ಮೈಸೂರು: ಕೇಂದ್ರ ಸರ್ಕಾರ ನಿರಂತರ ತೈಲ ಬೆಲೆ ಏರಿಸಿ ಜನಸಾಮಾನ್ಯರ ಹಣ ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಘೋಷಣೆ ಕೂಗಿದರು.
ಈ ವೇಳೆ ಎಂಎಲ್‌ಸಿ ಧರ್ಮಸೇನ ಮಾತನಾಡಿ, ಮನುಷ್ಯನಿಗೆ ಅಗತ್ಯ ವಸ್ತುಗಳಲ್ಲಿ ತೈಲವೂ ಒಂದು. ಆದರೆ ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಜನರ ಹಣ ಲೂಟಿ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್ 19 ವೈರಾಣು ಹರಡುವಿಕೆ ತಡೆಯಲು ವಿಫಲವಾಗಿವೆ. ಜೊತೆಗೆ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ.
ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ದೂರಿದರು. ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತಳ್ಳುವ ಗಾಡಿ ಮೇಲೆ ಕುಳಿತು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ನೀಡುವ ಮೂಲಕ ಹಕ್ಕೊತ್ತಾಯ ಮಾಡಿದರು. ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದು, ಬ್ಯಾರಲ್‌ಗೆ 130 ರೂ. ಇದೆ. ಆದರೆ ಭಾರತದಲ್ಲಿ ದರ ಏರಿಕೆ ಮಾಡಿದ್ದಾರೆ. ಜನಸಾಮಾನ್ಯರ ಮೇಲೆ ದುಬಾರಿ ಬೆಲೆ ಹಾಕುತ್ತಿದೆ ಎಂದು ಕಿಡಿ ಕಾರಿದರು.
ಸೈಕಲ್ ತುಳಿದು ಪ್ರತಿಭಟನೆ: ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನಗರದ ರಾಮಸ್ವಾಮಿ ವೃತ್ತದಿಂದ ರೈಲ್ವೇ ನಿಲ್ದಾಣದವರೆಗೆ ಸೈಕಲ್ ಸವಾರಿ ಮಾಡಿ ಕೇಂದ್ರ ಸರ್ಕಾರದ ವಿರುದಟಛಿ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ವಿಜಯ್ ಕುಮಾರ್, ನಗರಾಧ್ಯಕ್ಷ ಮೂರ್ತಿ, ಯುವ ಮುಖಂಡ ಸುನಿಲ್ ಬೋಸ್, ಮಹಿಳಾ ಘಟಕದ ನಗರ ಅಧ್ಯಕ್ಷೆ ಪುಷ್ಪಲತಾ, ಮಹಿಳಾ ಗ್ರಾಮಾಂತರ ಅಧ್ಯಕ್ಷೆ ಲತಾ, ಹೆಡತಲೆ ಮಂಜುನಾಥ್ ಇತರರಿದ್ದರು.