ಮಂಗಳೂರು: ಮಂಗಳೂರಿನ ಉಳ್ಳಾಲ ಕಡಲಿನಲ್ಲಿ ತಳಸ್ಪರ್ಶಗೊಂಡು ನಿಂತಿರುವ ಸಿರಿಯಾದ ಪ್ರಿನ್ಸೆಸ್ ಮಿರಾಲ್ ಸರಕು ಸಾಗಾಟದ ಹಡಗು ಶೇ. 70ರಷ್ಟು ಮುಳುಗಿದ್ದು ಸಮುದ್ರದ ಅಬ್ಬರ ನೋಡಿದರೆ ಹಡಗು ಪೂರ್ಣ ಜಲಸಮಾಧಿಯಾಗುವ ಭೀತಿ ಇದೆ.
ಮಲೇಷ್ಯಾದಿಂದ ಲೆಬನಾನ್‌ಗೆ ಉಕ್ಕಿನ ಕಾಯಿಲ್‌ಗಳನ್ನು ಸಾಗಿಸುತ್ತಿದ್ದ ಹಡಗು ತಾಂತ್ರಿಕ ದೋಷ ಹಾಗೂ ಹಡಗಿನ ಮುಂಭಾಗದಲ್ಲಿ ರಂಧ್ರ ಉಂಟಾಗಿ ಅಪಾಯಕ್ಕೆ ಸಿಲುಕಿತ್ತು. ದುರಸ್ತಿಗಾಗಿ ನವಮಂಗಳೂರು ಬಂದರಿನ ಆ್ಯಂಕರೇಜ್ ಹಾಗೂ ಮಂಗಳೂರು ಹಳೇಬಂದರಿಗೆ ಈ ಹಡಗನ್ನು ತರಲು ಹಡಗಿನ ಏಜೆಂಟರು ಯತ್ನಿಸಿದ್ದರೂ ಅನುಮತಿ ಸಿಕ್ಕಿರಲಿಲ್ಲ. ಈ ನಡುವೆ ಉಚ್ಚಿಲ ಬಳಿ ಹಡಗು ತಳಸ್ಪರ್ಶಗೊಂಡು ನಿಂತಿತು. ಅದರಲ್ಲಿದ್ದ 15 ಮಂದಿ ಸಿರಿಯನ್ ನಾವಿಕರನ್ನು ಕೋಸ್ಟ್‌ಗಾರ್ಡ್ ತಂಡ ರಕ್ಷಣೆ ಮಾಡಿತ್ತು.
ದುರಸ್ತಿಗೆ ಪರಿಶೀಲನೆ
ಅಪಾಯಕ್ಕೆ ಸಿಲುಕಿರುವ ಪ್ರಿನ್ಸಸ್ ಮಿರಾಲ್ ಕಾರ್ಗೋ ಹಡಗನ್ನು ದುರಸ್ತಿ ಪಡಿಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಈ ನಡುವೆ ಕೋಸ್ಟ್ ಗಾರ್ಡ್ ನಿಂದ ರಕ್ಷಿಸಲ್ಪಟ್ಟ ಅಧಿಕಾರಿ ಹಾಗೂ ಸಿಬಂದಿ ಸೇರಿ 15 ಮಂದಿ ಸಿರಿಯಾ ದೇಶದ ಪ್ರಜೆಗಳನ್ನು ವಲಸೆ ವಿಭಾಗದ ಅಧಿಕಾರಿಗಳು ಬುಧವಾರ ಪಣಂಬೂರು ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ.
ತೆರವಿಗೆ ಚಿಂತನೆ
ಸದ್ಯ ಸಮುದ್ರದಲ್ಲಿ ಮುಳುಗಡೆ ಭೀತಿ ಎದುರಿಸುತ್ತಿರುವ ಪ್ರಿನ್ಸಸ್ ಮಿರಾಲ್ ಕಾರ್ಗೋ ನೌಕೆಯನ್ನು ತೆರವುಗೊಳಿಸುವ ಬಗ್ಗೆ ಹಡಗಿನ ಏಜೆನ್ಸಿ ಚಿಂತನೆ ನಡೆಸುತ್ತಿದೆ. ಹಡಗಿನ ಮಾಲಕರು ಟರ್ಕಿ ಮೂಲದವರಾಗಿದ್ದು ಮಂಗಳೂರಿನಲ್ಲಿ ಅದರ ಪ್ರತಿನಿಧಿ ಮಾರ್ಕಾನ್ ಶಿಪ್ಪಿಂಗ್ ಏಜೆನ್ಸಿ. ಏಜೆನ್ಸಿಯ ಪ್ರತಿನಿಧಿ ಮಂಗಳೂರಲ್ಲಿ ಇದ್ದು, ಬಂದರು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಮುಂಬಯಿಯ ಸ್ಮಿತ್ ಸಾಲ್ವೆಜ್ ಕಂಪೆನಿಯ ತಜ್ಞರು ಮಂಗಳೂರಿಗೆ ಆಗಮಿಸಿ ಹಡಗಿನ ಬಳಿ ತೆರಳಿ ಪರಿಶೀಲನೆ ನಡೆಸಬೇಕಿದೆ.
Related Articles
ಹಡಗಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 8,000 ಟನ್ ಸ್ಟೀಲ್ ಕಾಯಿಲ್ ಇದ್ದು ಅದನ್ನು ಪಡೆಯುವುದಕ್ಕಾದರೂ ಮಾಲಕರು ಹಡಗು ತೆರವು ಮಾಡಲು ಮುಂದಾಗಬಹುದು ಎಂದು ಅಂದಾಜಿಸಲಾಗಿದೆ.
ಪೊಲೀಸ್ ಠಾಣೆಗೆ ಹಾಜರು
ಕೋಸ್ಟ್‌ಗಾರ್ಡ್‌ನಿಂದ ರಕ್ಷಿಸಲ್ಪಟ್ಟ 15 ಮಂದಿ ಸಿರಿಯಾ ಪ್ರಜೆಗಳನ್ನು ಪಣಂಬೂರು ಪೊಲೀಸ್ ಠಾಣೆಗೆ ಹಾಜರುಪಡಿಸಲಾಗಿದೆ.
ಕೋಸ್ಟ್‌ಗಾರ್ಡ್ ಸುಪರ್ದಿಯಲ್ಲಿದ್ದ ಇವರನ್ನು ಬುಧವಾರ ಇಮಿಗ್ರೆಷನ್ ವಿಭಾಗದ ಅಧಿಕಾರಿಗಳು ಪಣಂಬೂರು ಪೊಲೀಸ್ ಠಾಣೆಗೆ ಹಾಜರುಪಡಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಿದ್ದು, ಸಂತ್ರಸ್ತರಿಗೆ ಜಿಲ್ಲಾಡಳಿತ ವಾಸ್ತವ್ಯದ ವ್ಯವಸ್ಥೆ ಮಾಡಲಿದೆ. ಅವರನ್ನು ಬೆಂಗಳೂರಿನಲ್ಲಿರುವ ವಿದೇಶಿ ಪ್ರಜೆಗಳ ತಾತ್ಕಾಲಿಕ ಆಶ್ರಿತ ಕೇಂದ್ರಕ್ಕೆ ಕಳುಹಿಸಲಾಗುವುದು. ದಿಲ್ಲಿಯ ವಿದೇಶಾಂಗ ವಿಭಾಗದ ಒಪ್ಪಿಗೆ ಬಳಿಕ ಅವರನ್ನು ಸಿರಿಯಾಕ್ಕೆ ಕಳುಹಿಸಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಬಂದರು ಅಧಿಕಾರಿಗಳು, ಕೋಸ್ಟ್‌ಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸರು ಉಳ್ಳಾಲ ಕಡಲ ತೀರದಲ್ಲಿ ಬೀಡುಬಿಟ್ಟಿದ್ದು, ಮುಳುಗಡೆ ಭೀತಿಯಲ್ಲಿರುವ ಹಡಗಿನತ್ತ ಕಣ್ಗಾವಲು ಇರಿಸಿದ್ದಾರೆ.