ಬೆಂಗಳೂರು: ಸಿನಿಮಾಗಳಲ್ಲಿ ಹೇಗೆ ಬೇಕೋ ಹಾಗೆ ರಾಷ್ಟ್ರಧ್ವಜವನ್ನು ಬಳಕೆ ಮಾಡುವಂತಿಲ್ಲ. ಬಳಸುವ ಮುನ್ನ, ಸಂಬಂಧಿಸಿದ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಇಲ್ಲವಾದರೆ, ಮೂರು ವರ್ಷ ಜೈಲು! ಹೌದು, ಸುಪ್ರೀಂಕೋರ್ಟ್ ಇಂಥದ್ದೊಂದು ಆದೇಶ ಹೊರಡಿಸಿದೆ. ಡಿಸೆಂಬರ್ 2016ರಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದ್ದು, ರಾಷ್ಟ್ರಧ್ವಜವನ್ನು ಕಮರ್ಷಿಯಲ್ ಸಿನಿಮಾಗಳಲ್ಲಿ ಹೇಗೆಂದರೆ ಹಾಗೆ, ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ.
ಒಂದು ವೇಳೆ ಬಳಸಿದ್ದೇ ಆದಲ್ಲಿ, ಕಾನೂನು ಪ್ರಕಾರ ಮೂರು ವರ್ಷ ಜೈಲುವಾಸ ಅನುಭವಿಸಬೇಕು. ಈ ಆದೇಶ ಗೊತ್ತಾಗಿದ್ದು, ‘ಮಾಸ್ ಲೀಡರ್’ ಚಿತ್ರದಿಂದ ಎಂದರೆ ನಂಬಬೇಕು.
ಶುಕ್ರವಾರ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ಮಾಸ್ ಲೀಡರ್’ ಚಿತ್ರದಲ್ಲಿ ನಾಲ್ಕು ದೃಶ್ಯಗಳಲ್ಲಿ ರಾಷ್ಟ್ರಧ್ವಜವಿದೆ. ಆದರೆ, ಧ್ವಜವನ್ನು ಬ್ಲರ್ ಮಾಡಲಾಗಿದೆ. ‘ರಾಷ್ಟ್ರಧ್ವಜವನ್ನು ಬ್ಲರ್ ಮಾಡಿದ್ದೇಕೆ’ ಎಂದರೆ ‘ಸುಪ್ರೀಂಕೋರ್ಟ್ ಆದೇಶ ‘ ಎಂಬ ಉತ್ತರ ನಿರ್ಮಾಪಕ ತರುಣ್ ಶಿವಪ್ಪ ಅವರಿಂದ ಬರುತ್ತದೆ.
‘ನಮಗೂ ಈ ವಿಷಯ ಗೊತ್ತಿರಲಿಲ್ಲ. ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಕಳುಹಿಸಿದ್ದ ಸಂದರ್ಭದಲ್ಲಿ, ಸೆನ್ಸಾರ್ ಮಂಡಳಿಯವರು ರಾಷ್ಟ್ರಧ್ವಜವನ್ನು ಮಬ್ಟಾಗಿ ಕಾಣುವಂತೆ ತೋರಿಸಬೇಕು ಎಂದು ಹೇಳಿದರು. ಆಗಲೇ ನಮಗೆ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಗೊತ್ತಾಗಿದ್ದು. ಇನ್ನು ಮುಂದೆ, ಕಮರ್ಷಿಯಲ್ ಸಿನಿಮಾದಲ್ಲಿ ರಾಷ್ಟ್ರಧ್ವಜ ಬಳಕೆ ಮಾಡಬೇಕಾದರೆ, ಮೊದಲು ಸಂಬಂಧಿಸಿದ ಕೇಂದ್ರ ಇಲಾಖೆಯಿಂದ ಪರ್ಮಿಷನ್ ಪಡೆಯಬೇಕು. ಕಥೆಗೆ ರಾಷ್ಟ್ರಧ್ವಜದ ಅಗತ್ಯವಿದೆಯಾ, ಇಲ್ಲವಾ, ಅದು ಎಷ್ಟು ಗಾತ್ರವಿದೆ, ಎಷ್ಟು ಎತ್ತರದಲ್ಲಿದೆ ಎಂಬುದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ನಂತರ ಕೇಂದ್ರ ಇಲಾಖೆಯು ಅನುಮತಿ ನೀಡುತ್ತದಂತೆ. ಈ ಆದೇಶ ಬರುವ ಮುನ್ನವೇ ನಾವು ಚಿತ್ರೀಕರಣ ಮಾಡಿದ್ದೆವು. ಅನುಮತಿ ಇಲ್ಲದ ಕಾರಣ ಬ್ಲರ್ ಮಾಡುವಂತೆ ಸೆನ್ಸಾರ್ ಮಂಡಳಿಯಿಂದ ಸೂಚನೆ ಬಂತು’ ಎನ್ನುತ್ತಾರೆ ತರುಣ್.
‘ನಮಗೆ ಅನುಮತಿ ಪಡೆಯಲು ಸಾಕಷ್ಟು ಸಮಯ ಇರಲಿಲ್ಲ. ಅದಕ್ಕೆ ಒಂದಿಷ್ಟು ಸಮಯ ಬೇಕಿತ್ತು. ಅತ್ತ ಬಿಡುಗಡೆ ದಿನಾಂಕ ಬೇರೆ ನಿಗದಿಯಾಗಿತ್ತು. ಹಾಗಾಗಿ, ಚಿತ್ರದಲ್ಲಿ ನಾಲ್ಕು ಕಡೆ ಬರುವ ರಾಷ್ಟ್ರಧ್ವಜವನ್ನು ಮಬ್ಬು ಕಾಣಿಸುವಂತೆ ಮಾಡಿ, ಬಿಡುಗಡೆ ಮಾಡಲಾಗಿದೆ. ಆ ವಿಷಯ ನಮ್ಮ ಗಮನಕ್ಕೆ ಬಂದಿರಲಿಲ್ಲವಾದ್ದರಿಂದ ಬ್ಲರ್ ಮಾಡಬೇಕಾಯಿತು’ ಎನ್ನುತ್ತಾರೆ ನಿರ್ಮಾಪಕ ತರುಣ್ ಶಿವಪ್ಪ.
ಕನ್ನಡದ ಮಟ್ಟಿಗೆ ‘ಮಾಸ್ ಲೀಡರ್’ ರಾಷ್ಟ್ರಧ್ವಜವನ್ನು ಮಬ್ಬು ಕಾಣುವಂತೆ ಮಾಡಿದ ಮೊದಲ ಚಿತ್ರ. ಈಗ ಧ್ರುವ ಸರ್ಜಾ ಅಭಿನಯದ ‘ಭರ್ಜರಿ’ ಚಿತ್ರದಲ್ಲೂ ರಾಷ್ಟ್ರಧ್ವಜದ ದೃಶ್ಯವನ್ನು ಬಳಸಲಾಗಿದೆ. ಅದಕ್ಕಾಗಿ ಚಿತ್ರತಂಡ ಈಗಾಗಲೇ ಪರ್ಮಿಷನ್‌ಗೆ ಸಂಬಂಧಿಸಿದ ಇಲಾಖೆಗೆ ದಾಖಲೆ ಸಲ್ಲಿಸಲು ಅಣಿಯಾಗುತ್ತಿದೆ.
ಡಿಸೆಂಬರ್ 2016ರಲ್ಲಿ ಸುಪ್ರೀಂಕೋರ್ಟ್‌ನಿಂದ ಆದೇಶ ಬಂದಿದೆ. ಹೀಗಾಗಿ ಸಿನಿಮಾಗಳಲ್ಲಿ ರಾಷ್ಟ್ರಧ್ವಜವನ್ನು ಹೇಗೆ ಬೇಕೋ ಹಾಗೆ ಬಳಸುವಂತಿಲ್ಲ ಒಂದು ವೇಳೆ ಸಿನಿಮಾ ಕತೆಗೆ ಪೂರಕವಾಗಿದ್ದರೆ ಅದಕ್ಕೆ ಸೂಕ್ತ ಅನುಮತಿ ಪಡೆಯಬೇಕು. ರಾಷ್ಟ್ರಧ್ವಜಕ್ಕೆ ವಿಶೇಷ ಸ್ಥಾನಮಾನ ಇದೆ. ಹಾಗಾಗಿ ಸಿನಿಮಾದಲ್ಲಿ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಈ ಚಿತ್ರದಲ್ಲಿ ರಾಷ್ಟ್ರಧ್ವಜ ಬಳಸಿದ್ದರೂ ಅನುಮತಿ ಪಡೆಯಲು ಸಮಯ ಇಲ್ಲವಾದ್ದರಿಂದ ಸೆನ್ಸಾರ್ ಮಂಡಳಿ ಧ್ವಜವನ್ನು ಮಬ್ಟಾಗಿ ಕಾಣುವಂತೆ ಸೂಚಿಸಲಾಗಿತ್ತು.
– ಶ್ರೀನಿವಾಸಪ್ಪ, ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧ್ಯಕ್ಷ