Advertisement
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಹಳ್ಳಿಗಳಲ್ಲಿ ಪ್ರವಾಹ ಬಂದು ಮನೆಗಳು ಮುಳುಗಡೆ ಆಗಿದ್ದರಿಂದ ರಡ್ಡೇರಹಟ್ಟಿ ಗ್ರಾಮದ ಹೊರ ವಲಯದಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ಪ್ರವಾಹ ಸಂತ್ರಸ್ತರ ನಿರ್ವಹಣಾ ಕೇಂದ್ರದಲ್ಲಿರುವ ಪಿ.ಕೆ.ನಾಗನೂರ ಗ್ರಾಮದ ನಿರಾಶ್ರಿತರ ಆಕ್ರೋಶದ ಮಾತುಗಳಿವು.
Related Articles
Advertisement
2005ರಿಂದಲೂ ಮಳೆ ಬಂದಾಗ ಸಮಸ್ಯೆ ಅನುಭವಿಸುತ್ತಿರುವ ಈ ಕುಟುಂಬಗಳು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತಂದರೂ ಕೇವಲ ತಾತ್ಕಾಲಿಕ ಭರವಸೆ ನೀಡುತ್ತಿದ್ದಾರೆ. ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಹಳ್ಳಿಗಳು ಮುಳುಗಡೆ ಆಗುತ್ತಿವೆ. ಈ ವರ್ಷವೂ ಕೆಲ ಮನೆಗಳು ಮುಳುಗಡೆ ಆಗಿದ್ದರಿಂದ ಮತ್ತೆ ಸಮಸ್ಯೆ ತಲೆದೋರಿದೆ. ಹೀಗಾಗಿ ಸಮೀಪದ ಸಂತ್ರಸ್ತರ ನಿರ್ವಹಣಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ನದಿ ತೀರದ ಜನರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ನದಿ ನೀರಿನ ಮಟ್ಟ ಇಳಿಯುವುದು ಸದ್ಯಕ್ಕಂತೂ ಕಷ್ಟವಿದೆ. ಅಲ್ಲಿಯವರೆಗೆ ಜಿಲ್ಲಾಡಳಿತ ಸಂತ್ರಸ್ತರ ನಿರ್ವಹಣಾ ಕೇಂದ್ರಗಳನ್ನು ತೆರೆದಿದೆ. ಮುಳುಗಡೆಯಾದ ಮನೆಗಳಿಂದ ಕೆಲ ವಸ್ತುಗಳನ್ನು ತೆಗೆದುಕೊಂಡು ಬಂದಿರುವ ಸಂತ್ರಸ್ತರು ಇನ್ನು ಕೆಲವೊಂದನ್ನು ಅಲ್ಲಿಯೇ ಬಿಟ್ಟು ಬಂದಿದ್ದಾರೆ.
ಸಂತ್ರಸ್ತರ ನಿರ್ವಹಣಾ ಕೇಂದ್ರದಲ್ಲಿ ಚಿಕ್ಕಚಿಕ್ಕ ಮಕ್ಕಳು ಕೂಡ ಕಂಡು ಬಂದರು. ನಾಗರ ಪಂಚಮಿ ರಜೆ ಇದ್ದಿದ್ದರಿಂದ ಶಾಲಾ ಮಕ್ಕಳು ಕೇಂದ್ರದಲ್ಲಿಯೇ ಇದ್ದರು. ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆ ಮಾಡಲಾಗಿತ್ತು. ಸದ್ಯ ಅಥಣಿ ತಾಲೂಕಿನ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರವಾಹದ ನೀರು ಇಳಿದ ಕೂಡಲೇ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಅಧಿಕಾರಿಗಳು ಅಭಯ ನೀಡಿದ್ದಾರೆ.
ಕಣ್ಣೆದುರೇ ಜಾಗವಿದ್ದರೂ ಸೂರಿಲ್ಲ: ಕೃಷ್ಣಾ ನದಿ ನೀರಿನ ಪ್ರವಾಹದಿಂದ ಮುಳುಗಡೆಯಾಗುವ ಮನೆಗಳ ಕುಟುಂಬಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ರಡ್ಡೇರಹಟ್ಟಿ ಗ್ರಾಮದ ಬಳಿ 80 ಎಕರೆ ಜಾಗ ಗುರುತಿಸಿ ನಿವೇಶನ ನಿರ್ಮಾಣ ಮಾಡಿದೆ. ಆದರೆ ಇನ್ನೂವರೆಗೆ ಆ ನಿವೇಶನಗಳು ಸಂತ್ರಸ್ತರಿಗೆ ಹಂಚಿಕೆ ಆಗಿಲ್ಲ. ಜತೆಗೆ ಜಾಗವನ್ನು ಗುರುತಿಸಿ ಹಕ್ಕು ಪತ್ರಗಳನ್ನೂ ನೀಡಿಲ್ಲ. ಹೀಗಾಗಿ ಕಣ್ಣೆದುರೇ ಜಾಗವಿದ್ದರೂ ಇನ್ನೂ ಸಂತ್ರಸ್ತರಿಗೆ ಹಂಚಿಕೆ ಮಾಡಿಲ್ಲ. ರಡ್ಡೇರಹಟ್ಟಿ ಪಕ್ಕದಲ್ಲಿ 2005ರಲ್ಲಿ ನಿರ್ಮಾಣವಾದ ತಗಡಿನ ಶೆಡ್ ಗಳಲ್ಲಿಯೇ ವಾಸಿಸುತ್ತಿದ್ದು, ಈ ತಾತ್ಕಾಲಿಕ ಶೆಡ್‌ಗಿಂತ ಶಾಶ್ವತ ಸೂರಿಗಾಗಿ ಜನರ ಆಗ್ರಹವಾಗಿದೆ.
ನಾಗನೂರ ಪಿ.ಕೆ. ಊರ ಹೊರಗಿನ ಅಡಿವ್ಯಾಗಿನ ಮನಿಗೋಳೆಲ್ಲ ನೀರಾಗ ಮುನಿಗ್ಯಾವ. ಸೊಸಿ ಹೊಟ್ಟಿಲೇ ಇದಾಳ. ಮನಿಗೆಲ್ಲ ನೀರ ಬಂದ ಮ್ಯಾಲ ಓಡೋಡಿ ಇಲ್ಲಿ ಬಂದೇವ. ಸೊಸಿನ ತವರ ಮನಿಗಿ ಕಳಿಸೇವ. ಪ್ರತಿ ಸಲಾ ಹಿಂಗ್ ಆದ್ರ ಬದಕೋದ ಹೆಂಗ. ಅಧಿಕಾರಿಗೋಳ ಬರೋದು, ಹೋಗೋದು ಮಾಡದ ನಮಗ ಮನಿ ಕೊಡಬೇಕ.ಥಂಡ್ಯಾಗ ಜೀವನಾ ಮುಂದ ದೂಡೋದ ಅಂದ್ರ ಆಗವಾಲ್ತು. ಯಪ್ಪಾರ ನಮಗ ಸೂರ ಕೊಡಸ್ರಿ.•ಕುಸುಮಾ ಕಾಂಬಳೆ, ರಡ್ಡೇರಹಟ್ಟಿ ನಿರಾಶ್ರಿತ ಮಹಿಳೆ
•ಬೈರೋಬಾ ಕಾಂಬಳೆ