ಮಹಾಲಿಂಗಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸುಧಾರಣೆಗೆ ವೈದ್ಯರು ಮತ್ತು ಸಿಬ್ಬಂದಿ ವೇಳಾಪಟ್ಟಿಯಂತೆ ಕಡ್ಡಾಯವಾಗಿ ಹಾಜರಿದ್ದು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 2020-21 ನೇ ಸಾಲಿನ ಖರ್ಚು-ವೆಚ್ಚಗಳಿಗೆ ಅನುಮೋದನೆ ನೀಡಿ, ತಿಂಗಳಿಗೆ 40-50 ಹೆರಿಗೆ ಮಾಡಿಸುತ್ತಿರುವ ಆಸ್ಪತ್ರೆಯಲ್ಲಿ ಸರ್ವ ಬಡರೋಗಿಗಳಿಗೆ ಈ ಸೌಲಭ್ಯ ಸಿಗಬೇಕು. ಅದಕ್ಕಾಗಿ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಡಿಜಿಟಲ್ ಬೋರ್ಡ್ ಮಾಡಿಸಿ ಸಾರ್ವಜನಿಕರಿಗೆ ಕಾಣುವಂತೆ ತೂಗು ಹಾಕಲು ಸೂಚಿಸಿದರು.
ಬಡ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳ ಸುಲಿಗೆಯಿಂದ ಕಾಪಾಡಲು ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚಿನ ಮೂಲಸೌಕರ್ಯ ಒದಗಿಸಲು ಆರೋಗ್ಯ ಸಚಿವರೊಂದಿಗೆ ಮಾತನಾಡಿ ಹೆಚ್ಚಿನ ಅನುದಾನ ಒದಗಿಸುವುದಾಗಿ ತಿಳಿಸಿದರು.
ಸಿಬ್ಬಂದಿ ತರಾಟೆ: ಆಸ್ಪತ್ರೆಯಲ್ಲಿ ಎಲ್ಲ ಸೌಕರ್ಯಗಳಿದ್ದರೂ ಸಹ ವೈದ್ಯರು ಸರಿಯಾಗಿ ಇಲ್ಲದ ಕಾರಣ ರೋಗಿಗಳು ಆಸ್ಪತ್ರೆಯತ್ತ ಬರುತ್ತಿಲ್ಲ, ಬಡವರೂ ಸಹ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ತರಬೇಕಾದ ಸನ್ನಿವೇಶ ಮಹಾಲಿಂಗಪುರದಲ್ಲಿ ಉಂಟಾಗಿದೆ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಆರೋಪಿಸಿದರು. ಇದರಿಂದ ಅಸಮಾಧಾನಗೊಂಡ ಶಾಸಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಮುಖ್ಯ ವೈದ್ಯಾಧಿಕಾರಿ ಸಂಜಯಕುಮಾರ ತೇಲಿ ಮಾತನಾಡಿ, ಆಸ್ಪತ್ರೆಯಲ್ಲಿ ಹೆರಿಗೆ, ಸಂತಾನಹರಣ ಶಸ್ತ್ರಚಿಕಿತ್ಸೆ ಮುಂತಾದ ಸೌಲಭ್ಯಗಳು ಲಭ್ಯವಿದ್ದು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಲು ವಿನಂತಿಸಿದರು. ಸಭೆಯಲ್ಲಿ ರಬಕವಿ-ಬನಹಟ್ಟಿ ತಹಶೀಲ್ದಾರ್ ಸಂಜಯ ಇಂಗಳೆ, ಮುಖ್ಯ ವೈದ್ಯಾ ಧಿಕಾರಿ ಸಂಜಯಕುಮಾರ ತೇಲಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪ್ರಕಾಶ ತಟ್ಟಿಮನಿ, ಮಹೇಶ ಚಿಂಚಲಿ, ಮುಖಂಡರಾದ ಮಹಾಲಿಂಗಪ್ಪ ಕುಳ್ಳೊಳ್ಳಿ, ಚನ್ನಬಸು ಯರಗಟ್ಟಿ, ಶಿವಾನಂದ ಅಂಗಡಿ ಮತ್ತು ಡಾ| ಸಿ.ಎಂ.ವಜ್ರಮಟ್ಟಿ, ಡಾ|ವಿಶ್ವನಾಥ ಗುಂಡಾ, ಆಸ್ಪತ್ರೆಯ ಅಧೀಕ್ಷಕ ಮಲ್ಲಿಕಾರ್ಜುನ ಹಟ್ಟಿ, ಸದಾಶಿವ ಉರಬಿನ್ನವರ, ಸಂಗೀತಾ ಹತ್ರೊಟಿ ಇದ್ದರು.