ವಿಧಾನಪರಿಷತ್ತು: ಭ್ರಷ್ಟಚಾರ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೇಲಾಧಿಕಾರಿಗಳ ಮೇಲಾಟಗಳಿಗೆ ಶೀಘ್ರವೇ ಕೊನೆ ಬೀಳಲಿದೆ. ಹೀಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ವೈ.ಎ. ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು, ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಇದ್ದ ಮೇಲಾಧಿಕಾರಿಗಳ ಸಮಿತಿಗಳನ್ನು ಬರ್ಖಾಸ್ತುಗೊಳಿಸಲಾಗುವುದು ಎಂದರು.
ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಮೇಲೆ “ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ದಾಖಲಿಸಿಕೊಂಡ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಆಯಾ ಇಲಾಖೆಯ ಮೇಲಾಧಿಕಾರಿಗಳ ಸಮಿತಿ ಇರುತ್ತದೆ. ತಮ್ಮದೇ ಅಧೀನ ಅಧಿಕಾರಿಗಳು ಅಥವಾ ನೌಕರರು ಆಗಿರುವುದರಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ಸುಲಭವಾಗಿ ನೀಡುತ್ತಿರಲಿಲ್ಲ. ಬಹುತೇಕ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನಿರಾಕರಿಸಿ ಅವರೇ ತೀರ್ಮಾನ ಮಾಡಿಬಿಡುತ್ತಿದ್ದರು.
ಈ ನಿಟ್ಟಿನಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಇರುವ ಸಮಿತಿಗಳನ್ನು ಬರ್ಖಾಸ್ತುಗೊಳಿಸಿ, ಒಂದೊಮ್ಮೆ ಆರೋಪ ಮೇಲ್ನೋಟಕ್ಕೆ ಋಜುವಾತುಗೊಂಡಿದ್ದರೆ ಎಸಿಬಿಯವರೇ ನೇರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ವಿವರಿಸಿದರು.
ಕಳೆದ 5 ವರ್ಷಗಳಲ್ಲಿ ಎಸಿಬಿ 310 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 371 ಸರ್ಕಾರಿ ನೌಕರರು, ಅಧಿಕಾರಿಗಳ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ಪೈಕಿ 63 ಪ್ರಕರಣಗಳಲ್ಲಿ ತನಿಖೆ ಮುಕ್ತಾಯಗೊಂಡಿರುತ್ತದೆ. ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ 223 ಪ್ರಕರಣಗಳಲ್ಲಿ ಎಸಿಬಿ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿಯವರು ಮಾಹಿತಿ ನೀಡಿದರು.