Advertisement

ಕಾಳುಮೆಣಸು ಬೆಲೆ ಸ್ಥಿರೀಕರಣಕ್ಕೆ ಮನವಿ

11:34 AM Nov 29, 2017 | |

ಮಂಗಳೂರು: ಕಾಳುಮೆಣಸು ದರ ಸ್ಥಿರೀಕರಣದ ನಿಟ್ಟಿನಲ್ಲಿ ಮರು ರಫ್ತುನಿಂದ ಆಗುವ ಮೋಸವನ್ನು ತಡೆಗಟ್ಟುವುದು, ಕನಿಷ್ಠ ಆಮದು ದರ ನಿಗದಿ ಸೇರಿದಂತೆ ಪೂರಕ ಕ್ರಮಗಳನ್ನು ಕೈಗೊಳ್ಳು ವಂತೆ ಕಾಳುಮೆಣಸು ಬೆಳೆಗಾರರ ಸಂಘಗಳ ಸಮನ್ವಯ ಸಮಿತಿಯ ನಿಯೋಗವು ಕೇಂದ್ರ ವಾಣಿಜ್ಯ ಸಚಿವ ಸುರೇಶ ಪ್ರಭು ಅವರನ್ನು ಭೇಟಿ ಮಾಡಿ ಆಗ್ರಹಿಸಿದೆ.

Advertisement

ಸಮನ್ವಯ ಸಮಿತಿ ಸಂಚಾಲಕ ಕೊಂಕೋಡಿ ಪದ್ಮನಾಭ ಅವರು ನಗರದ ಕ್ಯಾಂಪ್ಕೋ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಕಳೆದ ವರ್ಷ ಕಾಳುಮೆಣಸಿನ ದರ ಕಿಲೋಗೆ 650 ರೂ. ಇದ್ದು ಈಗ ಕಡಿಮೆಯಾಗುತ್ತಾ ಕಿಲೋಗೆ 380 ರೂ.ಗೆ ಇಳಿದಿದೆ. ಕೆಲವು ನಿರ್ದಿಷ್ಟ ಕಾರಣಗಳಿಂದಾಗಿ ಹೀಗಾಗಿದೆ. ವಿಯಟ್ನಾಂನಿಂದ ಕಳಪೆ ಗುಣಮಟ್ಟದ ಕಾಳುಮೆಣಸನ್ನು ಆಮದು ಮಾಡಿ ಭಾರತದ ಮಾರುಕಟ್ಟೆಯಲ್ಲಿ ಸುರಿದು ಅದೇ ಚೀಲದಲ್ಲಿ ಭಾರತದ ಅತ್ಯುತ್ತಮ ಗುಣಮಟ್ಟದ ಕಾಳುಮೆಣಸು ತುಂಬಿ ಮೌಲ್ಯವರ್ಧಿತ ಕಾಳುಮೆಣಸು ಎಂಬ ಹೆಸರಿ ನೊಂದಿಗೆ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಈ ಮೂಲಕ ತೆರಿಗೆ ವಂಚನೆ ಜತೆಗೆ ಭಾರತದ ಗುಣಮಟ್ಟದ ಕಾಳುಮೆಣಸುನಿಂದ ಬರುವ ಅಧಿಕ ಬೆಲೆಯನ್ನು ಕೊಳ್ಳೆ ಹೊಡೆಯುವ ದಂಧೆ ನಡೆಯುತ್ತಿದೆ. ಇದರಿಂದಾಗಿ ರಫ್ತುದಾರರಿಗೆ ಕಿಲೋಗೆ ಸುಮಾರು 160 ರೂ. ಆಮದು ಶುಲ್ಕ ಮರು ಪಾವತಿ ವಿನಾಯಿತಿ ದೊರೆಯುತ್ತದೆ. ಕಾಳು ಮೆಣಸಿನ ರಫ್ತಿನಲ್ಲಿ ಭಾರತದ ಕಾಳುಮೆಣಸಿನ ದರವು ವಿಯಟ್ನಾಂ ಕಾಳುಮೆಣಸಿನ ದರಕ್ಕಿಂತ ಕಿಲೋಗೆ ಸುಮಾರು 150 ರೂ. ಹೆಚ್ಚು ದೊರೆಯುತ್ತದೆ. ಹೀಗೆ ರಫ್ತುದಾರರು ಕಿಲೋಗೆ ಸುಮಾರು 300 ರೂ. ಹೆಚ್ಚು ಲಾಭ ಗಳಿಸುತ್ತಿದ್ದಾರೆ ಎಂದು ವಿವರಿಸಿದರು.

ಸಾರ್ಕ್‌ ದೇಶಗಳ ನಿಯಮಗಳನ್ನು ದುರುಪ ಯೋಗಪಡಿಸಿ ಸಿಲೋನ್‌ ದೇಶದ ನಕಲಿ ಪ್ರಮಾಣ ಪತ್ರ ಪಡೆದು ಭಾರತಕ್ಕೆ  ಕಾಳು ಮೆಣಸು ಆಮದು ಮಾಡಲಾಗುತ್ತಿದೆ. ಹೀಗೆ ದೇಶದ ಮಾರುಕಟ್ಟೆ ಯಲ್ಲಿ ಕಾಳುಮೆಣಸು ತುಂಬಿಸಿರುವುದರಿಂದ ದರ ಕಡಿಮೆಯಾಗಿದೆ ಎಂದರು.

ಸಚಿವರ ಭರವಸೆ
ಈ ಎಲ್ಲ ಅಂಶಗಳನ್ನು ಮನಗಂಡು ರಾಷ್ಟ್ರದ ಪ್ರಮುಖ 14 ಕಾಳುಮೆಣಸು ಬೆಳೆಗಾರರ ವಿವಿಧ ಸಂಘಟನೆಗಳು ಕ್ಯಾಂಪ್ಕೋವನ್ನು ಸೇರಿಸಿಕೊಂಡು ನ. 22ರಂದು ಸಕಲೇಶಪುರದಲ್ಲಿ ಸಭೆ ನಡೆಸಿ ಸಮನ್ವಯ ಸಮಿತಿಯನ್ನು ರಚಿಸಲಾಯಿತು. ನ. 24ರಂದು ಸಂಸ್ಥೆಗಳ ನಿಯೋಗ ತುರ್ತಾಗಿ ಕೇಂದ್ರ ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರು ಭೇಟಿ ಮಾಡಿ ಕಾಳುಮೆಣಸು ವ್ಯವಹಾರಗಳಲ್ಲಿ ಆಗುವಂತಹ ಮೋಸಗಳ ಬಗ್ಗೆ ಗಮನ ಸೆಳೆದಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಇದೇ ಸಂದರ್ಭ ವಾಣಿಜ್ಯ ಇಲಾಖೆಯ ಹಲವಾರು ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಲಾಗಿದೆ ಎಂದರು. 

ಸಮಿತಿಯ ಸಮನ್ವಯಕಾರ ವಿಶ್ವನಾಥ ಕೆ.ಕೆ. ಅವರು ಮಾತನಾಡಿ, ಈಗಾಗಲೇ ಕೊಡಗಿನ ಗೋಣಿ ಕೊಪ್ಪಲಿನಲ್ಲಿ ವಿಯೆಟ್ನಾಂನಿಂದ ಆಮದು ಮಾಡಿರುವ 180 ಟನ್‌ ಕಾಳುಮೆಣಸನ್ನು ವಶಪಡಿಸಿಕೊಳ್ಳಲಾಗಿದೆ. ಕೊಚ್ಚಿ ಬಂದರು ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವುದು ಕಂಡು ಬಂದಿದೆ ಎಂದು ತಿಳಿಸಿದರು.  

Advertisement

ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಮಾತನಾಡಿ, ಕಾಳುಮೆಣಸು ಬೆಳೆ ಸ್ಥಿರೀಕರಣದ ನಿಟ್ಟಿನಲ್ಲಿ ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರನಾರಾಯಣ ಭಟ್‌, ನಿರ್ದೇಶಕ ಪದ್ಮರಾಜ ಪಟ್ಟಾಜೆ, ವ್ಯವಸ್ಥಾಪಕ ನಿರ್ದೇಶಕ ಸುರೇಶ್‌ ಭಂಡಾರಿ, ಕೊಡಗು ಕಾಫಿ ಪ್ಲಾಂಟರ್ ಅಸೋಸಿಯೇಶನ್‌ ಅಧ್ಯಕ್ಷ ಪ್ರವೀಣ್‌ ದೇವಯ್ಯ ಉಪಸ್ಥಿತರಿದ್ದರು.

ಉತ್ಪಾದನಾ ವೆಚ್ಚ ಕಂಡುಹಿಡಿಯಲು ವಿನಂತಿ
ಕಾಳು ಮೆಣಸಿನ ಉತ್ಪಾದನಾ ವೆಚ್ಚವನ್ನು ಕಂಡುಹಿಡಿದು ಕೇಂದ್ರ ಸರಕಾರಕ್ಕೆ ಈ ತಿಂಗಳೊಳಗೆ ವರದಿ ಸಲ್ಲಿಸಲು ಸಿಪಿಸಿಆರ್‌ಐ ಹಾಗೂ ಸಂಬಾರ ನಿರ್ದೇಶನಾಲಯದ ನಿರ್ದೇ ಶಕರನ್ನು ವಿನಂತಿಸಲಾಗಿದೆ. ಆಮದು ದರವನ್ನು ನಿಗದಿಪಡಿಸಲು ಉತ್ಪಾದನಾ ವೆಚ್ಚ ವನ್ನು ಕಂಡುಹಿಡಿಯುವುದು ಅವಶ್ಯ ವಾಗಿದೆ. ಕಾಳು ಮೆಣಸು ಬೆಳೆಗಾರರು ಬೆಲೆ ಕುಸಿತ ದಿಂದ ಯಾವುದೇ ರೀತಿಯ ಆತಂಕ ಪಡುವ ಆವಶ್ಯಕತೆ ಇಲ್ಲ. ಈಗಾಗಲೇ ಸರಕಾರದ ಡಿಆರ್‌ಐ ವಿಭಾಗವು ಅಗತ್ಯ ಕ್ರಮ ಗಳನ್ನು ಕೈಗೊಂಡಿದೆ ಮತ್ತು ಸುಮಾರು 24 ಕೋ.ರೂ. ಮೊತ್ತದ ಹಗರಣವನ್ನು ಪತ್ತೆ ಹಚ್ಚಿ ಸಂಬಂಧ ಪಟ್ಟವರನ್ನು ಬಂಧಿಸಿದೆ. ಮುಂದಿನ ದಿನಗಳಲ್ಲಿ ಕಾಳುಮೆಣಸಿನ ದರ ಸ್ಥಿರವಾಗುವಂತೆ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಕೊಂಕೋಡಿ ಪದ್ಮನಾಭ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next