Advertisement
ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲಿಗೆ ತಾಯಿ-ಮಗಳು ನೀರಿನಲ್ಲಿ ಕೊಚ್ಚಿ ಹೋದ ಕುಟುಂಬ ಸದಸ್ಯರನ್ನು ಭೇಟಿ ನೀಡಿ ಸಾಂತ್ವಾನ ಹೇಳಿದರು. ರಾತ್ರಿ ಮಳೆಗೆ ಜೀವ ಕಳೆದುಕೊಂಡವರ ಬಗ್ಗೆ ಬಹಳ ದುಃಖವಾಗುತ್ತಿದ್ದು, ಕೂಡಲೇ ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದರು. ನಂತರ ಅನಾಹುತ ಸಂಭವಿಸಿದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾವಿನ ಮನೆಯಲ್ಲಿ ಯಾರೂ ರಾಜಕಾರಣ ಮಾಡಬಾರದು. ಆದರೆ, ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿ, ನಗರದಲ್ಲಿ ಈ ಭಾರಿ ಹೆಚ್ಚಿನ ಮಳೆಯಾಗಿರುವುದರಿಂದಾಗಿ ಅನಾಹುತಗಳು ಸಂಭವಿಸಿದ್ದು, ಪರಿಹಾರ ಕಾರ್ಯಗಳಿಗೂ ತೊಂದರೆಯಾಗುತ್ತಿದೆ. ಆದರೆ, ಬಿಜೆಪಿಯವರು ರಾಜಕೀಯಕ್ಕಾಗಿ ಸಾವಿನ ಮನೆಗೆ ಬಂದಾಗ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ದೂರಿದರು.
Related Articles
Advertisement
ಸಹಕಾರ ನೀಡಬೇಕೇ ಹೊರತು ರಾಜಕಾರಣ ಮಾಡಬಾರದು: ಎಚ್‌ಡಿಡಿ ಭಾರಿ ಮಳೆಯಿಂದ ಅನಾಹುತಗಳು ಸಂಭವಿಸಿದಾಗ ಪರಿಹಾರ ಕೈಗೊಳ್ಳು ಸರ್ಕಾರಕ್ಕೆ ಸಹಕಾರ ನೀಡಬೇಕೆ ಹೊರತು, ರಾಜಕೀಯ ಮಾಡಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ತಿಳಿಸಿದರು. ಕುರುಬರಹಳ್ಳಿಯಲ್ಲಿ ಮಳೆಯಿಂದ ಮೃತಪಟ್ಟ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ ನಂತರ ಮಾತನಾಡಿ, ಈ ಹಿಂದೆ ನಾನೆಂದು ಇಂತಹ ಮಳೆಯನ್ನು ಕಂಡಿರಲಿಲ್ಲ. ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿನ ಮಳೆಯಾಗಿದ್ದು, ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ತಿಳಿಸಿದರು. ಇಂತಹ ದುರಂತಗಳು ಸಂಭವಿಸದಾಗ ಸರ್ಕಾರಕ್ಕೆ ಸಹಕಾರ ನೀಡಬೇಕೇ ಹೊರತು, ಸಾವಿನ ಮನೆಯಲ್ಲಿ ರಾಜಕಾರಣ ಮಾಡಬಾರದು. ದೊಡ್ಡ-ದೊಡ್ಡ ಮಾತನಾಡುತ್ತಿರುವ ಬಿಜೆಪಿಯವರೇನು ಸತ್ಯ ಹರಿಶ್ಚಂದ್ರರಾ? ಎಂದು ಟೀಕಿಸಿದರು. ಇದೇ ವೇಳೆ ಮೃತ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡಿದ ಅವರು, ಮೃತರ ಕುಟುಂಬಗಳಲ್ಲಿ ಒಬ್ಬರಿಗೆ ಸರ್ಕಾರ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತರಿಗೆ ರಕಣೆ ನೀಡಿ: ಬಿಎಸ್ವೈಶನಿವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ 3 ಕುಟುಂಬಗಳಿಗೆ ಸಾಂತ್ವನ ಹೇಳಿದರು. ಜತೆಗೆ ಮೃತರ ಕುಟುಂಬಗಳಿಗೆ ಪರಿಹಾರ ನೀಡಿದರು. ನಂತರ ಮಾತನಾಡಿ, ಮಳೆಯಿಂದಾಗಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕಿಂತ ಮೊದಲು ಅವರಿಗೆ ರಕ್ಷಣೆ ನೀಡಬೇಕು. ಸರ್ಕಾರ ಕೂಡಲೇ ಕಾಲುವೆಗಳನ್ನು ದುರಸ್ತಿಪಡಿಸದಿದ್ದರೆ ಇನ್ನೆಷ್ಟು ಸಾವುಗಳನ್ನು ನೋಡಬೇಕಾಗುತ್ತದೆಯೋ ಎಂದು ದೂರಿದರು. ಬಿಬಿಎಂಪಿ ಕಮಿಷನ್ ಏಜೆಂಟ್ ಆಗಿದ್ದು, ಕಪ್ಪುಪಟ್ಟಿಯಲ್ಲಿರುವು ಗುತ್ತಿಗೆದಾರರಿಗೆ ಶೇ. 24 ರಿಂದ 25 ಹೆಚ್ಚುವರಿ ಹಣ ನೀಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಜನರ ರಕ್ಷಣೆ ಸರ್ಕಾರ ಎಂದೂ ಮುಂದಾಗಿಲ್ಲ. ಸಚಿವ ಜಾರ್ಜ್ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಜನರ ಪಾಲಿಕೆ ಬದುಕಿದ್ದರೂ ಸತ್ತಂತಾಗಿದೆ ಎಂದು ಟೀಕಿಸಿದರು. ಈ ವೇಳೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಮತ್ತಿತರರಿದ್ದರು.