Advertisement

ರಾಮ, ಹನುಮ ಭಕ್ತರ ಆಡಳಿತಕ್ಕೆ ಜನ ತೀರ್ಮಾನ; ಕಟೀಲ್‌

06:25 PM Feb 15, 2023 | Team Udayavani |

ಗಂಗಾವತಿ: ವಿಧಾನಸಭಾ ಚುನಾವಣೆಯಲ್ಲಿ ರಾಮ, ಹನುಮ ಭಕ್ತರಿಗೆ ಅಧಿಕಾರ ನೀಡಿ, ಟಿಪ್ಪು ಭಕ್ತ ಸಿದ್ರಾಮಣ್ಣನನ್ನು ಕಾಡಿಗೆ ಕಳಿಸಲು ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಹೇಳಿದರು.

Advertisement

ಅವರು ನಗರದ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ಬಿಜೆಪಿ ಪೇಜ್‌ ಪ್ರಮುಖ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಬಾಂಬ್‌ ಸ್ಫೋಟಿಸುವ ಮತ್ತು ಕೋಮು ವಾತಾವರಣ ಸೃಷ್ಟಿಸಿ ಜನರನ್ನು ಭಯದಲ್ಲಿಡುವ ಕಾಂಗ್ರೆಸ್‌ ಆಡಳಿತ ಜನರಿಗೆ ಇಷ್ಟವಿಲ್ಲ. ಮಾಜಿ ಸಿಎಂ ಸಿದ್ದರಾಮಣ್ಣನಿಗೆ ನಾಚಿಕೆಯಾಗಬೇಕು. ಮೋದಿ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಏಕವಚನದಲ್ಲಿ ಟೀಕಿಸುವ ಸಿದ್ದರಾಮಣ್ಣನಿಗೆ ಕ್ಷೇತ್ರವಿಲ್ಲ. ಈ ಭಾರಿ ಬಾದಾಮಿಯಲ್ಲಿ ಸ್ಪರ್ಧಿಸಿದರೆ ಬಿಜೆಪಿ ಕಾರ್ಯಕರ್ತರು ಸಿದ್ರಾಮಣ್ಣನನ್ನು ಸೋಲಿಸಲಿದ್ದಾರೆ.

ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದಾಗಿನಿಂದ ಗಂಗಾವತಿಯಲ್ಲಿ ಕೋಮುಗಲಭೆ ನಡೆದಿಲ್ಲ. ನವ ಕರ್ನಾಟಕಕ್ಕೆ ಬಿಜೆಪಿ ಗೆಲ್ಲಬೇಕು. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ 150 ಸೀಟ್‌ ಗೆಲ್ಲಲಿದೆ. ಕೇಂದ್ರ ರಾಜ್ಯ ಸರಕಾರಗಳ ಯೋಜನೆಗಳನ್ನು ಮನೆ ಮನೆಗೆ ತೆರಳಿ ಜನತೆಗೆ ತಿಳಿಸಬೇಕು. ಸಿದ್ದರಾಮಯ್ಯನವರಿಗೆ ಜನ ಬೆಂಬಲವಿಲ್ಲ. ಅವರು ಕ್ಷೇತ್ರವನ್ನು ಹುಡುತ್ತಿದ್ದಾರೆ. ಸಿಎಂ ಆಗಲು ಹೊಸ ಅಂಗಿ ಹೊಲಿಸಿದ್ದಾರೆ. ಅವರನ್ನು ಸೋಲಿಸಲು ಖರ್ಗೆ ಸಿದ್ಧತೆ ನಡೆಸಿದ್ದಾರೆ. ರೈತರು, ಅಧಿ ಕಾರಿಗಳು, ಆತ್ಮಹತ್ಯೆ ಮಾಡಿಕೊಂಡರೆ ಸಿದ್ದರಾಮಯ್ಯ ಕಣ್ಣೀರು ಹಾಕಲಿಲ್ಲ.

ಕುಕ್ಕರ್‌ ಬಾಂಬ್‌ ಹಾಕಿದವರನ್ನು ಅಮಾಯಕ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಕಣ್ಣೀರು ಹಾಕುತ್ತಿದ್ದಾರೆ. ಲಿಂಗಾಯತ ಧರ್ಮವನ್ನು ಒಡೆದ ಧರ್ಮ ದ್ರೋಹಿ ಸಿದ್ದರಾಮಯ್ಯ, ಶಾದಿಭಾಗ್ಯ ನೀಡಿ ಸಮಾಜವನ್ನು ಒಡೆದು ಆಳಿದವರು. 2000 ಪಿಎಫ್‌ಐ ದ್ರೋಹಿಗಳನ್ನು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದರೆ ಎನ್‌ಐಎ ಬಂಧಿಸಿರುವ 400 ದೇಶ ದ್ರೋಹಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡರು ಬಹಿರಂಗವಾಗಿ ಹೇಳುತ್ತಿದ್ದು, ದೇಶ ಭಕ್ತ ಮತದಾರರು ಕಾಂಗ್ರೆಸ್‌ನವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದರು.

ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, ಭಾರತವನ್ನು ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು. 2014ರಿಂದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ನಂತರ ಭಾರತ ವಿಶ್ವಗುರುವಾಗಿದೆ. 190 ಕೋಟಿ ಕೋವಿಡ್‌ ಲಸಿಕೆಗಳನ್ನು ಮೋದಿ ಸರಕಾರ ಉಚಿತವಾಗಿ ನೀಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದು, ಜಗತ್ತು ಮುಂದಾಳತ್ವ ವಹಿಸಿಕೊಳ್ಳಲು ಭಾರತಕ್ಕೆ ಮನವಿ ಮಾಡುತ್ತಿದೆ. ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿಯವರ ಸರಕಾರದ ಜನಪ್ರಿಯ ಯೋಜನೆಗಳ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಆಡಳಿತ ನೀಡಿ ಪುನಃ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು.

Advertisement

ಸಚಿವ ಆನಂದ ಸಿಂಗ್‌ ಮಾತನಾಡಿ, ಪೇಜ್‌ ಪ್ರಮುಖ ಸಮಾವೇಶದ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಸಮಾವೇಶಕ್ಕೆ ಜನಸಂಖ್ಯೆ ನೋಡಿ ಕಾಂಗ್ರೆಸ್‌ ಪಕ್ಷ ಹಾಗೂ ಕೆಆರ್‌ ಪಿ ಪಾರ್ಟಿಯವರನ್ನು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನ ತುಳಿಯಲಿದ್ದಾರೆಂದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನ ಅತ್ಯುತ್ತಮವಾಗಿದೆ. ಕಿಷ್ಕಿಂದಾ ಅಂಜನಾದ್ರಿಯ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಕಮಲ ಚಿಹ್ನೆ ಅರಳಿಸುವ ಪವಿತ್ರ ಕಾರ್ಯ ಮಾಡಬೇಕಿದೆ. ಸಂಸದ ಕರಡಿ ಸಂಗಣ್ಣ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಶಾಸಕ ದಢೇಸುಗೂರು, ಮಾಜಿ ಶಾಸಕ ಜಿ. ವೀರಪ್ಪ, ಬಿಜೆಪಿ ಮುಖಂಡರಾದ ಚಂದ್ರಶೇಖರ ಹಲಗೇರಿ, ಸಾಲೋಣಿ ವೀರೇಶ, ತಿಪ್ಪೇರುದ್ರಸ್ವಾಮಿ, ಎಚ್‌. ಗಿರೇಗೌಡ, ಮಳಗಿ ಚನ್ನಪ್ಪ, ಕೆಲೋಜಿ ಸಂತೋಷ, ಎಚ್‌.ಎಂ. ಸಿದ್ದರಾಮಸ್ವಾಮಿ, ನವೀನ್‌ ಗುಳಗಣ್ಣನವರ್‌, ಕೆ. ವೆಂಕಟೇಶ ಜಂತಗಲ್‌, ಶ್ರೀನಿವಾಸ, ನಗರಸಭೆ ಸದಸ್ಯರು, ಪಕ್ಷದ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next