಕ್ಕಮಗಳೂರಿನವರು
ಇತ್ತೀಚೆಗೆ ಕೇರಳದಲ್ಲಿ ನಡೆದ ಪೊಲೀಸ್‌ ಕಾರ್ಯಚರಣೆಯಲ್ಲಿ ಕರ್ನಾಟಕದ ಇಬ್ಬರು ನಕ್ಸಲರು ಸತ್ತಿರುವುದು ವಿವಿಧ ಮೂಲಗಳಿಂದ ದೃಢಪಟ್ಟಿದೆ. ಅವರು ಕರ್ನಾಟಕದವರೇ ಎನ್ನುವುದಕ್ಕೆ ಹಲವು ದಾಖಲೆಗಳು ಲಭ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧವಾಗುತ್ತಿದೆ. ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳ ಅಭಿವೃದ್ಧಿಯನ್ನು ಮೂಲವಾಗಿಟ್ಟುಕೊಂಡು ಹಲವು ಯೋಜನೆಗಳನ್ನು ಜಾರಿಗೆ ತರಲಿದ್ದೇವೆ. ಸಿಆರ್‌ಝಡ್‌ ವ್ಯಾಪ್ತಿಯನ್ನು 50 ಮೀಟರ್‌ಗೆ ವಿಸ್ತರಿಸಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದೆ. ಜಿಲ್ಲೆಯಲ್ಲಿ ವಿವಿಧ ಫಿಶ್‌ಮಿಲ್‌ ಸಹಿತವಾಗಿ ಕರಾವಳಿ ಪ್ರದೇಶಕ್ಕೆ ಹೊಂದಿಕೊಳ್ಳಬಲ್ಲ ಪರಿಸರಸ್ನೇಹಿ ಕೈಗಾರಿಕೆಗಳನ್ನು ವಿವಿಧ ಆಯಾಮಗಳಲ್ಲಿ ಸ್ಥಾಪಿಸಲು ತೀರ್ಮಾನಿಸಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.

ಕರಾವಳಿ ಕಾವಲು ಪಡೆಗೆ ಬಲ
ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಕರಾವಳಿ ಕಾವಲು ಪಡೆಗೆ ಇನ್ನಷ್ಟು ಬಲ ತುಂಬಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಪೊಲೀಸ್‌ ಪಡೆಗೆ ಅಗತ್ಯ ಮೂಲ ಸೌಕರ್ಯಗಳಾದ ಆಧುನಿಕ ಬೋಟ್‌, ಅಗತ್ಯ ಶಸ್ತ್ರಾಸ್ತ್ರ ಹಾಗೂ ಇತರ ಸೌಲಭ್ಯ ನೀಡಲು 20 ಕೋ. ರೂ. ಸಚಿವ ಸಂಪುಟದಿಂದ ಮಂಜೂರಾಗಿದೆ ಎಂದರು ಬೊಮ್ಮಾಯಿ.

Advertisement

Udayavani is now on Telegram. Click here to join our channel and stay updated with the latest news.

Next