ಬೀದರ: ಜಿಲ್ಲೆಯಲ್ಲಿ ಅನಾಥರು ಮತ್ತು ನಿರ್ಗತಿಕರಿಗೆ ಸಂಘ-ಸಂಸ್ಥೆಗಳ ಸ್ವಯಂ ಸೇವಕರು, ದಾನಿಗಳು ಊಟ, ಉಪಾಹಾರ ನೀಡುವುದನ್ನು ಈ ಕೂಡಲೇ ನಿರ್ಬಂಧಿಸಲಾಗಿದೆ ಎಂದು ಡಿಸಿ ಡಾ.ಎಚ್.ಆರ್. ಮಹಾದೇವ್ ತಿಳಿಸಿದ್ದಾರೆ.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕೋವಿಡ್ 19 ಸೋಂಕು ನಿಯಂತ್ರಣ ಕುರಿತ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಭಿಕ್ಷುಕರಿಗೆ, ಅನಾಥರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ ಪರೀಕ್ಷಿಸಬೇಕಾದ್ದರಿಂದ ವಿವಿಧ ಸಂಘ ಸಂಸ್ಥೆಗಳ ಸೇವಕರು, ದಾನಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡು, ಕಡ್ಡಾಯವಾಗಿ ಅನುಮತಿ ಪಡೆದುಕೊಂಡು ಆಹಾರ ಸರಬರಾಜು ಮಾಡಬೇಕು ಎಂದು ಸೂಚಿಸಿದರು.
ವೈದ್ಯರಿಗೆ ತುರ್ತಾಗಿ ಪರ್ಸ್‌ನಲ್ ಪ್ರೊಟೆಕ್ಷನ್ ಇಕ್ಯೂಪ್‌ಮೆಂಟ್ ಕಿಟ್‌ಗಳು ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಟೆಂಡರ್ ಕರೆದು ಕೂಡಲೇ 2000 ಕಿಟ್‌ಗಳನ್ನು ಖರೀದಿಸಿ ಸರಬರಾಜು ಮಾಡಲಾಗುವುದು ಎಂದು ಬ್ರಿàಮ್ಸ್ ನಿರ್ದೇಕರಿಗೆ ತಿಳಿಸಿದರು.
ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರದ ಕಾರ್ಯಕರ್ತರು, ಗ್ರಾಮದಲ್ಲಿ ಸಂಚರಿಸಿ, ಬಡವರು ಉಪವಾಸ ಉಳಿಯದಂತೆ ನೋಡಿಕೊಂಡು ಗಾಪಂಗೆ ಮಾಹಿತಿ ನೀಡಿ ಊಟದ ವ್ಯವಸ್ಥೆ ನೋಡಿಕೊಳ್ಳಬೇಕೆಂದು ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರಗೆ ಹೇಳಿದರು.
ಎಸ್‌ಪಿ ಡಿ.ಎಲ್.ನಾಗೇಶ, ಅಪರ ಜಿಲ್ಲಾ ಧಿಕಾರಿ ರುದ್ರೇಶ್ ಗಾಳಿ, ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಡಿಎಚ್‌ಒ ಡಾ.ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ, ಡಾ.ಕೃಷ್ಣಾ ರೆಡ್ಡಿ, ಪೌರಾಯುಕ್ತ ಬಸಪ್ಪ, ಆಹಾರ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.