Advertisement

ರಾಜ್ಯದ ಖಾಸಗಿ ಶಾಲೆಗಳಲ್ಲಿ ಶೇ. 15ರಷ್ಟು ಶುಲ್ಕ ಹೆಚ್ಚಳ

02:02 AM May 16, 2022 | Team Udayavani |

ಬೆಂಗಳೂರು: ಎರಡು ವರ್ಷಗಳ ಅನಂತರ ಮಕ್ಕಳು ಪೂರ್ಣಪ್ರಮಾಣದಲ್ಲಿ ತರಗತಿಗಳಿಗೆ ಹಾಜರಾಗಲಿದ್ದಾರೆ ಎನ್ನುವ ಖುಷಿಯಲ್ಲಿ ಶಾಲೆಗೆ ಸೇರಿಸಲು ಬರುತ್ತಿರುವ ಪೋಷಕರಿಗೆ ಆರಂಭದಲ್ಲಿಯೇ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡುವ ಮೂಲಕ ಶಾಕ್‌ ನೀಡಿವೆ.

Advertisement

ನಿರ್ವಹಣೆ ಕಷ್ಟಸಾಧ್ಯ
ಶಾಲೆಗಳು 2019ರಲ್ಲಿ ವಿಧಿಸಿದ್ದ ಶುಲ್ಕದ ಆಧಾರದಲ್ಲಿ ಕನಿಷ್ಠ ಶೇ. 10ರಿಂದ 15ರ ವರೆಗೆ ಶುಲ್ಕ ಹೆಚ್ಚಳ ಮಾಡುವ ಮೂಲಕ ಪೋಷಕರ ಜೇಬಿಗೆ ಕತ್ತರಿ ಹಾಕಿವೆ. ಕಳೆದ ಎರಡು ವರ್ಷಗಳು ಕೊರೊನಾ ಇದ್ದ ಹಿನ್ನೆಲೆಯಲ್ಲಿ ಶುಲ್ಕವನ್ನು ಹೆಚ್ಚಳ ಮಾಡಿಲ್ಲ. ಆದ್ದರಿಂದ ಈ ವರ್ಷ ಕೂಡ ಶುಲ್ಕ ಹೆಚ್ಚಳ ಮಾಡದಿದ್ದರೆ ಶಾಲೆಗಳ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಶುಲ್ಕ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎನ್ನುವುದು ಖಾಸಗಿ ಶಾಲೆಗಳ ವಾದವಾಗಿದೆ.

ಶುಲ್ಕ ಹೆಚ್ಚಳಕ್ಕೆ ಕಾರಣ
ಮೊದಲನೆಯದಾಗಿ ಶಿಕ್ಷಕರಿಗೆ ವೇತನ ಹೆಚ್ಚಳ ಮಾಡಬೇಕಿದೆ. ಸರಕಾರವು ಶಾಲಾ ಕಟ್ಟಡದ ತೆರಿಗೆಯನ್ನು ಶೇ. 25ರಿಂದ ಶೇ. 100ಕ್ಕೆ ಹೆಚ್ಚಳ ಮಾಡಿವೆ. ಕಾಗದದ ಬೆಲೆ ಹೆಚ್ಚಳವಾಗಿರುವ ಕಾರಣ ಪಠ್ಯಪುಸ್ತಕ, ನೋಟ್‌ ಪುಸ್ತಕದ ಬೆಲೆ ಕೂಡ ಏರಿಕೆಯಾಗಿವೆ. ಇದರ ಜತೆಗೆ ಇಂಧನ ಬೆಲೆ ಹೆಚ್ಚಳವಾಗಿರುವುದರಿಂದ ಶಾಲಾ ವಾಹನಗಳಿಗೆ ವಿಧಿಸುವ ಶುಲ್ಕ ಕೂಡ ಹೆಚ್ಚಳ ಮಾಡಬೇಕಿದೆ. ವಿದ್ಯುತ್‌, ನೀರು ಹೀಗೆ ಎಲ್ಲ ಬೆಲೆಗಳು ಹೆಚ್ಚಳವಾಗಿರುವುದರಿಂದ ಶಾಲಾ ಶುಲ್ಕದ ಬೆಲೆಯನ್ನು ಸಹ ಏರಿಸಬೇಕಿದೆ ಎನ್ನುತ್ತಾರೆ ಖಾಸಗಿ ಶಾಲೆಯವರು.

ಹೆಚ್ಚಳ ಸರಿಯಲ್ಲ
ಎರಡು ವರ್ಷಗಳಿಂದ ಪೋಷಕರು ಕೆಲಸಗಳನ್ನು ಕಳೆದುಕೊಂಡು ಜೀವನ ನಡೆಸುವುದಕ್ಕೆ ಕಷ್ಟ ಪಟ್ಟಿದ್ದೇವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಆನ್‌ಲೈನ್‌ ತರಗತಿಗಳಿಗೆ ಪೂರ್ಣ ಪ್ರಮಾಣದ ಶುಲ್ಕವನ್ನೇ ಪಾವತಿಸಿದ್ದೇವೆ. ಶಿಕ್ಷಣ ಸಂಸ್ಥೆಗಳು ಸತತ ಎರಡು ವರ್ಷ ಆನ್‌ಲೈನ್‌ ಪಾಠ ಮಾಡಿರುವುದರಿಂದ ಶಾಲೆ ನಿರ್ವಹಣೆ ವೆಚ್ಚವನ್ನು ಭರಿಸಿಲ್ಲ. ಶಿಕ್ಷಕರಿಗೂ ವೇತನ ಕಡಿತ ಮಾಡಿದ್ದರು. ಶಾಲೆ ಆರಂಭವಾಗುತ್ತಿದ್ದಂತೆ ಖಾಸಗಿ ಶಾಲೆಗಳು ತಮ್ಮ ಹಳೆಯ ಚಾಳಿ ಮುಂದುವರಿಸಿದ್ದು, ಪೋಷಕರಿಗೆ ಶುಲ್ಕದ ಬರೆ ಎಳೆಯುತ್ತಿರುವುದು ಸರಿಯಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣ
ಕಳೆದ ಎರಡು ವರ್ಷಗಳು ಕೊರೊನಾ ಸಮಯದಲ್ಲಿಯೂ ನಿಗದಿತ ಶುಲ್ಕವನ್ನು ಖಾಸಗಿ ಶಾಲೆಗಳು ಪಡೆಯಲು ಮುಂದಾಗಿದ್ದವು. ಈ ನಡುವೆ ಮಧ್ಯ ಪ್ರವೇಶ ಮಾಡಿದ್ದ ಸರಕಾರ ಶೇ. 70ರಷ್ಟು ಶುಲ್ಕವನ್ನು ಮಾತ್ರ ಪಡೆಯಬೇಕು ಎನ್ನುವ ನಿಯಮ ರೂಪಿಸಿದ್ದವು. ಅನಂತರ ಖಾಸಗಿ ಶಾಲೆಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು. ಶೇ. 15ರಷ್ಟು ಶುಲ್ಕವನ್ನು ಕಡಿತ ಮಾಡುವಂತೆ ಸೂಚಿಸಿ ಹೈಕೋರ್ಟ್‌ ತೀರ್ಪು ನೀಡಿತ್ತು. ಅದರಂತೆ ಶಾಲೆಗಳು ಶುಲ್ಕ ಪಡೆದಿದ್ದವು.

Advertisement

ಎರಡು ವರ್ಷಗಳಿಂದ ಶುಲ್ಕ ಹೆಚ್ಚಳ ಮಾಡಿಲ್ಲ. ನಿಯಮಗಳ ಪ್ರಕಾರ ಶೇ. 15ರಷ್ಟು ಶುಲ್ಕ ಹೆಚ್ಚಳ ಮಾಡಲು ಶಿಕ್ಷಣ ಇಲಾಖೆ ನಿಯಮಗಳಲ್ಲಿ ಇದೆ. ಆದ್ದರಿಂದ ಅನಿವಾರ್ಯವಾಗಿ ಹೆಚ್ಚಳ ಮಾಡಲೇಬೇಕಿದೆ.
-ಡಿ. ಶಶಿಕುಮಾರ್‌, ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ

ವಾಣಿಜ್ಯ ಚಟುವಟಿಕೆಗಳು ಈಗಷ್ಟೇ ಚೇತರಿಸಿಕೊಳ್ಳುತ್ತಿರುವುದರಿಂದ ಖಾಸಗಿ ಶಾಲೆಗಳು ಮಾನವೀಯತೆ ಆಧಾರದಲ್ಲಿ ಕಂತುಗಳಲ್ಲಿ ಶುಲ್ಕವನ್ನು ಪಡೆಯುವುದು ಉತ್ತಮ. ಶುಲ್ಕ ಹೆಚ್ಚಳ ಮಾಡಿದರೂ ಹೊರೆಯಾಗದಂತೆ ಪಡೆದರೆ ಪೋಷಕರಿಗೂ ಅನುಕೂಲವಾಗಲಿದೆ.
– ಚಂದ್ರ, ಪೋಷಕ

-ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next