ಹುಬ್ಬಳ್ಳಿ: ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆ, ಕಠಿಣ ಪರಿಶ್ರಮ, ತಾಳ್ಮೆ ಮುಖ್ಯ. ಅಂದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವೆಂದು ಹೈಕೋರ್ಟ್ ಧಾರವಾಡ ಪೀಠದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ ಹೇಳಿದರು. ನವನಗರದ ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ಹಮ್ಮಿಕೊಂಡ 7ನೇ ರಾಜ್ಯಮಟ್ಟದ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ-2019 ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ವಕೀಲ ವೃತ್ತಿ ಮಾಡಲು ಕಲ್ಪಿತ ನ್ಯಾಯಾಲಯದಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಕಾನೂನು ಕಲಿಕೆಯ ನಂತರ ವಿದ್ಯಾರ್ಥಿಗಳು ವೃತ್ತಿ ಪ್ರಾರಂಭಿಸುವ ಮೊದಲು ಯಾವ ವೃತ್ತಿ ಆರಂಭಿಸಬೇಕು ಎನ್ನುವಂತಹ ನೂರಾರು ಪ್ರಶ್ನೆಗಳು ಕಾಡುವುದು ಸಹಜ. ಆದರೆ ವಿದ್ಯಾರ್ಥಿಗಳು ಇತರೆ ಉದ್ಯೋಗಗಳನ್ನು ಅರಸಿ ಹೋಗದೆ ವಕೀಲ ವೃತ್ತಿ ಮೇಲೆ ಹೆಚ್ಚು ಒಲವು ತೋರಬೇಕು ಎಂದರು.
ಹೈಕೋರ್ಟ್ ಧಾರವಾಡ ಪೀಠದ ನ್ಯಾಯಮೂರ್ತಿ ಪಿ.ಜಿ.ಎಂ. ಪಾಟೀಲ ಮಾತನಾಡಿ, ಹಿಂದಿನಗಿಂತಲೂ ಪ್ರಸ್ತುತದಲ್ಲಿ ಕಾನೂನು ಕಲಿಕೆಗೆ ಅನೇಕ ಸೌಲಭ್ಯಗಳು ಲಭ್ಯವಿವೆ. ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳಿಂದ ಮತ್ತು ಕಠಿಣ ಪರಿಶ್ರಮದಿಂದ ಉತ್ತಮ ವಕೀಲರಾಗಬೇಕು. ಕಲ್ಪಿತ ನ್ಯಾಯಾಲಯಗಳಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ವಾಕ್‌ಚಾತುರ್ಯ, ವಾದ ಮಂಡಿಸುವ ಕೌಶಲ ಮತ್ತು ವಾದಿಸುವ ಕಲೆ ಇನ್ನಷ್ಟು ಚುರುಕುಗೊಳಿಸುತ್ತವೆ ಎಂದು ಹೇಳಿದರು.
ಕಾನೂನು ವಿವಿ ಕುಲಪತಿ ಡಾ| ಪಿ. ಈಶ್ವರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರಿವು ಮತ್ತು ತಿಳಿವು ವಕೀಲನಲ್ಲಿರಬೇಕಾದ ಅವಶ್ಯಕ ಅಂಶ. ಭಾಷೆಯ ಮೇಲಿನ ಹಿಡಿತ, ವಿಷಯದ ಸಂಪೂರ್ಣ ತಿಳಿವಳಿಕೆ ಅವನನ್ನು ನಿಶ್ಚಿತ ಗುರಿ ತಲುಪುವಲ್ಲಿ ಸಹಾಯ ಮಾಡುತ್ತದೆ ಎಂದರು. ಕಾನೂನು ವಿವಿ ಕುಲಸಚಿವ ಆರ್. ರವಿಶಂಕರ ಅವರು “ಆನರ್ ಕಿಲ್ಲಿಂಗ್’ ವಿಷಯದ ಮೇಲೆ ಸಂಶೋಧನಾ ಪತ್ರ ಮಂಡಿಸಿ, ವಿಶೇಷ ಉಪನ್ಯಾಸ ನೀಡಿದರು. ಡೀನ್ ಮತ್ತು ನಿರ್ದೇಶಕ ಡಾ| ಸಿ. ಎಸ್. ಪಾಟೀಲ ಮೊದಲಾದವರಿದ್ದರು. ಮೌಲ್ಯಮಾಪನ ಪ್ರಭಾರ ಕುಲಸಚಿವ ಡಾ| ಜಿ.ಬಿ. ಪಾಟೀಲ ವಂದಿಸಿದರು.