Advertisement

ಗರಿಗೆದರಿದ ಕೃಷಿ ಚಟುವಟಿಕೆ; ಬಿತ್ತನೆಗೆ ಸಿದ್ಧತೆ

01:03 PM May 24, 2022 | Team Udayavani |

ಬೀದರ: ಜಿಲ್ಲೆಯಲ್ಲಿ ಚುರುಕುಗೊಂಡಿರುವ ಪೂರ್ವ ಮುಂಗಾರು ಮಳೆ ರೈತ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿದೆ.

Advertisement

ಮುಂಗಾರು ಹಂಗಾಮು ಬಿತ್ತನೆಗೆ ಅನ್ನದಾತರು ಭೂಮಿ ಸಜ್ಜುಗೊಳಿಸಿ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ಅಸಾನಿ ಚಂಡಮಾರುತ ಪ್ರಭಾವದಿಂದ ಜಿಲ್ಲೆಯ ಹಲವೆಡೆ ಮಳೆ ಆಗುತ್ತಿದೆ. ಮುಂಗಾರು ಪ್ರವೇಶಕ್ಕೂ ಮುನ್ನವೇ ವರ್ಷ ಧಾರೆ ಆಗುತ್ತಿರುವುದು ಕೃಷಿಕರಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಕೋವಿಡ್‌ ಜತೆಗೆ ಅತಿವೃಷ್ಟಿಯಿಂದಾಗಿ ಕಳೆದೆರಡು ವರ್ಷಗಳಿಂದ ನಲುಗಿ ಹೋಗಿರುವ ರೈತ ವರ್ಗ, ಈ ಬಾರಿ ಭರ್ಜರಿ ಮಳೆಯಾಗಿ ಉತ್ತಮ ಫಸಲು ಕೈಗೆ ಸಿಗಲಿ ಎಂಬ ಆಶಾಭಾವ ಹೊಂದಿದ್ದು, ಈ ನಿಟ್ಟಿನಲ್ಲಿ ಕೃಷಿ ಕಾರ್ಯಕ್ಕೆ ಸಜ್ಜಾಗುತ್ತಿದ್ದಾರೆ.

ಮುಂಗಾರು ಹಂಗಾಮು ಬಿತ್ತನೆಗೆ ತಯಾರಾಗುತ್ತಿರುವ ರೈತರಿಗೆ ನೆರವಾಗಲು ಕೃಷಿ ಇಲಾಖೆ ಕೂಡ ಸಿದ್ಧವಾಗುತ್ತಿದೆ. ಕೃಷಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ಮಳೆಯಾಶ್ರಿತ ಪ್ರದೇಶವಾಗಿರುವ ಬೀದರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 3.75 ಲಕ್ಷ ಹೆಕ್ಟೇರ್‌ ಜಮೀನಿನಲ್ಲಿ ಬಿತ್ತನೆ ಗುರಿ ಇದ್ದು, ಒಟ್ಟಾರೆ 27.22 ಟನ್‌ ಕೃಷಿ ಉತ್ಪಾದನೆ ಅಂದಾಜಿಸಲಾಗಿದೆ. ಒಟ್ಟು ಬಿತ್ತನೆ ಪ್ರದೇಶದ ಪೈಕಿ ಶೇ.55ರಷ್ಟು ಅಂದರೆ 1.92 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಸೊಯಾಬಿನ್‌ ಬೆಳೆಯಲು ನಿರ್ಧರಿಸಲಾಗಿದೆ.

ಪ್ರಕೃತಿ ವಿಕೋಪದ ಹೊಡೆತಕ್ಕೂ ಒಗ್ಗಿಕೊಳ್ಳುತ್ತಿರುವ ಕಾರಣ ಕೃಷಿಕರು ಸೊಯಾಬಿನ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ 10 ವರ್ಷಗಳಿಂದ ಸೊಯಾಬಿನ್‌ ಬಿತ್ತನೆ ಪ್ರದೇಶ ಹೆಚ್ಚುತ್ತಿರುವುದು ಗಮನಾರ್ಹ. ಇನ್ನುಳಿದಂತೆ 1.35 ಹೆಕ್ಟೇರ್‌ ಬೇಳೆ ಕಾಳು ಬಿತ್ತನೆ ಮಾಡಿ 1.62 ಲಕ್ಷ ಟನ್‌ ನಷ್ಟು ಇಳುವರಿ ಪಡೆಯುವ ಗುರಿ ಇದೆ. ಇದರಲ್ಲಿ 90 ಸಾವಿರ ಹೆಕ್ಟೇರ್‌ ತೊಗರಿ, 25 ಸಾವಿರ ಹೆಕ್ಟೇರ್‌ ಹೆಸರು ಮತ್ತು 20 ಸಾವಿರ ಹೆಕ್ಟೇರ್‌ ಉದ್ದು ಬಿತ್ತನೆ ಸೇರಿದೆ. ಅದೇ ರೀತಿ 12 ಸಾವಿರ ಹೆಕ್ಟೇರ್‌ನಲ್ಲಿ ಜೋಳ, 4 ಸಾವಿರ ಹೆಕ್ಟೇರ್‌ನಲ್ಲಿ ಸಜ್ಜೆ, 1500 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 1 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, 50 ಹೆಕ್ಟೇರ್‌ ನಲ್ಲಿ ಶೇಂಗಾ, 1 ಸಾವಿರ ಹೆಕ್ಟೇರ್‌ನಲ್ಲಿ ಎಳ್ಳು, 100 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 1 ಸಾವಿರ ಹೆಕ್ಟೇರ್‌ನಲ್ಲಿ ಕಾರೆಳ್ಳು ಬಿತ್ತನೆ ಗುರಿ ಹೊಂದಲಾಗಿದೆ.

ಮುಂಗಾರು ಪ್ರವೇಶಕ್ಕೂ ಮುನ್ನವೇ ಮಳೆ ಆಗುತ್ತಿರುವುದು ಈ ಬಾರಿ ಖಾರೀಫ್‌ ಬೆಳೆ ರೈತರನ್ನು ಕೈಹಿಡಿಯಬಹುದು ಎಂಬ ನಿರೀಕ್ಷೆ ಹೆಚ್ಚಿಸಿದೆ. ಇನ್ನೆರಡು ವಾರದಲ್ಲಿ ಬಿತ್ತನೆ ಶುರುವಾಗುವ ಹಿನ್ನೆಲೆ ಭೂಮಿ ಹದಗೊಳಿಸಿ, ಅಗತ್ಯ ಬೀಜ-ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಈ ವರ್ಷವಾದರೂ ಉತ್ತಮ ಮಳೆ ಮತ್ತು ಬೆಳೆ ಸಿಕ್ಕು ಆರ್ಥಿಕ ಸಂಕಷ್ಟದಲ್ಲಿರುವ ಅನ್ನದಾತರಲ್ಲಿ ನೆಮ್ಮದಿ ಮೂಡಲಿ. -ಶಿವರಾಜ ದೇಶಮುಖ, ರೈತ

Advertisement

-ಶಶಿಕಾಂತ ಬಂಬುಳಗೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next