Advertisement

ರಾಜ್ಯದ ಪ್ರಕರಣಗಳಲ್ಲಿ ಶೇ. 35 ನಗರದ್ದು

06:43 AM Jul 01, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಇಡೀ ಜೂನ್‌ನಲ್ಲಿ ಒಟ್ಟಾರೆ 4,169 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದು ಒಟ್ಟಾರೆ ರಾಜ್ಯದಲ್ಲಿನ ಪ್ರಕರಣಗಳ ಪೈಕಿ ಶೇ. 35ರಷ್ಟಾಗಿದೆ! ಒಂದೇ ತಿಂಗಳಲ್ಲಿ 83 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿಯೂ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಭಾಗಶಃ ಲಾಕ್‌ಡೌನ್‌ ಸಡಿಲಗೊಂಡ ನಂತರ ಅತಿ ಹೆಚ್ಚು ಕೋವಿಡ್‌ 19ಗೆ ತುತ್ತಾಗಿದ್ದಾರೆ.

Advertisement

ಈ ಮಧ್ಯೆ ನಗರದಲ್ಲಿ ಸತತ ನಾಲ್ಕನೇ ದಿನವೂ ಸೋಂಕಿತರ ಸಂಖ್ಯೆ 500ರ  ಗಡಿದಾಟಿದ್ದು, ಮಂಗಳವಾರ ಹೊಸದಾಗಿ 503 ಮಂದಿಗೆ ಸೋಂಕು ದೃಢಪಟ್ಟಿದೆ. ನಾಲ್ವರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 95ಕ್ಕೆ ಏರಿಕೆಯಾಗಿದೆ. 50 ವರ್ಷದ ಪುರುಷ, 45 ವರ್ಷದ ಮಹಿಳೆ, 64 ವರ್ಷದ ವೃದ್ಧ ಹಾಗೂ  63 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 485 ಆಗಿದೆ.

ಇನ್ನು ಬಸವನಗುಡಿ ಸುತ್ತಲಿನ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದ್ದರಿಂದ ಮಂಗಳವಾರ ಸ್ಥಳೀಯ ವರ್ತಕರು ಸ್ವಯಂ ಪ್ರೇರಿತವಾಗಿ  ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದ್ದಾರೆ. ಗಾಂಧಿ ಬಜಾರ್‌ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿನ ಅಂಗಡಿಗಳನ್ನು ಕೂಡ ಬಂದ್‌ ಆಗಿವೆ. ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದ್ದು,  ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಪಾದರಾಯನಪುರ, ಟಿಪ್ಪುನಗರ, ಚಾಮರಾಜಪೇಟೆಯಲ್ಲಿ ಸೋಂಕು ಮತ್ತೆ ಹೆಚ್ಚಳವಾಗಿದ್ದು, ಮಂಗಳವಾರ ಹಲವರಲ್ಲಿ ದೃಢಪಟ್ಟಿದೆ. ಈ ಪ್ರದೇಶದ ಕೆಲ ರಸ್ತೆಗಳನ್ನು ಸೀಲ್‌ಡೌನ್‌  ಮಾಡಲಾಗಿದ್ದು, ಈ ಭಾಗದಲ್ಲಿ ಸಮುದಾಯಕ್ಕೂ ಹರಡಿದೆಯೇ ಎಂಬ ಆತಂಕ ಎದುರಾಗಿದೆ. ಶಿವನಗರ ವಾರ್ಡ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಂಗಳವಾರ ಮೂವರಿಗೆ ಸೋಂಕು ದೃಢವಾಗಿದೆ. 29 ವರ್ಷದ ಯುವತಿ,  30 ವರ್ಷ ಮತ್ತು 34 ವರ್ಷದ ಪುರುಷರಿಗೆ ಕೋವಿಡ್‌ 19 ದೃಢಪಟ್ಟಿದೆ. ಈ ಹಿನ್ನೆಲೆ ವಾರ್ಡ್‌ನಲ್ಲಿ ಆತಂಕ ಹೆಚ್ಚಾಗಿದ್ದು, ಇದುವರೆಗೂ 21 ಪ್ರಕರಣಗಳು ವರದಿಯಾಗಿವೆ.

ಇಎಸ್‌ಐ ಆಸ್ಪತ್ರೆ ವೈದ್ಯೆಗೆ ಸೋಂಕು: ಈ ಮಧ್ಯೆ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ವೈದ್ಯೆಗೆ ಸೋಂಕು ದೃಢಪಟ್ಟಿದ್ದು, ಇಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಅದೇ ರೀತಿ, ವಿಕ್ಟೋರಿಯಾ ಆಸ್ಪತ್ರೆಯ 11 ಜನ ನರ್ಸ್‌ಗಳಿಗೆ  ಸೋಂಕು ಕಾಣಿಸಿಕೊಂಡಿದೆ. ಅವರೆಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದು, ಇವರ ಸಂಪರ್ಕದಲ್ಲಿದ್ದವರನ್ನು ಪಾಲಿಕೆ ಅಧಿಕಾರಿಗಳು ಕ್ವಾರಂಟೈನ್‌ ಮಾಡಿದ್ದಾರೆ.

Advertisement

ಸಚಿವರ ಮನೆ ಬಾಗಿಲಿಗೆ ಸೋಂಕು!: ಕಾಮಾಕ್ಷಿಪಾಳ್ಯದಲ್ಲಿರುವ ಸಚಿವ ಗೋಪಾಲಯ್ಯ ಅವರ ಮನೆ ಬಳಿ 25 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಯುವಕ ತೀವ್ರ ಜ್ವರದಿಂದ ಬಳಲು ತ್ತಿದ್ದು, ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ  ದಾಖಲು ಮಾಡಲಾ ಗಿದೆ. ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಧಿಕಾರಿಗಳ ಎಡವಟ್ಟು: ನೆಗೆಟಿವ್‌ ಎಂದು ಊರಿಗೆ ಹೋದ ಮಹಿಳೆಗೆ ಮಂಗಳವಾರ ಪಾಸಿಟಿವ್‌ ಎಂದು ಪಾಲಿಕೆ ಅಧಿಕಾರಿಗಳು ಕರೆ ಮಾಡಿದ್ದಾರೆ! ರಾಮನಗರ ಮೂಲದ ಮಹಿಳೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ವಾಬ್‌ ಟೆಸ್ಟ್‌ ಮಾಡಿಸಿದ್ದರು. ಲ್ಯಾಬ್‌ನಿಂದ ನೆಗೆಟಿವ್‌ ವರದಿ ಪಡೆದ ಮಹಿಳೆ ಬೆಂಗಳೂರಿನಿಂದ ರಾಮನಗರಕ್ಕೆ ಹೋಗಿ ತನ್ನ ಕೆಲಸಗಳಲ್ಲಿ ನಿರತರಾಗಿದ್ದಾರೆ. ಎರಡು ದಿನಗಳ ನಂತರ ಬಿಬಿಎಂಪಿ ಸಿಬ್ಬಂದಿ ಕರೆ ಮಾಡಿ, ನಿಮಗೆ ಪಾಸಿಟಿವ್‌ ಬಂದಿದೆ  ಎಂಬ ಮಾಹಿತಿ ನೀಡಿದ್ದು, ಸೋಂಕಿತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಅವರೊಂದಿಗೆ ಸಂಪರ್ಕದಲ್ಲಿದ್ದವರೆಲ್ಲಾ ಆತಂಕಕ್ಕೊಳಗಾಗಿದ್ದಾರೆ.

ಬಿಎಂಟಿಸಿ; ಮತ್ತೆ ನಾಲ್ಕು ಪ್ರಕರಣ ದಾಖಲು: ಬಿಎಂಟಿಸಿಯಲ್ಲಿ ಮಂಗಳವಾರ ಮತ್ತೆ ನಾಲ್ವರಿಗೆ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಉತ್ತರಹಳ್ಳಿ ಘಟಕದಲ್ಲಿ ಇಬ್ಬರು ಹಾಗೂ ಕೋರಮಂಗಲದಲ್ಲಿ 1 ಪ್ರಕರಣ ಕಂಡುಬಂದಿದ್ದು, ಇವರು ಈಚೆಗೆ 50  ವರ್ಷ ಮೇಲ್ಪಟ್ಟವರಿಗೆ ನಡೆಸಿದ ರ್‍ಯಾಂಡಮ್‌ ಪರೀಕ್ಷೆಗೊಳಪಟ್ಟಿದ್ದರು. ಅದರ ವರದಿ ಬಂದಿದ್ದು, ಸೋಂಕಿರುವುದು ದೃಢಪಟ್ಟಿದೆ.

ಅದೇ ರೀತಿ, ಸುಮನಹಳ್ಳಿ  ಘಟಕದಲ್ಲಿ ಒಬ್ಬ ಸಿಬ್ಬಂದಿ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಖುದ್ದಾಗಿ ಪ್ರತ್ಯೇಕವಾಗಿ ಪರೀಕ್ಷೆಗೊಳಗಾಗಿ ದ್ದರು. ಈಗ ವರದಿಯಲ್ಲಿ ಸೋಂಕಿರುವುದು ಕಂಡುಬಂದಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿರುವವರ ಪತ್ತೆ  ಮಾಡಲಾಗುತ್ತಿದೆ. ಇದುವರೆಗೆ 32 ಪ್ರಕರಣಗಳಲ್ಲಿ 12 ಜನ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next