Advertisement

ಅರಣ್ಯ ಸಂರಕ್ಷಿಸಲು ಜನರ ಸಹಕಾರ ಅಗತ್ಯ

09:44 PM Jan 18, 2020 | Lakshmi GovindaRaj |

ಅರಸೀಕೆರೆ: ಪ್ರಾಕೃತಿಕವಾಗಿ ಅರಣ್ಯ ಪ್ರದೇಶಗಳಲ್ಲಿ ಉಂಟಾಗುವ ಆಕಸ್ಮಿಕ ಬೆಂಕಿ ಅವಘಡಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕೆಲವು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಜೊತೆಗೆ ಅರಣ್ಯ ಪ್ರದೇಶದ ಅಕ್ಕಪಕ್ಕದ ಗ್ರಾಮಸ್ಥರ ನೆರವಿನೊಂದಿಗೆ ಅರಣ್ಯ ಸಂಪತ್ತನ್ನು ಸಂರಕ್ಷಿಸಬೇಕು ಎಂದು ಚನ್ನರಾಯಪಟ್ಟಣ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನಿಕೃಷ್ಣ ಹೇಳಿದರು.

Advertisement

ತಾಲೂಕಿನ ಜಾಜೂರು ನರ್ಸರಿ ಆವರಣದಲ್ಲಿ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಠಾಣೆ ಸಂಯುಕ್ತ ಆಶ್ರಯದಲ್ಲಿ ಅರಣ್ಯ ಸಿಬ್ಬಂದಿಗೆ ಆಯೋಜಿಸಿದ್ದ ಆಕಸ್ಮಿಕ ಬೆಂಕಿ ಅವಘಡಗಳ ಬಗ್ಗೆ ಅರಣ್ಯ ಸಂರಕ್ಷಿಸುವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಅವರು, ಬೆಂಕಿ ನಂದಿಸಲು ಮತ್ತು ಆತ್ಮ ರಕ್ಷಣೆಗೆ ಸಿಬ್ಬಂದಿಗೆ ಅಗತ್ಯ ಸಲಕರಣೆ ವಿತರಿಸಿ ಮಾತನಾಡಿದರು.

ಅರಣ್ಯ ಪ್ರದೇಶದೊಳಗೆ ಪ್ರಾಣಿ ಪಕ್ಷಿಗಳಿಗೆ ಹಾಗೂ ಬೇಸಿಗೆಯಲ್ಲಿ ಬೆಂಕಿ ಕಾಣಿಸಿಕೊಂಡರೆ ನಂದಿಸಲು ಸಹಕಾರಿಯಾಗುವಂತೆ ಅಲ್ಲಲ್ಲಿ ಚೆಕ್‌ ಡ್ಯಾಂ ನಿರ್ಮಿಸಲು ಇಲಾಖೆಯಿಂದ ಆರ್ಥಿಕ ನೆರವು ಪಡೆಯುವುದಾಗಿ ತಿಳಿಸಿದ ಅವರು ಅರಣ್ಯ ರಕ್ಷಣೆಯಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಅವರ ಸಹಕಾರ ಪಡೆಯಬೇಕೆಂದರು.

ನಗರದ ಅಗ್ನಿಶಾಮಕ ಠಾಣಾಧಿಕಾರಿ ರೇವಣ್ಣಗೌಡ ಅರಣ್ಯಕ್ಕೆ ಬೆಂಕಿ ಬೀಳಲು ಕಾರಣಗಳು ಮತ್ತು ಅವುಗಳನ್ನು ತಡೆಗಟ್ಟುವ ಬಗ್ಗೆ ಹೇಗೆ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಅರಣ್ಯದೊಳಗೆ ಕರ್ತವ್ಯ ನಿರ್ವಹಿಸುವಾಗ ಗಮ್‌ ಶೂ ಬಳಸಿರಿ ಇದರಿಂದ ವಿಷಜಂತುಗಳಿಂದಾಗುವ ಅನಾಹುತಗಳು ತಪ್ಪುತ್ತದೆ ಎಂದು ಸಲಹೆ ನೀಡಿದರು.

ವಲಯ ಅರಣ್ಯಾಧಿಕಾರಿ ದಯಾನಂದ್‌ ಮಾತನಾಡಿ, ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ನಾವು ಹಾಕಲಾಗಿರುವ ಸಸಿಗಳು ಶೇ.90 ರ‌ಷ್ಟು ಉತ್ತಮವಾಗಿ ಬೆಳೆದಿವೆ, ಇವುಗಳ ರಕ್ಷಣೆಗೂ ಬೇಸಿಗೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ, ಗಾರ್ಡ್‌ ಹಾಗೂ ವಾಚರ್‌ಗಳು ಉತ್ತಮವಾಗಿ ತಮ್ಮ ಕರ್ತವ್ಯ ವನ್ನು ನಿರ್ವಹಿಸುತ್ತಿದ್ದಾರೆ. ನೂತನವಾಗಿ ಬಂದಿರುವ ಎಸಿಎಫ್ ಅವರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದಾಗಿ ಹೇಳಿದರು.

Advertisement

ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸಿ: ದೇಶದ ಅರಣ್ಯ ಸಂಪತ್ತನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ನಾವು ಬೆಳೆಸಬೇಕಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನಿಕೃಷ್ಣ ಹೇಳಿದರು. ಆಮೂಲ್ಯವಾದ ಮರಗಿಡಗಳ ಜೊತೆಗೆ ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸಬೇಕಾದರೆ ಅರಣ್ಯವನ್ನು ಸಂರಕ್ಷಿಸಬೇಕಾಗಿದ್ದು, ಸಿಬ್ಬಂದಿ ಕೊರತೆ, ಹಾಗೂ ಬೇಸಿಗೆಯಲ್ಲಿ ಫೈರ್‌ಲೈನ್‌ ಮಾಡಲು ಅನುದಾನಕ್ಕಾಗಿ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

ಕಾಯಂ ಮತ್ತು ದಿನಗೂಲಿ ವಾಚರ್‌ಗಳು ಮತ್ತು ಸಿಬ್ಬಂದಿ ಅರಣ್ಯದೊಳಗೆ ಹೋಗಬೇಕಾದರೆ ಕುಡಿಯಲು ಅಗತ್ಯವಾದ ನೀರು, ಆಹಾರ ಹಾಗೂ ಕೈಯಲ್ಲಿ ಮಚ್ಚು ಇರಲಿ, ಎಂದ ಅವರು ನಿಮ್ಮಗಳ ಸಮಸ್ಯೆಗೆ ಸ್ಪಂದಿಸುತ್ತೇನೆ.
-ಮುನಿಕೃಷ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next