Advertisement

Permanent Member: ಭದ್ರತಾ ಮಂಡಳಿ ಖಾಯಂ ಸದಸ್ಯತ್ವ: ಭಾರತಕ್ಕೆ ಆನೆಬಲ

01:54 AM Sep 28, 2024 | Team Udayavani |

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯುವ ಭಾರತದ ಮಹತ್ವಾಕಾಂಕ್ಷೆ ಶೀಘ್ರವೇ ಈಡೇರುವ ಲಕ್ಷಣಗಳು ಗೋಚರಿಸತೊಡಗಿವೆ. ವಿಶ್ವಸಂಸ್ಥೆಯನ್ನು ಇಂದಿನ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ವಿಸ್ತರಿಸುವ ಮತ್ತು ವಿಶ್ವಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳಲ್ಲಿನ ಪ್ರಾತಿನಿಧ್ಯವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ವಿಶ್ವಸಂಸ್ಥೆಯ ಒಟ್ಟಾರೆ ಕಾರ್ಯವ್ಯಾಪ್ತಿಯಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ಕಳೆದ ಕೆಲವು ವರ್ಷಗಳಿಂದೀಚೆಗೆ ಭಾರತ ಬಲವಾಗಿ ಪ್ರತಿಪಾದಿಸುತ್ತ ಬಂದಿದೆ.

Advertisement

ಈ ದಿಸೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವವನ್ನು ತನಗೆ ನೀಡಬೇಕೆಂಬ ಬೇಡಿಕೆಯನ್ನು ಜಾಗತಿಕ ಸಮುದಾಯದ ಮುಂದಿಟ್ಟಿದೆ. ಈ ಬಗ್ಗೆ ಸತತವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ಉಮೇದುವಾರಿಕೆಯನ್ನು ಮಂಡಿಸುವ ಜತೆಯಲ್ಲಿ ವಿಶ್ವ ರಾಷ್ಟ್ರಗಳ ಅದರಲ್ಲೂ ಮುಖ್ಯವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳು ಮತ್ತು ಇತರ ಚುನಾಯಿತ ಸದಸ್ಯ ರಾಷ್ಟ್ರಗಳ ಬೆಂಬಲ ಪಡೆಯುವ ಪ್ರಯತ್ನವನ್ನು ನಡೆಸುತ್ತಲೇ ಬಂದಿದೆ.

ಭಾರತದ ಈ ಮಹತ್ವಾಕಾಂಕ್ಷೆಗೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ ಮತ್ತು ರಷ್ಯಾ ಈಗಾಗಲೇ ತಮ್ಮ ಬೆಂಬಲವನ್ನು ಘೋಷಿಸಿ, ಈ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನಗಳಿಗೆ ಕೈಜೋಡಿಸಿವೆ. ಇದರ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಫ್ರಾನ್ಸ್‌ ಮತ್ತು ಬ್ರಿಟನ್‌ ನಾಯಕರೊಂದಿಗೆ ನಡೆಸಿದ ಮಾತುಕತೆ ವೇಳೆ ಈ ಎರಡೂ ರಾಷ್ಟ್ರಗಳ ಮುಖಂಡರು ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡಲು ಸಮ್ಮತಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 89ನೇ ಅಧಿವೇಶನದಲ್ಲಿ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಮತ್ತು ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರು ಅಧಿಕೃತವಾಗಿ ಭಾರತಕ್ಕೆ ಬೆಂಬಲ ಘೋಷಿಸಿದ್ದಾರೆ. ಇದೇ ವೇಳೆ ಬ್ರೆಜಿಲ್‌, ಜಪಾನ್‌ ಮತ್ತು ಜರ್ಮನಿಯನ್ನು ಕೂಡ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳನ್ನಾಗಿಸಬೇಕು ಮತ್ತು ಸದಸ್ಯ ರಾಷ್ಟ್ರಗಳನ್ನೂ ಹೆಚ್ಚಿಸಬೇಕು ಎಂದು ಹೇಳುವ ಮೂಲಕ ಭಾರತದ ಪ್ರತಿಪಾದನೆಗೆ ದನಿಗೂಡಿಸಿದ್ದಾರೆ.

ಬದಲಾದ ಕಾಲಘಟ್ಟದಲ್ಲಿ ಸಾಕಷ್ಟು ಸವಾಲುಗಳು ಜಗತ್ತಿನ ಮುಂದಿದ್ದು ಇದನ್ನು ನಿಭಾಯಿಸುವುದು ವಿಶ್ವಸಂಸ್ಥೆಯ ಹಾಲಿ ವ್ಯವಸ್ಥೆಯಿಂದ ಕಷ್ಟಸಾಧ್ಯ. ಹೀಗಾಗಿ ವಿಶ್ವಸಂಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪ್ರಾತಿನಿಧಿಕ ಸಂಸ್ಥೆಯನ್ನಾಗಿ ಮಾಡಬೇಕು ಎಂಬ ಭಾರತದ ವಾದವನ್ನು ಈ ಈರ್ವರೂ ಬಲವಾಗಿ ಸಮರ್ಥಿಸಿಕೊಂಡರು.

Advertisement

ವಿಶ್ವ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ನಡೆಸುತ್ತಿರುವ ಪ್ರಯತ್ನ ಮತ್ತು ಇತ್ತೀಚಿನ ವರ್ಷಗಳಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲೂ ತನ್ನ ಸಾಮರ್ಥ್ಯವನ್ನು ತೋರ್ಪಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯವೇನು ಎಂದು ತೋರಿಸಿಕೊಡುವ ಮೂಲಕ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ತಾನೆಷ್ಟು ಅರ್ಹ ಎಂಬುದನ್ನು ಸಾಬೀತುಪಡಿಸಿದೆ ಎಂಬುದನ್ನೂ ಈ ನಾಯಕರು ಉಲ್ಲೇಖೀಸಿರುವುದು ಗಮನಾರ್ಹ.

ಸದ್ಯ ವಿಶ್ವಸಂಸ್ಥೆಯ ಐದು ಖಾಯಂ ಸದಸ್ಯ ರಾಷ್ಟ್ರಗಳ ಪೈಕಿ ಚೀನ ಮಾತ್ರವೇ ಭಾರತದ ಈ ಮಹತ್ವಾಕಾಂಕ್ಷೆಗೆ ತೊಡರುಗಾಲಾಗಿದೆ. ಆದರೆ ಜಾಗತಿಕ ಸಮುದಾಯದಿಂದ ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಪ್ರಾತಿನಿಧ್ಯ ಹೆಚ್ಚಿಸಬೇಕೆಂಬ ಭಾರತದ ಕೂಗಿಗೆ ಸಾರ್ವತ್ರಿಕ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಚೀನ ಕೂಡ ಒತ್ತಡಕ್ಕೆ ಸಿಲುಕಿ ಈ ಪ್ರಸ್ತಾವನೆಗೆ ತನ್ನ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸದ್ಯದ ಬೆಳವಣಿಗೆಗಳು ಭಾರತದ ಪಾಲಿಗೆ ಆಶಾದಾಯಕವಾಗಿದ್ದು ಸದ್ಯೋಭವಿಷ್ಯದಲ್ಲಿ ಭಾರತದ ಬಲು ವರ್ಷಗಳ ಜಾಗತಿಕ ಮಹತ್ವಾಕಾಂಕ್ಷೆ ಈಡೇರುವುದು ನಿಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next