Advertisement

ಇದುವರೆಗೂ ದೊರೆಯದ ಶಾಶ್ವತ ಪರಿಹಾರ

12:27 PM Sep 12, 2022 | Team Udayavani |

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಮದ್ದುಗುಡ್ಡೆ ವಾರ್ಡ್‌ನಲ್ಲಿ ಉಪ್ಪುನೀರು ಹರಿದು ಬರುವ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ದೊರೆತಿಲ್ಲ. ಜನರ ಸಮಸ್ಯೆಗೆ ಪುರಸಭೆಯೇನೋ ಸ್ಪಂದಿಸಿದೆ. ಆಂಶಿಕ ಪರಿಹಾರವನ್ನೂ ಒದಗಿಸಿದೆ; ಆದರೆ ಪೂರ್ಣ ಪ್ರಮಾಣದ ಪರಿಹಾರ ಕಾಮಗಾರಿ ನಡೆಯದ ಹೊರತು ಪ್ರತೀ ಬಾರಿ ಮಳೆ ಬಂದಾಗಲೂ, ಉಬ್ಬರ ಇಳಿತದ ಸಂದರ್ಭಗಳಲ್ಲೂ ಇಲ್ಲಿ ನೀರಿನ ಸಮಸ್ಯೆಗೆ ಕೊನೆಯಿಲ್ಲ ಎಂದಾಗಿದೆ.

Advertisement

ಪರಿಹಾರ

ರಿಂಗ್‌ ರೋಡ್‌ಗೆ ಟೆಂಡರ್‌ ಆಗಿದೆ. ಮಳೆಗಾಲದ ಬಳಿಕ ಕಾಮಗಾರಿ ಆಗಲಿದೆ. ಮದ್ದುಗುಡ್ಡೆಯಲ್ಲಿ ಪ್ರಕಾಶ್‌ ಸಾ ಮಿಲ್‌ ಬಳಿ ಎಡ ಬಲ ಎರಡೂ ಕಡೆ ಉಪ್ಪುನೀರು ಬರುವ ಜಾಗ. ಆದ್ದರಿಂದ ಇಲ್ಲಿ ಶಾಶ್ವತ ಕಾಮಗಾರಿಯ ಅಗತ್ಯವಿದೆ. ಆಗ ಜನರಿಗೆ ರಸ್ತೆಯೂ ಆಗುತ್ತದೆ. ನೀರಿನ ಸಮಸ್ಯೆಯಿಂದ ಮುಕ್ತಿಯೂ ದೊರೆಯುತ್ತದೆ.

ಸಮಸ್ಯೆ

ರಿಂಗ್‌ರೋಡ್‌ನಿಂದ ಸಂಪರ್ಕ ಕಲ್ಪಿಸುವ ಐವತ್ತಕ್ಕೂ ಅಧಿಕ ಮನೆಯವರದ್ದು ತೋಡಿನ ಸಮಸ್ಯೆ. ಪ್ರಕಾಶ್‌ ಮಿಲ್‌ ಬಳಿ ಕೆಲ ವರ್ಷದ ಹಿಂದೆ ತೋಡಿನ ಬದಿಕಟ್ಟುವ ಕಾಮಗಾರಿ ಸ್ವಲ್ಪ ಆಗಿದ್ದು 3.8 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆದಿದೆ. ಒಟ್ಟು ಎರಡು ಬಾರಿ 8 ಲಕ್ಷ ರೂ. ಪುರಸಭೆಯಿಂದ ಹಾಕಿ 46 ಮೀ. ಕಾಮಗಾರಿ ಆಗಿದ್ದು ಇನ್ನೂ ಸುಮಾರು 500 ಮೀ.ಗಳಷ್ಟು ಕಾಮಗಾರಿ ಆಗಬೇಕಿದೆ. ಅನುದಾನದ ಕೊರತೆಯಿಂದ ಕಾಮಗಾರಿ ನಡೆದಿರಲಿಲ್ಲ. ಇದರಿಂದಾಗಿ ಹೊಸಕೇರಿ ಮದ್ದುಗುಡ್ಡೆಯಲ್ಲೂ ಮಳೆಗಾಲದಲ್ಲಿ ನೀರು ಮನೆಯೊಳಗೆ ನುಗ್ಗುವ ಸಮಸ್ಯೆಯಿದೆ. ಇಲ್ಲಿ ಮನೆಗಳಿಗೆ ನೀರು ನುಗ್ಗುವ ಸಮಸ್ಯೆಯನ್ನು ಸರಿಪಡಿಸಬೇಕೆಂದು ಬೇಡಿಕೆ ಇಟ್ಟಿದ್ದು ಅದನ್ನು ಪುರಸಭೆಗೆ ಆಗಾಗ ನೆನಪಿಸುತ್ತಿದ್ದಾರೆ. ಇಲ್ಲಿನ ತೋಡಿನ ಕಾಮಗಾರಿಯ ಉಳಿದ ಭಾಗವೂ ನಡೆಯದೇ ಇದ್ದರೆ ಮಳೆಗಾಲದಲ್ಲಿ ನಲುವತ್ತಕ್ಕೂ ಅಧಿಕ ಮನೆಗಳ ಅಂಗಳ ತುಂಬೆಲ್ಲ ಚರಂಡಿ ನೀರು ಸೇರಬಹುದು. ಮನೆಯೊಳಗೂ ಹೋಗುವ ಆತಂಕವಿರು ತ್ತದೆ. ಅನಿವಾರ್ಯವಾಗಿ ಗದ್ದೆಯಲ್ಲಿ ಮನೆ ಕಟ್ಟಿರುವುದು, ಪಂಚಾಂಗ ಎತ್ತರ ಮಾಡದ ಕಾರಣ ಮನೆಯೊಳಗೂ ಆಗಾಗ ನೀರು ಹೋಗುತ್ತದೆ. ಪುಟ್ಟ ಮಕ್ಕಳು ಅಂಗಳಕ್ಕೆ ಇಳಿದಾಗ ಆತಂಕ ಇದ್ದದ್ದೇ. ಏಕೆಂದರೆ ಎದುರಿನ ಗದ್ದೆ, ಮನೆಯಂಗಳದಲ್ಲಿ, ಮನೆಯೊಳಗೂ ನೀರು ನುಗ್ಗುವ ಆತಂಕ ಇದ್ದೇ ಇರುತ್ತದೆ.

Advertisement

ಕನಸು

ಶಾಶ್ವತ ಕಾಮಗಾರಿಗೆ ಅನುದಾನ ದೊರೆತರೆ, ಉಪ್ಪುನೀರು ಹಿನ್ನೀರಾಗಿ ಕಡಲ ಉಬ್ಬರ ಇಳಿತದ ಸಂದರ್ಭ ಇಲ್ಲಿಗೆ ನೀರು ಒಸರುವ ಸಮಸ್ಯೆಗೆ ತಡೆ ದೊರೆತಂತಾಗುತ್ತದೆ. ತೋಡಿಗೆ ಸರಿಯಾದ ತಡೆಗೋಡೆ ಇಲ್ಲದೆ ಜನರಿಗೆ ಸದಾ ಸಮಸ್ಯೆ ಆಗುತ್ತಿದೆ. ಅಷ್ಟಲ್ಲದೇ ಇಲ್ಲಿನ ಮನೆಗಳಿಗೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆಯೂ ಇರಲಿಲ್ಲ. ಆದರೆ ಎರಡು ಬಾರಿಯ ಕಾಮಗಾರಿಯಿಂದ ಆಗಿದ್ದು ಇನ್ನುಳಿದ ಕಾಮಗಾರಿಗೆ ಅನುದಾನ ಮಂಜೂರಾದರೆ ಆ ಕನಸೂ ನನಸಾಗಲಿದೆ.

ಸುದಿನ ವರದಿ

“ವಾರ್ಡ್‌ನಲ್ಲಿ ಸುದಿನ ಸರಣಿ’ ಸಹಿತ ಅನೇಕ ಬಾರಿ ಇಲ್ಲಿನ ಸಮಸ್ಯೆಗಳ ಕುರಿತು ಉದಯವಾಣಿ ಸುದಿನ ವರದಿ ಮಾಡಿದೆ. ಆ ವರದಿಯ ಬಳಿಕ ಎರಡು ಬಾರಿ ಇಲ್ಲಿ ಪುರಸಭೆ ವತಿಯಿಂದ ಕಾಮಗಾರಿಗಳು ಆಗಿವೆ. ಆದರೆ ಇನ್ನುಳಿದ ಕಾಮಗಾರಿಗೆ ದೊಡ್ಡ ಮೊತ್ತದ ಅವಶ್ಯವಿದೆ. ಹಾಗಾಗಿ ಸ್ಥಳೀಯರು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಲ್ಲಿ ಮನವಿ ಮಾಡಿದ್ದಾರೆ. ಶಾಸಕರು ಭರವಸೆಯನ್ನೂ ನೀಡಿದ್ದು ಜನ ಅನುದಾನದ ನಿರೀಕ್ಷೆಯಲ್ಲಿದ್ದಾರೆ.

ಶಾಸಕರಿಗೆ ಮನವಿ ಮಾಡಿದ್ದೇವೆ: ಎರಡು ಬಾರಿ 8 ಲಕ್ಷ ರೂ. ಪುರಸಭೆಯಿಂದ ಹಾಕಿ 46 ಮೀ. ಕಾಮಗಾರಿ ಆಗಿದೆ. ಇನ್ನು ಒಟ್ಟು ಅರ್ಧ ಕಿಮೀ.ನಷ್ಟು ಕಾಮಗಾರಿ ಆದರೆ ಹೊಳೆ ನೀರೂ ಬರುವುದಿಲ್ಲ. ಆ ಭಾಗದ ಮನೆಯವರಿಗೆ ರಸ್ತೆಯೂ ಆಗುತ್ತದೆ. ಶಾಸಕರ ಮನೆಗೆ ನಿಯೋಗವೊಂದು ಹೋಗಿ ಮನವಿ ಮಾಡಿದ್ದೇವೆ. –ರಾಘವೇಂದ್ರ ಖಾರ್ವಿ, ಸದಸ್ಯರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next