ಕೊಪ್ಪಳ: ಕೆರೆ ಅಭಿವೃದ್ಧಿ, ಸಸಿ ನೆಡುವಿಕೆ ಮುಂತಾದ ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಗ್ರಾಮಗಳಿಗೆ ಶಾಶ್ವತ ನೀರಿನ ಪರಿಹಾರ ಒದಗಿಸಬಹುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಇರುವ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಆರ್ಟ್ ಆಫ್ ಲಿವಿಂಗ್‌ನ ಸಹಭಾಗಿತ್ವದಲ್ಲಿ ಅಂತರ್ಜಲ ಚೇತನ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನರೇಗಾ ಯೋಜನೆಯಡಿ ಅತಿ ಹೆಚ್ಚು ಕಾಮಗಾರಿಗಳು, ಹೆಚ್ಚು ಮಾನವದಿನಗಳ ಸೃಜನೆ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ರಾಜ್ಯದಲ್ಲಿಯೇ ಮೊದಲ ಸ್ಥಾನ, ಯಲಬುರ್ಗಾ ನಾಲ್ಕನೇ ಸ್ಥಾನದಲ್ಲಿ ಇರುವ ಮೂಲಕ ಉತ್ತಮ ಸಾಧನೆ ಮಾಡಿವೆ ಎಂದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಪಡೆಯದೆ ರಾಜ್ಯದಾದ್ಯಂತ ಅಂತರ್ಜಲ ಪುನಶ್ಚೇತನದಂತಹ ಮಹತ್ವದ ಕಾರ್ಯಕ್ಕೆ ಸೂಕ್ತ ರೂಪುರೇಷೆ, ತಾಂತ್ರಿಕ ಸಾಧ್ಯತೆಗಳನ್ನು ಒದಗಿಸಿ ಅಂತರ್ಜಲ ಚೇತನ ಯೋಜನೆಗೆ ಬೆನ್ನೆಲುಬಾಗಿದ್ದಾರೆ. ಜಿಲ್ಲೆಗೆ ಅಗತ್ಯವಿರುವ ಅಂತರ್ಜಲ ಪುನಶ್ಚೇತನಕ್ಕೆ ಬೇಕಾದ ಎಲ್ಲಾ ಸೂಕ್ತ ಸಲಹೆ, ನೆರವನ್ನು ಸಂಸ್ಥೆಯಿಂದ ಪಡೆಯಿರಿ ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ನರೇಗಾದಡಿ ಗ್ರಾಮೀಣರಿಗೆ ಹೆಚ್ಚಿನ ಉದ್ಯೋಗ ಒದಗಿಸುವ ಜೊತೆಗೆ ಗ್ರಾಮಗಳ ರಸ್ತೆ, ಕೆರೆ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲಾಗಿದ್ದು, ಇನ್ನೂ ಹೆಚ್ಚಿನ ಮಾನವ ದಿನಗಳನ್ನು ದೃಷ್ಟಿಸುವುದರ ಮೂಲಕ ರೈತರಗೆ, ಕೂಲಿಕಾರರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ನರೇಗಾದ ಆಯುಕ್ತ ಅನಿರುದ್ಧ ಶ್ರವಣ್, ಆರ್ಟ್ ಆಫ್ ಲಿವಿಂಗ್ ಸಿಇಒ ನಾಗರಾಜ ಗಂಗೊಳ್ಳಿ, ಜಿಪಂ ಅಧ್ಯಕ್ಷ ಎಚ್. ವಿಶ್ವನಾಥ ರೆಡ್ಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಢೆಸೂಗೂರು, ತಾಪಂ ಅಧ್ಯಕ್ಷ ಕೆ. ಬಾಲಚಂದ್ರನ್, ಜಿಪಂ ಸಿಇಒ ರಘುನಂದನ್ ಮೂರ್ತಿ ಸೇರಿ ಇತರರು ಉಪಸ್ಥಿತರಿದ್ದರು.