Advertisement

ರೆಡ್‌ಕ್ರಾಸ್‌ ಸಂಸ್ಥೆಗೆ ಕಂದಾಯ ವಸತಿಗೃಹ ಬಳಕೆಗೆ ಅನುಮತಿ

12:03 PM Jun 03, 2018 | Team Udayavani |

ಕಲಬುರಗಿ: ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವ ಹಾಗೆ ರಾಜಾಪುರ ಪ್ರದೇಶದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಪಕ್ಕದಲ್ಲಿರುವ ಕಂದಾಯ ವಸತಿ ಗೃಹ ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದರು.

Advertisement

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ರೆಡ್‌ಕ್ರಾಸ್‌ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯಮಟ್ಟದಲ್ಲಿ ಜಿಲ್ಲಾ ರೆಡ್‌ಕ್ರಾಸ್‌ ಸಂಸ್ಥೆಗೆ ಸತತವಾಗಿ ಮೂರು ವರ್ಷಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರಶಸ್ತಿ ದೊರೆತಿದೆ. ರೆಡ್‌ಕ್ರಾಸ್‌ ಸಂಸ್ಥೆ ಕೈಗೊಳ್ಳುವ ಮಾನವೀಯ ಕಾರ್ಯಕ್ರಮಗಳ ಜೊತೆಗೆ ಯುವ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಲ್ಲಿ ಅನುಕೂಲವಾಗುವುದು. ಈ ನಿಟ್ಟಿನಲ್ಲಿ ಎಲ್ಲ ಕಾಲೇಜುಗಳಲ್ಲಿ ದಾಖಲಾಗುವ ಯುವ ಜನಾಂಗವು ಕಡ್ಡಾಯವಾಗಿ ರೆಡ್‌ ಕ್ರಾಸ್‌ ಸಂಸ್ಥೆ ಸದಸ್ಯತ್ವ ಪಡೆದು ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಆದೇಶ ಹೊರಡಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಯಾವುದೇ ವಿಪತ್ತು ಸಂಭವಿಸಿದಾಗ ಯುವಕರು ಹಾಗೂ ಸಂಘಟನೆಗಳು ನೆರವಿಗೆ ಧಾವಿಸಿದರೆ ದೊಡ್ಡ ವಿಪತ್ತುಗಳನ್ನು ಸಹ ಸುಲಭವಾಗಿ ನಿಭಾಯಿಸಬಹುದಾಗಿದೆ ಎಂದರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ರಾಜ್ಯ ಶಾಖೆಯ ಉಪ ಸಭಾಪತಿ ಅಪ್ಪಾರಾವ ಅಕ್ಕೋಣಿ ಮಾತನಾಡಿ, ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆಗೆ 2017-18ನೇ ಸಾಲಿನಲ್ಲಿ ರಾಜ್ಯದಲ್ಲಿ ಉತ್ತಮ ಸಾಧನೆಗೆ ಪ್ರಥಮ ಬಹುಮಾನ ಲಭಿಸಿದೆ.
2016-17ನೇ ಸಾಲಿನಲ್ಲಿ ಜ್ಯೂನಿಯರ್‌ ರೆಡ್‌ ಕ್ರಾಸ್‌ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಜರಾದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 1680 ಜನರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಕ್ಕಾಗಿ ರಾಜ್ಯದಲ್ಲಿ ಕಲಬುರಗಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ರೆಡ್‌ಕ್ರಾಸ್‌ ಸಂಸ್ಥೆ ವತಿಯಿಂದ ರಕ್ತ ಮತ್ತು ಕಣ್ಣಿನ ಬ್ಯಾಂಕ್‌ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಕಡಿಮೆ ದರದಲ್ಲಿ
ಕನ್ನಡಕಗಳು ದೊರೆಯುವ ಹಾಗೆ ಆಪ್ಟಿಕಲ್‌ ಸೆಂಟರ್‌ ಪ್ರಾರಂಭಿಸುವ ಯೋಜನೆ ಸಹಿತ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಕಲಬುರಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ| ಬಸವರಾಜ ಗುದಗೆ,
ಕಲಬುರಗಿ ತಾಜ್‌ಸುಲ್ತಾನಪುರ ಕೆ.ಎಸ್‌.ಆರ್‌ .ಪಿ. ಕಮಾಂಡೆಂಟ್‌ ಬಸವರಾಜ ಜಿಳ್ಳೆ, ಜಿಲ್ಲಾ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಉಪ ಸಭಾಪತಿ ಅರುಣಕುಮಾರ ಲೋಯಾ, ಗೌರವ ಕೋಶಾಧ್ಯಕ್ಷ ಭಾಗ್ಯಲಕ್ಷ್ಮೀ ಎಂ., ಕಾರ್ಯಕ್ರಮ ಸಂಯೋಜಕ ಸಿದ್ರಾಮಪ್ಪ ಬಮನಾಳಕರ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ರೆಡ್‌ಕ್ರಾಸ್‌ ಸಂಸ್ಥೆಗೆ ರಾಜ್ಯಪಾಲರು ನೀಡಿದ ಪ್ರಥಮ ಬಹುಮಾನದ ಪ್ರಶಸ್ತಿ ಫಲಕವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು. ರೆಡ್‌ಕ್ರಾಸ್‌ ಸಂಸ್ಥೆಯೊಂದಿಗೆ ಉತ್ತಮ ಸೇವೆ ಸಲ್ಲಿಸಿದ ತಾಜ್‌
ಸುಲ್ತಾನಪುರ ಕೆ.ಎಸ್‌.ಆರ್‌.ಪಿ. ಕಮಾಂಡೆಂಟ್‌ ಬಸವರಾಜ ಜಿಳ್ಳೆ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಮಹಾಗಾಂವ ಕ್ರಾಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಜಯಕಿಶನ್‌ ಠಾಕೂರ  ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಪ್ರಥಮ ಚಿಕಿತ್ಸೆ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ನಾಲ್ಕು ಜನ ಚಾಲಕರಿಗೆ ಪ್ರಥಮ ಚಿಕಿತ್ಸೆ ಕಿಟ್‌ ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next