Advertisement

ಜನರ ಅಭಿಪ್ರಾಯ ಭೇದವೇ ರಾಷ್ಟ್ರದ್ರೋಹ ಎಂಬಂತಾಗಿದೆ

11:20 AM Jul 23, 2017 | Team Udayavani |

ಬೆಂಗಳೂರು: ಪ್ರಜಾಪ್ರಭುತ್ವದ ಜೀವಂತವಿರಲು ಅಭಿಪ್ರಾಯಭೇದಕ್ಕೆ ಅವಕಾಶ ಇರಬೇಕು. ಅಭಿಪ್ರಾಯಭೇದ ನಿರಾಕರಿಸಲ್ಪಟ್ಟರೆ ಪ್ರಜಾಪ್ರಭುತ್ವ ಸರ್ವಾಧಿಕಾರದ ರೂಪ ಪಡೆದುಕೊಳ್ಳುತ್ತದೆ ಎಂದು ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರು ಅಭಿಪ್ರಾಯಪಟ್ಟಿದ್ದಾರೆ. “ಡಯಲಾಗ್‌’ ಸಂಸ್ಥೆಯು ಶನಿವಾರ ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಿದ್ದ “ಸಹಸ್ರಮಾನದ ರಾಜಕೀಯ ಮಾತುಕತೆ’ ಸಂವಾದದಲ್ಲಿ ಪ್ರಜಾಪ್ರಭುತ್ವ ಮತ್ತು ಅಭಿಪ್ರಾಯಭೇದ’ ವಿಷಯದ ಕುರಿತು ಅವರು ಮಾತನಾಡಿದರು. 

Advertisement

ಭಿನ್ನಾಭಿಪ್ರಾಯ ಅಥವಾ ಅಭಿಪ್ರಾಯಭೇದವನ್ನು ದೇಶದಲ್ಲಿ ಮೂಲಭೂತ ಹಕ್ಕು ಎಂದೇ ಪರಿಗಣಿಸಲಾಗುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಯಾವುದೇ ವಿಷಯ ಅಥವಾ ವಿಚಾರದಲ್ಲಿ ಅಸಮ್ಮತಿ ವ್ಯಕ್ತಪಡಿಸುವ ಮತ್ತು ಅಭಿಪ್ರಾಯಭೇದ ಇಟ್ಟುಕೊಳ್ಳುವ ಸಂಪೂರ್ಣ ಅಧಿಕಾರವಿದೆ. ಅಭಿಪ್ರಾಯಭೇದ ವ್ಯಕ್ತಪಡಿಸಿದ ಕಾರಣಕ್ಕೆ ಯಾರೊಬ್ಬರನ್ನೂ ಹಿಂಸಿಸುವ, ಅಮಾನಿಸುವ ಪ್ರವೃತ್ತಿ ಸರಿಯಲ್ಲ ಎಂದರು.

“ಭಾರತ್‌ ಮಾತಾ ಕೀ ಜೈ’ ಘೋಷಣೆ ಕೂಗುವ ವಿವಾದವನ್ನು ಪ್ರಸ್ತಾಪಿಸಿದ ತರೂರು, ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಅದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಅಭಿಪ್ರಾಯಭೇದವಿದ್ದರೂ, ಮೌನವಾಗಿರುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬರುವಂತಾಗಿದ್ದು, ವಿಪರ್ಯಾಸ. ಅಸಮ್ಮತಿ ಅಥವಾ ಅಭಿಪ್ರಾಯಭೇದವನ್ನು ಉದಾರವಾಗಿ ಸ್ವೀಕರಿಸುವ ಮನಸ್ಥಿತಿಯ ಅಗತ್ಯವಿದೆ ಎಂದರು. 

ಪ್ರಜಾಪ್ರಭುತ್ವ ಎಂದರೆ, ಸ್ವಾತಂತ್ರ್ಯ ನಂತರದ ಪರಿಕಲ್ಪನೆ ಮಾತ್ರ ಅಲ್ಲ. ದೇಶದ ಪ್ರಜಾಪ್ರಭುತ್ವಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ದೇಶದಲ್ಲಿ ಭಿನ್ನಾಭಿಪ್ರಾಯಗಳಿಗೆ ಯಾವತ್ತೂ ಗೌರವ ಸಿಕ್ಕಿದೆ. ಪಂಚಾಯಿತಿ ಕಟ್ಟೆಯಿಂದ ಪಾರ್ಲಿಮೆಂಟ್‌ವರೆಗೂ ಅಭಿಪ್ರಾಯಭೇದಕ್ಕೆ ಮಾನ್ಯತೆ ನೀಡುತ್ತಾ ಬರಲಾಗಿದೆ.

ಆದರೆ, ಇಂದು ಪರಿಸ್ಥಿತಿ ಭಿನ್ನವಾಗಿದೆ. ಅಭಿಪ್ರಾಯಭೇದ ಅಥವಾ ಅಸಮ್ಮತಿಯನ್ನು ರಾಷ್ಟ್ರದ್ರೋಹ ಎಂದು ಪರಿಗಣಿಸಲಾಗುತ್ತಿದೆ ಎಂದು ತೂರುರು ವಿಷಾದ ವ್ಯಕ್ತಪಡಿಸಿದರು. ಸಂವಾದದಲ್ಲಿ ರಾಜ್ಯಸಭಾ ಸದಸ್ಯ ಪ್ರೊ. ರಾಜೀವಗೌಡ, ಶಾಸಕ ಡಾ. ಸಿ.ಎನ್‌. ಅಶ್ವಥನಾರಾಯಣ, ಪ್ರಕಾಶ್‌ ಬೆಳವಾಡಿ, ತೇಜಸ್ವಿಸೂರ್ಯ, ಅನಿಲ್‌ ಶೆಟ್ಟಿ, ಡೆನಿಯಲ್‌ ಸುಕುಮಾರ್‌ ವಿಷಯ ಮಂಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next