ನಮ್ಮಪ್ಪನ ಹೆಸರು ತುಪ್ಪದ ಬಸಪ್ಪ ಅಂತ. ಅವರು ಹೋಟೆಲ್ ಇಟ್ಟಿದ್ದರಂತೆ. ಹೋಟೆಲ್‌ನಲ್ಲಿ ತುಪ್ಪದ ದೋಸೆ ಮಾಡುತ್ತಿದ್ದ ಕಾರಣಕ್ಕೆ, ಅಪ್ಪನಿಗೆ ಆ ಹೆಸರು ಬಂದಿತ್ತು. ನಾನು ಕಣ್ಣು ಬಿಡುವ ವೇಳೆಗೆ ಅಪ್ಪ ತೀರಿಕೊಂಡಿದ್ದರು. ಹೀಗಾಗಿ, ನಮ್ಮನ್ನು ಓದಿಸುವ-ಬೆಳೆಸುವ ಜವಾಬ್ದಾರಿ ಅಮ್ಮನದೇ ಆಗಿತ್ತು. ಬೀದಿಯಲ್ಲಿ ಕೂಗುತ್ತಾ, ಇಡ್ಲಿ ಮಾರುತ್ತಿದ್ದಳು ನಮ್ಮಮ್ಮ. ಶಾಲೆಗೆ ಹೋಗುವ ಮೊದಲು ಮತ್ತು ಸಂಜೆ, ಇಡ್ಲಿ ಮಾರಿ ಜೀವನ ಮಾಡುತ್ತಿದ್ದೆವು.
ದೊಡ್ಡ ಹೋಟೆಲ್ ನೋಡಿದಾಗೆಲ್ಲ, ನಾನೂ ಈ ಥರದ ಹೋಟೆಲ್ ಇಟ್ಟು, ಅಮ್ಮನನ್ನು ಸಾಕಬೇಕು ಅನಿ ಸೋದು. ಆದರೆ ನನ್ನ ಜೊತೆಗಿನ ಹುಡುಗರು, ಇಡ್ಲಿ ಸೀನಾ ಅಂತ ಹಂಗಿಸೋರು. ಆಗೆಲ್ಲಾ ಬೇಜಾರು ಆಗೋದು. ಈ ಮಧ್ಯೆ ಅಮ್ಮ ಹುಷಾರು ತಪ್ಪಿದಳು. ನಾನೀಗ ಏನಾದರೂ ಕೆಲಸ ಮಾಡಲೇಬೇಕಿತ್ತು. ಸುಲಭದ ಕೆಲಸ ಅಂತ ಸೈಕಲ್ ಶಾಪ್‌ನಲ್ಲಿ ಕೆಲಸಕ್ಕೆ ಸೇರಿ ಕೊಂಡೆ. ಈ ವೇಳೆಗೆ 9ನೇ ತರಗತಿ ಮುಗಿದಿತ್ತು. ಹತ್ತನೇ ತರಗತಿ ಮೆಟ್ಟಿಲೇರಲು ಪರಿಸ್ಥಿತಿ ಬಿಡಲಿಲ್ಲ.
ಗೆಳೆಯ ನನ್ನ ಪರಿಸ್ಥಿತಿ ನೋಡಿ, ಬೆಂಗಳೂರಿಂದ ವಾಚು, ಟೆಲಿಫೋನ್, ಸೆಂಟ್… ಈ ರೀತಿಯ ಪರಿಕರಗಳನ್ನು ತಂದುಕೊಡುತ್ತಿದ್ದ. ನಾನು ಅದನ್ನು ಗೊತ್ತಿರುವವರಿಗೆಲ್ಲಾ ಮಾರತೊಡಗಿದೆ. ಬಂದ ಲಾಭದಲ್ಲಿ ಇಬ್ಬರೂ ಅರ್ಧರ್ಧ ಹಂಚಿಕೊಳ್ಳುತ್ತಿದ್ದೆವು. ಇದನ್ನು ಮಾರೋದಕ್ಕೆ, ಸೈಕಲ್ ಶಾಪಿನ ಮಾಲೀಕರೂ ನೆರವು ನೀಡುತ್ತಿದ್ದರು. ಜೀವನದಲ್ಲಿ ಹೋಟೆಲ್ ನಡೆಸಬೇಕು ಅಂದುಕೊಂಡವನು, ಅದನ್ನೆಲ್ಲಾ ಮರೆತು,ಈ ಸೆಕೆಂಡ್ ಹ್ಯಾಂಡ್ ಬ್ಯುಸಿನೆಸ್ ಕಡೆ ತಿರುಗಿಕೊಂಡೆ.
ಇದರಲ್ಲಿ ಹೂಡಿಕೆ ಕಡಿಮೆ, ಲಾಭ ಹೆಚ್ಚು. ಹೊಸ ಸಾಮಾನುಗಳಿಗಿಂತ, ಇದರಲ್ಲೇ ಹಣ ಹೆಚ್ಚಾಗಿಬರೋದು. ಹೀಗಿದ್ದಾಗಲೇ, ಗೆಳೆಯನಿಗೆ ಬೇರೊಂದು ಕೆಲಸ ಸಿಕ್ಕಿ, ಕೈಗೆ ಸಿಗದಂತಾದ. ಆಮೇಲೆ, ನಾನೇ ಬೆಂಗಳೂರಿನ ಬರ್ಮಾ ಬಜಾರ್, ಬೊಂಬು ಬಜಾರ್ ಇಲ್ಲೆಲ್ಲಾ ಸುತ್ತಾಡಿ, ಬಟ್ಟೆ, ವಾಚ್‌ಗಳನ್ನು ತರಲು ಶುರುಮಾಡಿದೆ. ರಾಡೋ ಕಂಪೆನಿಯ ವಾಚನ್ನೇ ಹೋಲುವ ವಾಚಿಗೆ, ಡಿಮ್ಯಾಂಡ್ ಜಾಸ್ತಿ ಯಾಯಿತು.
ಎರಡು ಸಾವಿರಕ್ಕೆ ಒಳ್ಳೆ ವಾಚ್ ಸಿಗುತ್ತಿತ್ತು. ಅದನ್ನು ಮಾರಿದರೆ, ನನಗೆ 500 ರೂಪಾಯಿ ಲಾಭ. ಮದುವೆಯಾಗುವವರು, ವಾಚು- ಉಂಗುರ ಅಂತೆಲ್ಲ ಹುಡು ಕಾಡುವವರನ್ನು ಮೊದಲು ಬುಕ್ ಮಾಡಿಕೊಳ್ಳುತ್ತಿದ್ದೆ. ಅಂಥವರಿಗೆ ವಾಚನ್ನು ಮಾರುತ್ತಿದ್ದೆ. ಶರ್ಟ್ ಮಾರಾಟದಿಂದಲೂ ಲಾಭ ಇತ್ತು. ಇದನ್ನು ಗಮನಿಸಿ, ವಾಚ್- ಬಟ್ಟೆ ಮಾರಾಟದ ಪುಟ್ಟ ಅಂಗಡಿ ತೆರೆದೆ. ಇದರ ಜೊತೆಗೇ, ದಿನಬಳಕೆಗೆ ಅಗತ್ಯವಿರುವ ಒಂದಷ್ಟು ಸಾಮಾನುಗಳು-ಗ್ಯಾಸ್ ಸ್ಟವ್, ಹಳೇ ರೇಡಿಯೋ, ಟಿ.ವಿ, ಹಳೇ ತಾಮ್ರದ ಪಾತ್ರೆಗಳು…
ಹೀಗೆ, ಏನೇನೋ ಹುಡುಕಿ ತಂದು ಮಾರತೊಡಗಿದೆ. ಇದರಿಂದ ಒಳ್ಳೆಯ ಬ್ಯುಸಿನೆಸ್ ಆಯಿತು. ಇಡ್ಲಿ ಸೀನ ಅನ್ನೋ ಹೆಸರು ಹೋಗಿ, ಸೆಕೆಂಡ್ ಹ್ಯಾಂಡ್ ಸೀನ ಅನ್ನೋ ಹೆಸರು ಬಂತು. ಈಗ, ನಮ್ಮದೇ ದೊಡ್ಡ ಶೋ ರೂಂ ಇದೆ. ಇದರಲ್ಲಿ ಕಾರು, ಬೈಕುಗಳೆಲ್ಲವೂ ಸೆಕೆಂಡ್ ಹ್ಯಾಂಡ್ ಸಿಗ್ತವೆ. ನಾವು, ಯಾವುದೋ ಒಂದನ್ನು ಮನಸಲ್ಲಿ ಇಟ್ಟುಕೊಂಡು, ಇದೇ ನಮ್ಮ ಪರ್ಫೆಕ್ಟ್ ಪ್ರೊಫೆಷನ್ ಅಂದುಕೊಳ್ತೀವಿ. ಆದರೆ, ವಿಧಿ ನಮ್ಮ ಹಣೆಬರಹದಲ್ಲಿ ನಿಗದಿಮಾಡುವ ಪ್ರೊಫೆಷನ್ನೇ ಬೇರೆಯಾಗಿರುತ್ತದೆ.
* ಸೆಕೆಂಡ್ ಹ್ಯಾಂಡ್ ಶ್ರೀನಿವಾಸ್, ಕೋಡಂಬಳಿ