Advertisement

ಸಾಂಬಾರು ಪದಾರ್ಥ ಮಂಡಳಿಗೆ ಶಾಶ್ವತ ಕಟ್ಟಡ

11:49 AM Jan 10, 2019 | |

ಹುಬ್ಬಳ್ಳಿ: ಇಲ್ಲಿನ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಗೆ ಶಾಶ್ವತ ಕಟ್ಟಡ ನಿರ್ಮಾಣ ನಿಟ್ಟಿನಲ್ಲಿ ಅಗತ್ಯ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ತಿಳಿಸಿದರು.

Advertisement

ಬುಧವಾರ ಇಲ್ಲಿನ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಸಭೆಗೆ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮಂಡಳಿ ಮುಖ್ಯ ಕಚೇರಿ ಬಾಡಿಗೆ ಕಟ್ಟಡದಲ್ಲಿದೆ. ವಾರ್ಷಿಕ 5-6 ಲಕ್ಷ ರೂ. ಬಾಡಿಗೆ ನೀಡಬೇಕಾಗಿದೆ. ಅದರ ಬದಲು ಶಾಶ್ವತ ಕಟ್ಟಡ ನಿರ್ಮಾಣಗೊಂಡರೆ ಬಾಡಿಗೆ ಉಳಿಯಲಿದ್ದು, ತರಬೇತಿಗೆ ಬರುವ ರೈತರು ತಂಗಲು ಸಹ ಅವಕಾಶ ದೊರೆತಂತಾಗಲಿದೆ ಎಂದರು.

ಎಂಪಿಎಂಸಿ ಆವರಣದಲ್ಲಿ ಸುಮಾರು 1,500 ಚದರ ಮೀಟರ್‌ ಜಾಗೆ ನೀಡಲಾಗಿದ್ದು, ಒಂದು ತಿಂಗಳ ಹಿಂದೆಯಷ್ಟೇ ಮಂಡಳಿ ಹೆಸರಲ್ಲಿ ನೋಂದಣಿ ಆಗಿದೆ. ಕಟ್ಟಡ ನಿರ್ಮಾಣ ಕುರಿತು ಶೀಘ್ರವೇ ಪ್ರಸ್ತಾವನೆ ಸಲ್ಲಿಸುವಂತೆ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದು, ಪ್ರಸ್ತಾವನೆ ಬಂದ ನಂತರ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಂಡಳಿಯಿಂದ 2018-19ನೇ ಸಾಲಿಗೆ ಟಾಪ್ರಲಿನ್‌ ವಿತರಣೆ ನಿಟ್ಟಿನಲ್ಲಿ ಸುಮಾರು 575 ರೈತರಿಗೆ ಸಬ್ಸಿಡಿ ವಿತರಣೆ ಮಾಡಲಾಗಿದೆ. ಯಂತ್ರೀಕರಣ ನಿಟ್ಟಿನಲ್ಲಿ 20 ಯುನಿಟ್‌ಗಳಿಗೆ ಹಾಗೂ ಪ್ರಾಥಮಿಕ ಸಂಸ್ಕರಣಾ 4 ಯುನಿಟ್‌ಗಳಿಗೆ ಸಹಾಯಧನ ನೀಡಲಾಗಿದ್ದು, ಸುಮಾರು 300 ರೈತರಿಗೆ ತರಬೇತಿ ನೀಡುವ ಕಾರ್ಯವನ್ನು ಮಂಡಳಿ ಕೈಗೊಂಡಿದೆ ಎಂದರು.

ವೈನ್‌ ಪಾರ್ಕ್‌ಗೆ ಕ್ರಮ: ವಿಜಯಪುರದಲ್ಲಿ ವೈನ್‌ಪಾರ್ಕ್‌ ಸ್ಥಾಪನೆ ಕುರಿತಾದ ವಿಚಾರ ತಮ್ಮ ಗಮನಕ್ಕೆ ಇಲ್ಲ. ಈ ಬಗ್ಗೆ ತಿಳಿದುಕೊಂಡು ಕ್ರಮ ಕೈಗೊಳ್ಳಲಾಗುವುದು. ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಾರರು ಸಾಲಮನ್ನಾ, ಬೀಜ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಇರಿಸಿದ್ದಾರೆ. ಇತರೆ ರೈತರಿಗೆ ಹೋಲಿಸಿದರೆ ಇವರಿಗೆ ಹೆಚ್ಚಿನ ಸೌಲಭ್ಯ ದೊರೆತಿಲ್ಲ ಎಂಬ ನೋವು ಇದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next