Advertisement

ಕಟ್ಟುನಿಟ್ಟಾಗಿ ಚುನಾವಣೆ ಕರ್ತವ್ಯ ಮಾಡಿ

05:33 PM May 18, 2022 | Team Udayavani |

ಬೆಳಗಾವಿ: ಚುನಾವಣೆಗೆ ನಿಯೋಜಿತಗೊಂಡಿರುವ ಅಧಿಕಾರಿಗಳು ಯಾವುದೇ ಗೊಂದಲವಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಅಭ್ಯರ್ಥಿಗಳ ಸಭೆ, ಸಮಾರಂಭಗಳ ಕುರಿತು ನಿರಂತರ ಪರಿಶೀಲನೆ ನಡೆಸಿ ನಿಗಾ ವಹಿಸಬೇಕು ಎಂದು ಚುನಾವಣಾ ತರಬೇತುದಾರ ಎನ್‌. ವ್ಹಿ ಶಿರಗಾಂವಕರ ಹೇಳಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ವಾಯವ್ಯ ಪದವೀಧರ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2022 ರ ಕರ್ತವ್ಯ ನಿರ್ವಹಣೆಯ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡಿದ ಅವರು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಿಯೋಜಿತ ಅಧಿಕಾರಿಗಳು ಅಭ್ಯರ್ಥಿಗಳ ಸಭೆ-ಸಮಾರಂಭಗಳ ಬಗ್ಗೆ ನಿರಂತರ ಪರಿಶೀಲನೆ ನಡೆಸಬೇಕು ಎಂದರು.

ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮತದಾರರ ಕುರಿತು ಭಾಷಣ ಮಾಡುವುದು, ಸರ್ಕಾರಿ ಸೌಲಭ್ಯಗಳ ವಿಸ್ತರಣೆ ಮತ್ತು ನೀತಿ, ನಿರ್ದೇಶನಾತ್ಮಕ ವಿಷಯಗಳ ಕುರಿತು ಭರವಸೆ ನೀಡುವುದು ಕಂಡು ಬಂದಲ್ಲಿ, ತಕ್ಷಣ ಸ್ಥಳೀಯ ಮೇಲಾಧಿಕಾರಿಗಳಿಗೆ ತಿಳಿಸಿ ಅವರ ನಿರ್ದೇಶನದಂತೆ ದೂರು ದಾಖಲಿಸಬೇಕು ಎಂದು ಹೇಳಿದರು.

ಪ್ರತಿಸ್ಪರ್ಧಿಗಳ ಚಾರಿತ್ರ್ಯ ಹರಣ, ಅವಹೇಳನ, ಪ್ರಚೋದನಕಾರಿ ಭಾಷಣ ಮಾಡುವುದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಸಾಮಾಜಿಕ ಶಾಂತಿ ಕೆದಡುವ
ತೀಕ್ಷ¡ ಹೇಳಿಕೆಗಳನ್ನು ನೀಡುವುದು ಹಾಗೂ ಹೊಸ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ
ಪ್ರಕರಣಗಳಾಗಿವೆ. ಅದೇ ರೀತಿ ನೈಸರ್ಗಿಕ ವಿಕೋಪ ಮತ್ತು ಕುಡಿಯುವ ನೀರಿನ ವಿಷಯಗಳನ್ನು ಹೊರತುಪಡಿಸಿ ಅಧಿಕಾರಿಗಳ ಸಭೆ ನಡೆಸುವುದು. ಕಚೇರಿ ಕೆಲಸಗಳನ್ನು ಹೊರತುಪಡಿಸಿ ಪಕ್ಷದ ಅಥವಾ ಸ್ವಂತದ ಕೆಲಸಗಳಿಗೆ ಸರ್ಕಾರಿ ವಾಹನಗಳನ್ನು ಬಳಸುವುದು ಕೂಡ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಚುನಾವಣೆ ಘೋಷಣೆಯಾದ ಕ್ಷಣದಿಂದ ಮತದಾನ ಪ್ರಕ್ರಿಯೆ ಸಂಪೂರ್ಣ ಮುಕ್ತಾಯವಾಗುವವರೆಗೂ ನಿಯೋಜಿತ ತಂಡಗಳು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕು. ಹಣ, ಮದ್ಯ ಹಂಚಿಕೆ ಹಾಗೂ ಬೆದರಿಕೆ ಸೇರಿದಂತೆ ಅನೇಕ ಸವಾಲುಗಳು ಎದುರಾಗಬಹುದು. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುವುದು ಹಾಗೂ ಮತದಾರರಿಗೆ ಹಣದ ಆಮಿಷ ಒಡ್ಡುವುದು ಕಂಡುಬಂದಲ್ಲಿ ತಕ್ಷಣ ಮೇಲಾಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳಬೇಕು ಎಂದರು.

Advertisement

ಪಕ್ಷ ಮತ್ತು ಸ್ಪರ್ಧಾಳು ಅಭ್ಯರ್ಥಿಗೆ ಸಂಬಂಧಿಸಿದ ನಿಯಮಬಾಹಿರ ಖರ್ಚು ವೆಚ್ಚಗಳ ಕುರಿತು ದೂರುಗಳು ಬಂದಲ್ಲಿ ತಕ್ಷಣವೇ ಅಂತಹ ದೂರುಗಳ ಪರಿಶೀಲನೆ
ನಡೆಸಿ ನಿಜ ಎಂದು ಕಂಡುಬಂದಲ್ಲಿ, ನಿಯಮಾನುಸಾರ ಸಂಬಂಧಿಸಿದ ವ್ಯಾಪ್ತಿ ಪ್ರದೇಶದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಕ್ರಮವಹಿಸಬೇಕು ಎಂದು
ನಿಯೋಜಿತ ಅಧಿಕಾರಿಗಳಿಗೆ ಸೂಚಿಸಿದರು. ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಮಾತನಾಡಿ, ಸೆಕ್ಟರ್‌ ಅಧಿಕಾರಿಗಳು, ಫ್ಲೆ$çಯಿಂಗ್‌ ಸ್ಕಾಡ್‌, ವಿಡಿಯೋ ವಿವಿಂಗ್‌ ತಂಡ ಹಾಗೂ ವಿಡಿಯೋ ಸರ್ವೆಯಲೆನ್ಸ್‌ ತಂಡಗಳು ನಿರಂತರ ಸಕ್ರಿಯವಾಗಿರಬೇಕು.

ಪರಿಶೀಲನೆಯ ಪ್ರತಿ ಸಾಕ್ಷಿಗಳನ್ನು ವಿಡಿಯೋ ಮೂಲಕ ತಪ್ಪದೇ ಸಂಗ್ರಹಿಸಬೇಕು. ಯಾವುದೇ ತೊಂದರೆಗಳು ಎದುರಾದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಸಂಬಂಧಿಸಿದ ತಹಶೀಲ್ದಾರ್‌ ಕಚೇರಿಯಲ್ಲಿ ದೂರು ನೋಂದಣಿ ಮಾಡಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ರವೀಂದ್ರ ಗಡಾದಿ, ಜಿಲ್ಲಾ ಪಂಚಾಯತ್‌ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next