Advertisement

ಕಸಿ ತಂದುಕೊಟ್ಟ ಕಾಳುಮೆಣಸು

11:20 AM Feb 26, 2018 | Harsha Rao |

ಪುತ್ತೂರು ತಾಲೂಕಿನಿಂದ ಕೃಷಿಯ ಜಾಡು ಹಿಡಿದು ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮಕ್ಕೆ ಬಂದವರು ಜಗದೀಶ ರೈ. ಹತ್ತನೆಯ ತರಗತಿ ಮುಗಿಸಿದ ಬಳಿಕ ಅವರು ಬೇರೆ ನೌಕರಿಯ ಬೆನ್ನು ಹತ್ತಿ ಪೇಟೆಗೆ ಸೇರಲಿಲ್ಲ. ಅಡಿಕೆ ಮತ್ತು ತೆಂಗಿನ ಕೃಷಿಯ ಜೊತೆಗೆ ಕೋಕೋ, ಬಾಳೆ ಅಲ್ಲದೆ ರಬ್ಬರ್‌ ವ್ಯವಸಾಯಕ್ಕೆ ತಮ್ಮ ಮೂರೆಕರೆ ಜಾಗವನ್ನು ತೆರೆದಿಟ್ಟರು.

Advertisement

ಆಗ ಎಲ್ಲ ಅಡಿಕೆ ಮರಗಳಿಗೂ ಕರಿಮುಂಡ ತಳಿಯ ಕಾಳುಮೆಣಸು ಬಳ್ಳಿಯನ್ನು ನೆಟ್ಟು, ಸಾಕಿ ಉತ್ತಮ ಫ‌ಸಲನ್ನೂ ಪಡೆಯುತ್ತಿದ್ದರು. ಪ್ರತ್ಯೇಕವಾಗಿ ನೀರು ಮತ್ತು ಗೊಬ್ಬರ ಪೂರೈಸುವ ಅಗತ್ಯವಿಲ್ಲದೆ ಅಡಿಕೆ ಮರದ ಸಹವರ್ತಿಯಾಗಿ ಬೆಳೆಯುವ ಮೆಣಸಿನ ಬೆಳೆ ರೈಗಳ ಕೈ ಹಿಡಿಯಿತು. ಅದರ ಯೋಗ್ಯವಾದ ಧಾರಣೆಯಿಂದಾಗಿ ಸಾಕಷ್ಟು ಲಾಭವೂ ಆಗುತ್ತಿತ್ತು.

ಆದರೆ ಸೊರಗು ರೋಗದ ದೆಸೆಯಿಂದಾಗಿ ಮೆಣಸಿನ ಬಳ್ಳಿಗಳೆಲ್ಲವೂ ಒಣಗಿ ಬರಡಾದಾಗ ಗಣನೀಯವಾದ ಆದಾಯವೊಂದು ಬರಿದಾಗಿತ್ತು. ಮತ್ತೆ ಮತ್ತೆ ಬಳ್ಳಿ ನೆಡಲು ಯತ್ನಿಸಿದಾಗಲೂ ರೋಗದ ಸೋಂಕು ಕಾಡಿತು. ಹತಾಶರಾದ ಅವರಿಗೆ ಯಾರೋ ಕಸಿ ಕಟ್ಟಿದ ಕಾಳುಮೆಣಸಿನ ಬಳ್ಳಿಗಳನ್ನು ನೆಡುವಂತೆ ಸಲಹೆ ನೀಡಿದರು. ಕಾಡಿನಲ್ಲಿ ಸಹಜವಾಗಿ ಬೆಳೆಯುವ ಕಸಿ ಹಿಪ್ಪಲಿ ಗಿಡಕ್ಕೆ ಸೋಂಕು ಬಾಧೆಯಾಗದ ರೋಗ ನಿರೋಧಕ ಗುಣವಿದೆ.  ಈ ಗಿಡದ ಕೊಂಬೆಗಳಿಂದ ಸುಲಭವಾಗಿ ತಯಾರಿಸಿದ ಗಿಡದ ಶಿರೋಭಾಗವನ್ನು ಕತ್ತರಿಸಿ, ಸೀಳಿ, ಅದರಲ್ಲಿ ಮೆಣಸಿನ ಬಳ್ಳಿಯನ್ನಿರಿಸಿ ಕಸಿ ಕಟ್ಟಿದರೆ ಮಾತೃಗಿಡದ ಪ್ರಾಕೃತಿಕ ಗುಣದಿಂದಾಗಿ ಸೊರಗು ರೋಗವನ್ನು ದೂರಡುತ್ತದೆಂದು ಗೊತ್ತಾಯಿತು.

ಪ್ರಾಯೋಗಿಕ ಕೃಷಿಗಾಗಿ ನಾಲ್ಕು ವರ್ಷಗಳ ಹಿಂದೆ ರೈಗಳು ತಂದು ನೆಟ್ಟದ್ದು 400 ಬಳ್ಳಿಗಳನ್ನು. ಒಂದು ಬಳ್ಳಿಗೆ 35 ರೂಪಾಯಿ ಖರ್ಚು. ಮಳೆಗಾಲದ ಆರಿದ್ರಾ ನಕ್ಷತ್ರದ ಸೋನೆಗೆ ನಾಟಿ ಮಾಡಿದರೆ ಮೆಣಸಿನ ಗಿಡ ಬೇಗನೆ ಬೇರು ಕೊಡುತ್ತದೆ. ಹೀಗಾಗಿ ಒಂದು ಗಿಡ ಕೂಡ ಸಾಯದೆ ಚೆನ್ನಾಗಿ ಬೆಳೆಯಿತು ಎನ್ನುತ್ತಾರೆ ರೈಗಳು. ಕಸಿ ಜಾತಿಗೆ ಸೊರಗು ರೋಗ ಬರುವುದಿಲ್ಲ ಎಂಬುದಕ್ಕೆ ಅವರ ತೋಟದಲ್ಲಿ ನೆಟ್ಟ ಮರುವರ್ಷದಿಂದಲೇ ಫ‌ಸಲು ಕೊಡುತ್ತಿರುವ ಬಳ್ಳಿಗಳೇ ಸಾಕ್ಷಿ$ಯಾಗಿವೆ. ವರ್ಷದಿಂದ ವರ್ಷಕ್ಕೆ ಫ‌ಸಲು ಹೆಚ್ಚುತ್ತ ಬಂದಿದೆ.  ಕಳೆದ ಸಾಲಿನಲ್ಲಿ ಒಂದು ಕ್ವಿಂಟಾಲ್‌ ಮೆಣಸು ಮಾರಾಟಕ್ಕೆ ಸಿಕ್ಕಿದೆ.

ರೋಗ ಬರುವುದಿಲ್ಲ ಎಂದು ಕಸಿ ಬಳ್ಳಿಯ ಬಗೆಗೆ ಅಸಡ್ಡೆ ಮಾಡಬಾರದು ಎಂಬುದು ರೈಗಳ ಕಿವಿಮಾತು.
ಕಸಿಗೆ ಬಳಸಿರುವ ಮೂಲ ಗಿಡದ ತಳಭಾಗದ ಬೇರುಗಳು ಮಾತ್ರ ಮಣ್ಣಿನೊಳಗೆ ಹೋಗಬೇಕು. ಆದರೆ ನಾಟಿ ಮಾಡಿದ ಮೇಲುಭಾಗದಲ್ಲಿ ಸುಮಾರು ಒಂದು ಅಡಿ ಎತ್ತರದವರೆಗೂ ಕಾಡು ಹಿಪ್ಪಲಿಯ ಮಾತೃಗಿಡದ್ದು ಇದರಿಂದ ಉದ್ದವಾಗಿ ಬೇರುಗಳು ಹೊರಟು ಕೆಳಗಿಳಿದು ಮಣ್ಣಿನೊಳಗೆ ಸೇರದಂತೆ ಕತ್ತರಿಸಿ ತೆಗೆಯುತ್ತ ಇರಬೇಕು. ಈ ಬೇರು ಮಣ್ಣಿನೊಳಗಿಳಿದರೆ ಗಿಡಕ್ಕೆ ಅದರಿಂದಲೇ ಸೋಂಕು ತಗಲುತ್ತದೆ, ಬಳ್ಳಿ ಸಾಯುತ್ತದೆ.

Advertisement

ಅಲ್ಲದೆ, ಮೂಲದಲ್ಲಿರುವ ಹಿಪ್ಪಲಿ ಗಿಡದಲ್ಲಿ ಚಿಗುರುಗಳು ಬಂದರೆ ಚಿವುಟಿ ತೆಗೆಯಬೇಕು.
ಹಾಗೆಯೇ, ಬಿಟ್ಟರೆ ಅದು ದೊಡ್ಡದಾಗಿ ಬೆಳೆದು, ಮೆಣಸಿನ ಬಳ್ಳಿಯ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಇದರ ಕೊಂಬೆಯನ್ನು ಕತ್ತರಿಸಿ ತೆಗೆದು ಪಾಲಿಥಿನ್‌ ತೊಟ್ಟೆಯಲ್ಲಿ ನೆಟ್ಟು ಆರೈಕೆ ಮಾಡಿದರೆ ಬದುಕುತ್ತದೆ. ಅದಕ್ಕೆ ನಾವೇ ಮೆಣಸಿನ ಬಳ್ಳಿಯ ಕಸಿ ಕಟ್ಟಬಹುದು. ನೆಟ್ಟ ಗಿಡದಲ್ಲಿ ಕೊಂಬೆ ಚಿಗುರುತ್ತಿದೆಯೇ ಎಂಬುದನ್ನು ಆಗಾಗ ಗಮನಿಸುತ್ತಲೇ  ಇರಬೇಕಾದ ಮಹಣ್ತೀದ ಅಂಶ ಎನ್ನುತ್ತಾರೆ ರೈ.

ಪಾರಂಪರಿಕವಾದ ಮೆಣಸಿನ ಬಳ್ಳಿಯನ್ನು ಕಾಡಿನ ಮರಗಿಡಗಳಿಗೂ ನೆಡಬಹುದು. ಕಡು ಬಿಸಿಲಿಗೂ ನೀರಿನ ಬಯಕೆ ಇಲ್ಲದೆ ಸೊಂಪಾಗಿ ಬೆಳೆಯುತ್ತದೆ. ಆದರೆ ಕಸಿ ಗಿಡ ಹಾಗಲ್ಲ, ಬೇಸಿಗೆಯಲ್ಲಿ ನೀರು ಸಿಗದಿದ್ದರೆ ಒಣಗಿ ಹೋಗುತ್ತದೆ. ಹೀಗಾಗಿ ಇದು ಅಡಿಕೆ ತೋಟಕ್ಕೆ ಮಾತ್ರ ಸೂಕ್ತವಾದದ್ದು ವಿನಃ ಕಾಡುಗಳಲ್ಲಿ ಕೃಷಿ ಮಾಡಲು ಯೋಗ್ಯವಾದುದಲ್ಲ ಎನ್ನುತ್ತಾರೆ.

ಹೆಚ್ಚಾಗಿ ಈ ಕಸಿಗೆ ಪಣಿಯೂರು ತಳಿಯನ್ನೇ ಆರಿಸುವ ಕಾರಣ ವರ್ಷವೂ ಫ‌ಸಲು ಸಿಗುತ್ತದೆ. ಒಂದು ಅಡಕೆಮರದ ಬಳ್ಳಿಯಿಂದ ಒಂದು ಕಿಲೋ ತನಕ ಎಕರೆಗೆ ಐದು ಕ್ವಿಂಟಾಲ್‌ ಫ‌ಸಲು ಕೊಯ್ಯಲು ಸಾಧ್ಯವಿದೆ.

ಅಡಿಕೆ ಮರಕ್ಕೆ ರಸಗೊಬ್ಬರ ಹಾಕುವಾಗ ಈ ಬಳ್ಳಿಯ ಬೇರುಗಳಿಗೆ ನೇರವಾಗಿ ತಗುಲದಂತೆ ಎಚ್ಚರ ವಹಿಸಬೇಕು. ಬೇರುಗಳಿಗೆ ಸ್ವಲ್ಪ ರಾಸಾಯನಿಕ ತಗಲಿದರೂ ಬಳ್ಳಿ ಒಣಗುತ್ತದೆಂಬುದನ್ನು ಮರೆಯಬಾರದು  ಎನ್ನುವ ರೈಗಳಲ್ಲಿ ಹಸನಾದ ಹೈನುಗಾರಿಕೆ ಇದೆ. ಸಗಣಿ ಗೊಬ್ಬರವನ್ನು ಧಾರಾಳವಾಗಿ ಹಾಗೂ ರಸಗೊಬ್ಬರವನ್ನು ಮಿತ ಪ್ರಮಾಣದಲ್ಲಿ ಕೃಷಿಗೆ ಉಪಯೋಗಿಸುತ್ತಾರೆ. ಇದಲ್ಲದೆ, ಒಣಭೂಮಿಯಲ್ಲಿ ಉಳ್ಳಾಲ ಭಾಸ್ಕರ ತಳಿಯ ಗೇರು ಕೃಷಿಯನ್ನು ಮಾಡಿ ರೈಗಳು ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ.

ಮಾಹಿತಿಗೆ -9741815301

– ಪ.ರಾಮಕೃಷ್ಣ ಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next