Advertisement

ಪ್ಲಾಸ್ಟಿಕ್‌ ನಿಷೇಧಕ್ಕೆ ಜನರ ಸಹಕಾರ ಅವಶ್ಯ: ಶೆಟ್ಟರ

02:41 PM Aug 07, 2022 | Team Udayavani |

ಹುಬ್ಬಳ್ಳಿ: ಸರಕಾರದ ಮಾರ್ಗಸೂಚಿ ಅನುಸಾರ 50 ಮೈಕ್ರಾನ್‌ಗಿಂತ ಮೇಲಿರುವ ಪ್ಲಾಸ್ಟಿಕ್‌ ಬಳಕೆಗೆ ಅವಕಾಶವಿದ್ದು, ಜನಸಮಾನ್ಯರೇ ಜಾಗೃತರಾಗಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧಕ್ಕೆ ಸಹಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಶನಿವಾರ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ ಕುರಿತು ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯವರು ಸರಕಾರದ ನಿಯಮಾವಳಿ ಮೀರಿ ಪ್ಲಾಸ್ಟಿಕ್‌ ಉತ್ಪಾದಿಸುವ ಮೂಲ ಕಾರ್ಖಾನೆಗಳನ್ನು ನಿರ್ಬಂಧಿಸಬೇಕು. ಅಂತಹುಗಳಿಗೆ ಮೂಗುದಾರ ಹಾಕಬೇಕು. ಕಳ್ಳಮಾರ್ಗವಾಗಿ ಪರ ರಾಜ್ಯದಿಂದ ತರುವ ದಾಸ್ತಾನುದಾರರನ್ನು ಪತ್ತೆ ಮಾಡಿ ತಡೆಗಟ್ಟಬೇಕು. ಕೋವಿಡ್‌ನಿಂದ ಈಗತಾನೇ ವ್ಯಾಪಾರಿಗಳು ಸುಧಾರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ಲಾಸ್ಟಿಕ್‌ ಬ್ಯಾನ್‌ ನೆಪದಲ್ಲಿ ಸಣ್ಣ-ಪುಟ್ಟ ಅಂಗಡಿಕಾರರು, ಹೊಟೇಲ್‌ನವರಿಗೆ ಕಿರುಕುಳ ಸರಿಯಲ್ಲ. ಏಕಬಳಕೆ ಪ್ಲಾಸ್ಟಿಕ್‌ ನಿಷೇಧ ಜವಾಬ್ದಾರಿ ಅಧಿಕಾರಿಗಳಿಗೆ ಸೀಮಿತವಲ್ಲ. ವ್ಯಾಪಾರಿಗಳು, ಉದ್ಯಮಿಗಳಲ್ಲಿ ಈ ಕುರಿತು ಜಾಗೃತಿ ಮೂಡಬೇಕು. ಆಗ ಮಾತ್ರ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ತಡೆ ಸಾಧ್ಯ ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, 50 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ ಬಳಸುವವರ ಮೇಲೆ ಅಧಿಕಾರಿಗಳು ಮುಲಾಜಿಲ್ಲದೆ ದಂಡ ವಿಧಿಸಬೇಕು. ಯಾರ ಬಳಿ ಇಂತಹ ಪ್ಲಾಸ್ಟಿಕ್‌ ಇದೆ ಅಂಥವರು ಈಗಲೇ ಪಾಲಿಕೆಗೆ ಮರಳಿಸಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಹಂತ ಹಂತವಾಗಿ ಜನರಿಗೆ ತಿಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಉತ್ಪಾದನೆ ಆಗುವಲ್ಲಿಯೇ ನಿಷೇಧ ಮಾಡಬೇಕು. ವಾಣಿಜ್ಯ ತೆರಿಗೆ ಇಲಾಖೆಯವರು ಪರ ರಾಜ್ಯದಿಂದ ಬರುತ್ತಿರುವ ಪ್ಲಾಸ್ಟಿಕ್‌ ತಡೆಗಟ್ಟುವ ಕೆಲಸ ಮಾಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಹೇಳಿದರು.

ಪಾಲಿಕೆ ಆಯುಕ್ತ ಡಾ| ಬಿ. ಗೋಪಾಲಕೃಷ್ಣ ಮಾತನಾಡಿ, ಈಗಾಗಲೇ ಹೋಟೆಲ್‌, ವ್ಯಾಪಾರಿಗಳ ಜೊತೆ ಸಭೆ ಮಾಡಲಾಗಿದೆ. ಮೊದಲು ದಂಡ ಹಾಕದೆ ಜಾಗೃತಿ ಮೂಡಿಸಿದ್ದೇವೆ. ಯಾರಿಗೂ ತೊಂದರೆ ಮಾಡಿಲ್ಲ. ಕಿರಿಕಿರಿ ಕೊಟ್ಟಿಲ್ಲ ಎಂದರು.

Advertisement

ಮಹಾಪೌರ ಈರೇಶ ಅಂಚಟಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೇಪರ್‌ ಬ್ಯಾಗ್‌ ಬಳಸುವ ಬಗ್ಗೆ ಜಗದೀಶ ಶೆಟ್ಟರ ಹಾಗೂ ಬಸವರಾಜ ಹೊರಟ್ಟಿಯವರು ರಾಜ್ಯಮಟ್ಟದಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ. ಪ್ಲಾಸ್ಟಿಕ್‌ ತಡೆಯಲು ಮುಂದಾಗುವ ಅಧಿಕಾರಿಗಳು ವ್ಯಾಪಾರಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಅಧಿಕಾರಿಗಳು ವ್ಯಾಪಾರಸ್ಥರ ಮೇಲೆ ನಿರ್ಬಂಧ ಹೇರುವ ಬದಲು ಉತ್ಪಾದಕರ ಮೇಲೆ ಕ್ರಮಕೈಗೊಳ್ಳಬೇಕು ಎಂದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಶೋಭಾ ಪ್ರಾಸ್ತಾವಿಕ ಮಾತನಾಡಿದರು.

ಉಪ ಮಹಾಪೌರ ಉಮಾ ಮುಕುಂದ, ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ವಿಪಕ್ಷ ನಾಯಕ ದೊರೈರಾಜ ಕಲ್ಲಕುಂಟ್ಲಾ, ಕೆಸಿಸಿಐನ ಅಧ್ಯಕ್ಷ ವಿನಯ ಜವಳಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಇನ್ನಿತರರಿದ್ದರು.

ಅಧಿಕಾರಿಗಳು ಸೌಜನ್ಯದಿಂದ ವರ್ತಿಸಲಿ

ಸರಕಾರ ಎಲ್ಲ ರೀತಿಯ ಪ್ಲಾಸ್ಟಿಕ್‌ ಬಳಕೆ ನಿಷೇಧ ಮಾಡಿದ್ದರೆ ಸಾರ್ವಜನಿಕರಲ್ಲಿ ಗೊಂದಲ ಆಗುತ್ತಿರಲಿಲ್ಲ. ಪ್ಲಾಸ್ಟಿಕ್‌ ತಡೆಯಲು ಅಧಿಕಾರಿಗಳು ಯಾವ್ಯಾಗ ಬೇಕಾದಾಗ ಅಂಗಡಿ, ಹೋಟೆಲ್‌ಗೆ ದಾಳಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಅವರ ವರ್ತನೆಯಿಂದ ಬೇಜಾರಾಗುತ್ತೆ. ದಂಡ ವಿಧಿಸಲು ಬಂದವರು ಸೌಜನ್ಯದಿಂದ ವರ್ತಿಸದೆ ದಬ್ಟಾಳಿಕೆ ಮಾಡುತ್ತಿದ್ದಾರೆ ಎಂದು ಹೋಟೆಲ್‌ ಉದ್ಯಮಿ ಸುಧಾಕರ ಶೆಟ್ಟಿ ಆರೋಪಿಸಿದರು.

ವ್ಯಾಪಾರಿ ವಿಜಯ ಅಳಗುಂಡಗಿ ಮಾತನಾಡಿ, ಪ್ಲಾಸ್ಟಿಕ್‌ ನಿಷೇಧಕ್ಕೆ ನಾವು ಕೈಜೋಡಿಸುತ್ತೇವೆ. ಕೇಂದ್ರ ಸರಕಾರ 50 ಮೈಕ್ರಾನ್‌ ಬಳಕೆಗೆ ಅವಕಾಶ ನೀಡಿದೆ. ಅದು ರಾಜ್ಯದಲ್ಲೂ ಜಾರಿಯಾಗಲಿ ಎಂದರು. ವ್ಯಾಪಾರಸ್ಥ ಸವಣೂರ ಮಾತನಾಡಿ, ವ್ಯಾಪಾರಸ್ಥರು ಸಮಸ್ಯೆಯಲ್ಲಿದ್ದಾರೆ. ಒಂದು ಅಥವಾ ಎರಡು ತಿಂಗಳು ಸಮಯ ನೀಡಿ ಎಂದು ಕೋರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next