“ಅಧ್ಯಕ್ಷರ ಮೊಗದಲ್ಲಿ ನಗು ಮೂಡಿದೆ…’ ಹೌದು, ಇದು ಯಾವುದೋ ರಾಜಕಾರಣಿಯ ವಿಷಯವಲ್ಲ, ಸಿನಿಮಾ ಸುದ್ದಿ. “ಅಧ್ಯಕ್ಷ ಇನ್ ಅಮೆರಿಕ’ ಚಿತ್ರಕ್ಕೆ ಜನಬಲ ಸಿಕ್ಕಿದೆ. ಹಾಗಾಗಿ, ಚಿತ್ರತಂಡ ಖುಷಿಯ ಮೂಡ್‌ನಲ್ಲಿದೆ. ಸಿನಿಮಾಗೆ ಭರಪೂರ ಬೆಂಬಲ ಸಿಕ್ಕಿದೆ ಅಂತ ಹೇಳಿಕೊಳ್ಳಲೆಂದೇ ಅವರು ಪತ್ರಕರ್ತರ ಮುಂದೆ ಬಂದಿದ್ದರು. ಮೊದಲು ಖುಷಿ ಹಂಚಿಕೊಂಡಿದ್ದು, ನಟ ಶರಣ್. “ನಿಮ್ಮಿಂದ ನಾವು ಇಲ್ಲಿಯವರೆಗೆ ಬಂದಿದ್ದೇವೆ. ಜನರ ಬೆಂಬಲ ಈ ಅಧ್ಯಕ್ಷನಿಗೆ ಸಿಕ್ಕಿದೆ.
ಹಾಗಾಗಿ ಎಲ್ಲರ ಮೊಗದಲ್ಲೂ ಮಂದಹಾಸ ಮೂಡಿದೆ. ನಿರ್ಮಾಣ ಸಂಸ್ಥೆಗೆ ಇದು ಮೊದಲ ಸಿನಿಮಾ. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಒಳ್ಳೆಯ ಗೆಲುವು ಸಿಕ್ಕಿದೆ’ ಎಂದು ಖುಷಿಗೊಂಡರು ಶರಣ್. ರಾಗಿಣಿ ಕೂಡ ಅಂದು ಸಂತಸದಲ್ಲಿದ್ದರು. ಅದಕ್ಕೆ ಕಾರಣ, ಅಧ್ಯಕ್ಷನಿಗೆ ಸಿಕ್ಕ ಗೆಲುವು. “ಎಲ್ಲೇ ಹೋದರು ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ. ಸಿನಿಮಾ ಕಾಮಿಡಿಯಾಗಿರುವುದರಿಂದ ಜನರು ಇಷ್ಟಪಟ್ಟಿದ್ದಾರೆ.
ಆದಷ್ಟು ಬೇಗ ಈ ನಿರ್ಮಾಣ ಸಂಸ್ಥೆ ಇನ್ನೊಂದು ಚಿತ್ರ ಮಾಡಲಿ’ ಎಂಬುದು ರಾಗಿಣಿ ಮಾತು. ನಿರ್ದೇಶಕ ಯೋಗಾನಂದ್ ಮುದ್ದಾನ್ ಅವರ ಖುಷಿಗಂತೂ ಪಾರವೇ ಇರಲಿಲ್ಲ. “ಇತ್ತೀಚೆಗೆ ಸಕ್ಸಸ್ ಪಾರ್ಟಿ ಅನ್ನೋದು ಮರೀಚಿಕೆಯಾಗಿತ್ತು. ಇಂತಹ ಸಂದರ್ಭದಲ್ಲೂ ಅಧ್ಯಕ್ಷನ ಕಾಮಿಡಿಗೆ ಜನರು ಫಿದಾ ಆಗಿದ್ದಾರೆ ಎಂದರು ನಿರ್ದೇಶಕ ಯೋಗಾನಂದ್. ಇನ್ನು, ಅಂದು ಶಿವರಾಜ್ ಕೆ.ಆರ್‌ಪೇಟೆ ಹಾಗು ಸುಂದರ್ ಅವರು ಸಹ, ಇಂತಹ ಒಳ್ಳೆಯ ಸಂಸ್ಥೆಯಲ್ಲಿ ನಾವು ಕೆಲಸ ಮಾಡಿದ್ದು ಖುಷಿಕೊಟ್ಟಿದೆ.
ಅದರಲ್ಲೂ ಚಿತ್ರ ಗೆಲುವು ಕಂಡಿರುವುದು ಸಂತಸ ಹೆಚ್ಚಿಸಿದೆ ಎಂದರು ಅವರು. ಸದ್ಯಕ್ಕೆ ಚಿತ್ರ ವಿದೇಶದಲ್ಲೂ ಪ್ರದರ್ಶನ ಕಾಣುತ್ತಿದೆ. ಕಾರ್ಯಕಾರಿ ನಿರ್ಮಾಪಕಿ ಜಯ ಅವರು ಕನ್ನಡಿಗರು ಹೆಚ್ಚು ಇರುವ ಅಮೆರಿಕ ನಗರದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸಿಂಗಾಪುರ ಇತರೆಡೆಯೂ ಚಿತ್ರವಿದೆ ಎಂದರು. ಇದೇ ವೇಳೆ, ಚಿತ್ರತಂಡ ತಂತ್ರಜ್ಞರಿಗೆ ನೆನಪಿನ ಕಾಣಿಕೆ ವಿತರಿಸಿ, ಸಂಭ್ರಮಿಸಿತು.