Advertisement

ಪ್ಲಾಸ್ಟಿಕ್‌ ನಿಷೇಧಕ್ಕೆ ಜನರ ಸಹಕಾರ ಅಗತ್ಯ

01:25 PM Jun 29, 2019 | Team Udayavani |

ನರೇಗಲ್ಲ: ರಾಷ್ಟ್ರಮಟ್ಟದಲ್ಲಿ ಪ್ಲಾಸ್ಟಿಕ್‌ ನಿಷೇಧ ಜಾರಿಯಾಗಿದ್ದು, ವರ್ತಕರು ಮತ್ತು ಗ್ರಾಹಕರು ಸಹಕರಿಸಿದಾಗ ಮಾತ್ರ ಸಂಪೂರ್ಣವಾಗಿ ಪ್ಲಾಸ್ಟಿಕ್‌ ನಿಷೇಧ ಸಾಧ್ಯವಾಗುತ್ತದೆ. ಪ್ಲಾಸ್ಟಿಕ್‌ ಬಳಕೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಆಧುನಿಕ ಜೀವನದಲ್ಲಿ ನಮ್ಮ ಜೀವನಾವಶ್ಯಕ ವಸ್ತುಗಳೇ ನಮಗೆ ಮೃತ್ಯುವಾಗಿ ಪರಿಣಮಿಸಿವೆ ಎಂದು ಗಜೇಂದ್ರಗಡ ತಹಶೀಲ್ದಾರ್‌ ಗುರುಸಿದ್ಧಯ್ಯ ಹಿರೇಮಠ ಹೇಳಿದರು.

Advertisement

ಸ್ಥಳೀಯ ಪಪಂ ಸಭಾಭವನದಲ್ಲಿ ಶುಕ್ರವಾರ ವರ್ತಕರಿಗೆ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್‌ ನಿಷೇಧ ಹಾಗೂ ಸ್ವಚ್ಛತೆ ಅರಿವು ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಭೂಮಿ ಮಳೆ ನೀರು ಇಂಗಲು ಮತ್ತು ಬೆಳೆ ಬೆಳೆಯಲು ಪ್ಲಾಸ್ಟಿಕ್‌ ಚೀಲಗಳು ಅಡ್ಡಿಪಡಿಸುತ್ತಿವೆ. ಪಟ್ಟಣಗಳಲ್ಲಿ ಅವು ಚರಂಡಿಗಳಲ್ಲಿ ಸೇರಿಕೊಂಡು ಸರಿಯಾಗಿ ಕೊಳಚೆ ಹರಿಯುತ್ತಿಲ್ಲ. ಜನರು ಪ್ಲಾಸ್ಟಿಕ್‌ ಚೀಲಗಳಲ್ಲಿ ಆಹಾರ ಮತ್ತಿತರ ಉಳಿಕೆ ಪದಾರ್ಥಗಳನ್ನು ಖಾಲಿ ಜಾಗಗಳಲ್ಲಿ ಕಸವಾಗಿ ಎಸೆಯುವುದರಿಂದ ದನ ಕರುಗಳು ಅವುಗಳನ್ನು ತಿಂದು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಸತ್ತ ನಿದರ್ಶನಗಳೂ ಇವೆ. ಹೀಗಾಗಿ ಅದರ ಮೇಲಿನ ಅವಲಂಬನೆ ತಪ್ಪಿಸುವುದು ಸುಲಭವಾಗಿ ಆಗುವಂಥದ್ದಲ್ಲ. ಕಠಿಣ ಕಾನೂನುಗಳು ಬೇಕು ನಿಜ, ಅದರ ಜೊತೆಗೆ ಜನರಿಗೆ ಪ್ಲಾಸ್ಟಿಕ್‌ ಬ್ಯಾಗ್‌ ಮಾಡುತ್ತಿರುವ ಹಾನಿ ಬಗ್ಗೆ ಜನರಿಗೆ ತಿಳಿವಳಿಕೆ ಮೂಡವಂತೆ ಮಾಡಬೇಕು ಎಂದರು.

ಪ.ಪಂ ಮುಖ್ಯಾಧಿಕಾರಿ ಎಸ್‌.ಎಸ್‌. ಹುಲ್ಲಮ್ಮನವರ ಮಾತನಾಡಿ, ಸ್ವಚ್ಛತೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಹೀಗಾಗಿ ಸ್ವಚ್ಛತೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಕುವ ಬದಲಾಗಿ ನಿಗದಿತ ಸ್ಥಳದಲ್ಲಿ ಹಾಕುವ ಮೂಲಕ ಸ್ವಚ್ಛತೆ ಕಾಪಾಡಬೇಕು. ಇದರಿಂದ ಸ್ವಚ್ಛ ಪರಿಸರ ಜೊತೆಗೆ ಆರೋಗ್ಯವೂ ಚೆನ್ನಾಗಿ ಇರುತ್ತದೆ. ಈಗಾಗಲೇ ಪಟ್ಟಣ ಪ್ರತಿಯೊಂದು ವಾರ್ಡ್‌ಗಳಲ್ಲಿ ಸ್ವಚ್ಛತೆ ಬಗ್ಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿಷ್ಕಾಳಜಿ ತೋರಿಸಬಾರದು. ಹೀಗೆ ಮಾಡಿದರೆ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಸ್ವಚ್ಛ ಭಾರತ ಅಭಿಯಾನ ಪ್ರಯುಕ್ತ ವರ್ತಕರು ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ತಮ್ಮ ಕಸವನ್ನು ಎಲ್ಲಿಯೂ ಬಿಸಾಕಬಾರದು. ತಮ್ಮ ಮನೆಯಲ್ಲಿ ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಪಪಂದಿಂದ ದಿನಕ್ಕೆ ಎರಡು ಭಾರಿ ಟ್ರ್ಯಾಕ್ಟರ್‌ ಮೂಲಕ ಮನೆಗಳಿಗೆ ನಿಗದಿತ ಸಮಯಕ್ಕೆ ಬಂದು ಕಸವನ್ನು ತೆಗೆದುಕೊಂಡು ಹೋಗುತ್ತದೆ ಎಂದರು.

ಸಭೆಯಲ್ಲಿ ಪಾಲ್ಗೊಂಡ ವರ್ತಕರು ಈ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ನಮ್ಮ ಅಂಗಡಿ ಹೆಸರುಳ್ಳ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ದಾಸ್ತಾನು ಮಾಡಿದ್ದು, ಅವು ಮುಗಿಯವವರೆಗೆ ಅವಕಾಶ ಕಲ್ಪಿಸಬೇಕು. ಇಲ್ಲಿ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಒತ್ತಡ ಹೇರುವುದಕ್ಕಿಂತ ಉತ್ಪಾದನಾ ಹಂತದಲ್ಲಿಯೇ ನಿಯಂತ್ರಿಸುವುದು ಸೂಕ್ತ. ಆ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಿದರೆ ಪ್ಲಾಸ್ಟಿಕ್‌ ನಿಷೇಧ ಸಾಧ್ಯ. ಉತ್ಪಾದನೆಯೇ ಇಲ್ಲದಿದ್ದರೆ ಬಳಕೆ ಹೇಗೆ ಸಾಧ್ಯ. ಪಟ್ಟಣದ ಕೆಲವೊಂದು ಚರಂಡಿಗಳು ತುಂಬಿವೆ. ಅವುಗಳನ್ನು ಸ್ವಚ್ಛಗೊಳಿಸಿ ಎಂದರು. ಪ.ಪಂ ಹಿರಿಯ ಆರೋಗ್ಯ ನಿರೀಕ್ಷಕ ಎನ್‌.ಎಂ. ಹಾದಿಮನಿ, ವರ್ತಕರಾದ ಮುತ್ತಣ್ಣ ಹಡಪದ, ಶರಣಪ್ಪ ಬೆಟಗೇರಿ, ಬಾಬುಸಾಹೇಬ ರಾಹುತ್‌, ರಾಮಣ್ಣ ಭೈರಗೊಂಡ ಸೇರಿದಂತೆ ವರ್ತಕರು ಹಾಗೂ ಬೀದಿ ಬಳಿಯ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next