ಹುಬ್ಬಳ್ಳಿ: ಯಾವುದೇ ಷರತ್ತು ವಿಧಿಸದೆ ಕಾಂಗ್ರೆಸ್ ಸೇರಿದ್ದೇನೆ. ಸಂಪುಟದಲ್ಲಿ ಸಚಿವನಾಗಿರಬೇಕು ಎನ್ನುವ ಜನರ ಬಯಕೆ ಈಡೇರಿಲ್ಲ. ಇನ್ನೂ ಹಲವು ಹುದ್ದೆಗಳಿದ್ದು, ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ಯಾವುದೇ ಆಸೆ ವ್ಯಕ್ತಪಡಿಸಿಲ್ಲ. ಯಾವ ರೀತಿ ಮುಂದೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡುತ್ತದೆ. ಲಕ್ಷ್ಮಣ ಸವದಿ ಹಾಗೂ ನನಗೆ ಸಚಿವ ಸ್ಥಾನ ಸಿಗಬೇಕಿತ್ತು, ಆದರೆ ಸಿಕ್ಕಿಲ್ಲ. ಕಾಂಗ್ರೆಸ್ ನೀಡುವ ಜವಾಬ್ದಾರಿ ನಿಭಾಯಿಸುತ್ತೇನೆ. ಒತ್ತಡ ದಲ್ಲಿ ಸ್ಥಾನಮಾನ ಕೊಡಲು ಆಗಲಿಲ್ಲ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕೆಲವು ಪ್ರಮುಖ ಸ್ಥಾನ ಸಿಕ್ಕಿವೆ. ನನಗೆ ಹಾಗೂ ಸವದಿಗೆ ಸಚಿವ ಸ್ಥಾನ ಸಿಗಬೇಕು ಎಂಬುದು ಜನರ ಬಯಕೆಯಾಗಿತ್ತು. ಸಚಿವ ಸಂಪುಟ ಭರ್ತಿಯಾಗಿದೆ. ಮುಂದೆ ಸಿಗುತ್ತದೆ ಎನ್ನುವುದು ಕೇವಲ ಬೂಟಾಟಿಕೆ ಎಂದರು.
ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಲೋಕಸಭೆ ಚುನಾವಣೆಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆದಿದೆ. ಸೋಲಿಗೆ ಕಾರಣವಾದ ವಿಷಯಗಳನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಹಿರಿಯ ನಾಯಕ ರೊಂದಿಗೆ ಈ ಕುರಿತು ಚರ್ಚೆ ಆಗಿಲ್ಲ. ಚುನಾವಣೆಗೆ ಮುನ್ನ ಘೋಷಿಸಿರುವ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಇಷ್ಟೊಂದು ದೊಡ್ಡ ಸೌಲಭ್ಯಗಳನ್ನು ತರಾತುರಿಯಲ್ಲಿ ಆದೇಶ ಮಾಡಲು ಬರುವುದಿಲ್ಲ. ಆದರೆ ಇದನ್ನು ವಿಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ರಾಜಕಾರಣದಲ್ಲಿ ತಾಳ್ಮೆ ಬೇಕಾಗುತ್ತದೆ ಎಂದರು.
ಬಿಜೆಪಿಯಲ್ಲಿ ಪಕ್ಷ ಕಟ್ಟುವಂತವರು ಯಾರಿದ್ದಾರೆ? ರಾಜ್ಯದಲ್ಲಿ ಬಿಜೆಪಿ ಈ ಪರಿಸ್ಥಿತಿಗೆ ಬರಲು ಕಾರಣರಾದವರು ಈಗ ಎಲ್ಲಿದ್ದಾರೆ. ಇನ್ನೂ ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ಅವರೆಲ್ಲರೂ ನಾಪತ್ತೆಯಾಗಿದ್ದಾರೆ. ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದ ಪರಿಸ್ಥಿತಿ ರಾಷ್ಟ್ರೀಯ ಪಕ್ಷಕ್ಕೆ ಬರಬಾರದಿತ್ತು. ಪಕ್ಷ ಕಟ್ಟಿದ ಹಿರಿಯ ನಾಯಕರು ಒಬ್ಬೊಬ್ಬರಾಗಿ ಹೊರಗೆ ಹೋಗುತ್ತಿದ್ದಾರೆ. ಅಧಿಕಾರ ಇಲ್ಲದೆಯೂ ಕೆಲಸ ಮಾಡಿ ತೋರಿಸಲು ಇದೊಂದು ಅವಕಾಶ ಬಂದಿದೆ ಎಂದು ಹೇಳಿದರು.