Advertisement

ಹೊಣೆಗಾರಿಕೆಯಿಂದ ಪರೀಕ್ಷಾ ಕಾರ್ಯನಿರ್ವಹಿಸಿ

08:20 PM Feb 18, 2020 | Team Udayavani |

ಚಾಮರಾಜನಗರ: ಮಾರ್ಚ್‌ 4ರಿಂದ ಪ್ರಾರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆ ಕಾರ್ಯದಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿ.ಯು.ಸಿ ಪರೀಕ್ಷಾ ಸಂಬಂಧ ನಿಯೋಜಿತರಾಗಿರುವ ಪ್ರಾಂಶುಪಾಲರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ದ್ವಿತೀಯ ಪಿ.ಯು.ಸಿ ಪರೀಕ್ಷಾ ಕಾರ್ಯವು ಅತ್ಯಂತ ಗುರುತರ ಕೆಲಸವಾಗಿದೆ. ಪರೀಕ್ಷಾ ದಿನಗಳ‌ಂದು ಪ್ರಶ್ನೆ ಪತ್ರಿಕೆಗಳನ್ನು ಸಮಯಕ್ಕೆ ಸರಿಯಾಗಿ ನಿಗದಿತ ವಾಹನದಲ್ಲಿ ಭದ್ರತೆಯ ಜೊತೆ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಕೆಲಸವನ್ನು ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.

ಪರೀಕ್ಷಾ ಕೊಠಡಿಯಲ್ಲಿ ಗಡಿಯಾರ ಅಳವಡಿಸಿ: ಪರೀಕ್ಷೆಯ ದಿನದಂದು ವಿದ್ಯಾರ್ಥಿಗಳು ಸಾಮಾನ್ಯ ವಾಚ್‌ಗಳನ್ನು ಮಾತ್ರ ತರಬೇಕಿದೆ. ಯಾವುದೇ ರೀತಿಯ ಸ್ಮಾರ್ಟ್‌ವಾಚ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅವಕಾಶವಿಲ್ಲ. ಮೊಬೈಲ್‌ ಸಹ ತರುವಂತಿಲ್ಲ. ಪರೀಕ್ಷಾ ಕೊಠಡಿಗಳಲ್ಲಿ ಗಡಿಯಾರಗಳನ್ನು ಅಳವಡಿಸಬೇಕು. ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ಪರೀಕ್ಷಾ ಕಾರ್ಯವನ್ನು ಪೂರೈಸಬೇಕು ಎಂದು ತಿಳಿಸಿದರು.

ನಿಷೇಧಾಜ್ಞೆ ಜಾರಿಗೆ ಆದೇಶ: ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗುತ್ತದೆ. ಪರೀಕ್ಷಾ ಕೆಲಸವು ನ್ಯಾಯೋಚಿತವಾಗಿ ನಡೆಯಲೆಂಬ ಉದ್ದೇಶದಿಂದ ನಿಷೇಧಾಜ್ಞೆಗೆ ಆದೇಶಿಸಲಾಗುತ್ತದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶವಿಲ್ಲ. ಅಲ್ಲದೇ ಪರೀಕ್ಷಾ ದಿನಗಳಂದು ಸಮಯ ನಿಗದಿಪಡಿಸಿ ಜೆರಾಕ್ಸ್‌ ಅಂಗಡಿ ಹಾಗೂ ಸೈಬರ್‌ ಕೇಂದ್ರಗಳನ್ನು ಸಹ ಮುಚ್ಚುವಂತೆಯೂ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.

ವೈದ್ಯಕೀಯ ಸೇವೆ ಕಲ್ಪಿಸಿ: ಉತ್ತರ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಂದ ನಿಗದಿತ ಸಮಯಕ್ಕೆ ರವಾನಿಸಲು ಎಲ್ಲಾ ಕೇಂದ್ರಗಳಿಗೂ ವಾಹನ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಪರೀಕ್ಷಾ ಕಾರ್ಯದಲ್ಲಿ ಯಾವುದೇ ರೀತಿಯ ಗೊಂದಲಗಳು ಕಂಡುಬರಬಾರದು. ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು. ಅತ್ಯಂತ ಹೊಣೆಗಾರಿಕೆಯಿಂದ ಪರೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಬೇಕು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸೇವೆಯನ್ನು ಕಲ್ಪಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

Advertisement

6894 ವಿದ್ಯಾರ್ಥಿಗಳಿಗೆ ಪರೀಕ್ಷೆ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್‌ 04ರಿಂದ 23ರ ವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ 14 ದಿನಗಳ ಕಾಲ ಪರೀಕ್ಷೆ ನಡೆಯಲಿದ್ದು, ಒಟ್ಟು 16 ಪರೀಕ್ಷಾ ಕೇಂದ್ರಗಳಿವೆ. ಈ ಪೈಕಿ ಚಾಮರಾಜನಗರದಲ್ಲಿ -4, ಯಳಂದೂರು -2, ಕೊಳ್ಳೇಗಾಲದಲ್ಲಿ- 5, ಹನೂರು- 2 ಹಾಗೂ ಗುಂಡ್ಲುಪೇಟೆಯಲ್ಲಿ- 3 ಕೇಂದ್ರಗಳಿರಲಿವೆ. 3157 ಬಾಲಕರು ಮತ್ತು 3737 ಬಾಲಕಿಯರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 6894 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜವರೇಗೌಡ, ತಹಶೀಲ್ದಾರ್‌ ಕೆ. ಕುನಾಲ್‌, ನಂಜುಂಡಯ್ಯ ಮತ್ತು ಎಲ್ಲಾ ವಲಯಗಳ ಶಿಕ್ಷಣಾಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪರೀಕ್ಷೆಯ ಕೇಂದ್ರಗಳಲ್ಲಿ ಹಾಗೂ ಪರೀಕ್ಷಾ ಕಾರ್ಯದ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಪೊಲೀಸ್‌ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ.
-ಎಚ್‌.ಡಿ.ಆನಂದ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next