Advertisement
ಆದರೆ, ಸೂಕ್ತ ದಾಖಲೆ ಇಲ್ಲದವರು ಗೆಜೆಟೆಡ್ ಅಧಿಕಾರಿಗಳ ಸಹಿ ಪಡೆಯಲು ಕಚೇರಿಯಿಂದ ಕಚೇರಿಗೆ ಪರದಾಡುತ್ತಿದ್ದಾರೆ. ಈ ಮೊದಲು ಆಧಾರ್ ಸಂಖ್ಯೆ ಪಡೆದವರು ಹಾಗೂ ಹೊಸದಾಗಿ ಆಧಾರ್ ನೋಂದಣಿ ಮಾಡಿಸಿಕೊಳ್ಳುವವರ ಬಳಿ ಸೂಕ್ತ ದಾಖಲೆ ಇರದಿದ್ದರೆ ಅಥವಾ ದಾಖಲೆಗಳ ದೃಢೀಕರಣಕ್ಕೆ ಗೆಜೆಟೆಡ್ ಅಧಿಕಾರಿಗಳಿಂದ ದಾಖಲೆ ಪತ್ರಗಳಿಗೆ ಸಹಿ ಹಾಗೂ ಸೀಲ್ ಪಡೆಯಬೇಕಿರುವುದು ಕಡ್ಡಾಯ. ಆದರೆ, ಈ ಸಹಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರಿಂದ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ.
Related Articles
Advertisement
ಯಾರು ಗೆಜೆಟೆಡ್ ಅಧಿಕಾರಿಗಳು?: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎ, ಬಿ ಹಾಗೂ ಸಿ ಗ್ರೇಡ್‌ನ ಅಧಿಕಾರಿಗಳು ಗೆಜೆಟೆಡ್ ಸಹಿ ಮಾಡಲು ಅರ್ಹರಿರುತ್ತಾರೆ. ಆಯುಕ್ತರು, ಉಪ ಆಯುಕ್ತರು, ಮಹಾನಗರ ಪಾಲಿಕೆಯ ವಲಯ ಕಚೇರಿ ಸಹಾಯಕ ಆಯುಕ್ತರು, ತಹಶೀಲ್ದಾರರು, ಸರಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ತಜ್ಞ ವೈದ್ಯರು, ಕಾರ್ಯ ನಿರ್ವಾಹಕ ಅಭಿಯಂತರು, ಬಿಇಒ, ಡಿಡಿಪಿಐ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ, ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ವಿವಿಧ ಇಲಾಖೆಯ ಎ ಹಾಗೂ ಬಿ ಗ್ರೇಡ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಧಾರ್ ಸಂಬಂಧಿತ ಫಾರ್ಮ್ಗೆ ಸಹಿ ಮಾಡಬಹುದಾಗಿದೆ.
ಎಲ್ಲದಕ್ಕೂ ಗೆಜೆಟೆಡ್ ಸಹಿ ಅಗತ್ಯವೇ? : ಆಧಾರ್ ತಿದ್ದುಪಡಿಗೆ ಬರುವವರು ಕಡ್ಡಾಯವಾಗಿ ಗೆಜೆಟೆಡ್ ಅಧಿಕಾರಿಗಳ ಸಹಿ ಹಾಗೂ ಸೀಲ್ ಪಡೆಯಲೇ ಬೇಕು ಎಂದೇನಿಲ್ಲ. ವೋಟರ್ ಐಡಿ, ಪಾನ್ ಕಾರ್ಡ್, ಜನ್ಮದಾಖಲೆ, ಗ್ಯಾಸ್ ಬಿಲ್, ಬ್ಯಾಂಕ್ ಪಾಸ್‌ಬುಕ್, ಶಾಲಾ ದಾಖಲೆ, ನರೇಗಾ ಜಾಬ್ ಕಾರ್ಡ್, ಸರ್ಕಾರಿ ಸಿಬ್ಬಂದಿಯಾಗಿದ್ದರೆ ಐಡಿ ಕಾರ್ಡ್ ಸೇರಿದಂತೆ ಹಲವು ದಾಖಲೆ ನೀಡಿ ತಿದ್ದುಪಡಿಗೆ ಅವಕಾಶವಿದೆ ಎಂದು ಯುಐಡಿಎಐ ಮಾರ್ಗದರ್ಶನದಲ್ಲಿ ಸೂಚಿಸಲಾಗಿದೆ. ಗೆಜೆಟೆಡ್ ಅಧಿಕಾರಿಗಳ ಸಹಿ ಪಡೆಯಲು ಸಾರ್ವಜನಿಕರಿಂದ ಕೆಲ ಮಧ್ಯವರ್ತಿಗಳ ಅಥವಾ ಆಯಾ ಕಚೇರಿಯ ಸಿಬ್ಬಂದಿ 100-500ರೂ.ವರೆಗೆ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗ್ರೇಡ್ “ಎ’ ಎಂದರೆ ಕೇವಲ ತಹಶೀಲ್ದಾರ್ ಮಾತ್ರ ಬರಲ್ಲ. ವಿವಿಧ ಇಲಾಖೆಯಲ್ಲಿ ಗ್ರೇಡ್ “ಎ’ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯ ನಿಮಿತ್ತ ಹೊರಗೆ ಹೋದ ವೇಳೆ ಗೆಜೆಟೆಡ್ ಫಾರ್ಮ್ಗಳಿಗೆ ಸಹಿ ಮಾಡಲು ಆಗುತ್ತಿಲ್ಲ. ಸಹಿಗಾಗಿ ಹಣ ಪಡೆವ ಮಧ್ಯವರ್ತಿಗಳ ಕುರಿತು ಗಮನಕ್ಕೆ ಬಂದಿದ್ದು, ಎಲ್ಲ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಗಮನಕ್ಕೆತರಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಪರಿಹಾರವಾಗಲಿದೆ. –ಶಶಿಧರ ಮಾಡ್ಯಾಳ, ತಹಶೀಲ್ದಾರ್
ಎಲ್ಲದಕ್ಕೂ ಗೆಜೆಟೆಡ್ ಅಧಿಕಾರಿಗಳ ಸಹಿ ಇರುವ ಫಾರ್ಮ್ ಅಗತ್ಯವಿಲ್ಲ. ಅವರ ಬಳಿ ಇರುವ ದಾಖಲೆಯ ಒರಿಜಿನಲ್ ಪ್ರತಿ ತಂದರೆ ಸಾಕು. ನೂಕುನುಗ್ಗಲು ತಡೆಗೆ ಬೆಳಗ್ಗೆ 8ರಿಂದ 9 ಗಂಟೆ ವರೆಗೆ 700 ಟೋಕನ್ ವಿತರಿಸಲಾಗುತ್ತಿದೆ. ಅಲ್ಲದೆ ಜನರು ಆನ್‌ಲೈನ್ ಟೋಕನ್ ಸಹ ಪಡೆಯಬಹುದಾಗಿದೆ. ಗೆಜೆಟೆಡ್ ಸಹಿಗಾಗಿ ಯಾರಿಗೂ ಹಣ ಕೊಡುವ ಅಗತ್ಯವಿಲ್ಲ ಎಂದು ನಿತ್ಯ ಸಾರ್ವಜನಿಕರಲ್ಲಿ ಹೇಳುತ್ತಲೇ ಇದ್ದೇವೆ. –ಪವನ್ ನಡುವಿನಮನಿ, ಆಧಾರ್ ಕೇಂದ್ರದ ಕಾರ್ಯಾಚರಣೆ ಮುಖ್ಯಸ್ಥ
ನಾವು ಬ್ಯಾರೆ ಊರಿಂದ ಮುಂಜಾನೇನ ಬಂದಿವ್ರಿ, ಪ್ಯಾನ್‌ಕಾರ್ಡ್, ವೋಟರ್ ಎಲ್ಲಾ ತಂದ್ರೂ ಗೆಜೆಟೆಡ್ ಫಾರ್ಮ್ ಸಹಿ ಸಲುವಾಗಿ ಎಲ್ಲಾಕಡೆ ತಿರುಗಾಡಿ ಸಾಕಾತ್ರಿ.. ಯಾರೂ ಮಾಡೋಲ್ರು. ಇವರ ನೋಡಿದ್ರ ಅದೇ ಬೇಕ ಅನಾತಾರ. –ಹನಮಂತ ಮೆಂಡಗುದ್ಲಿ, ಸಾರ್ವಜನಿಕ
-ಸೋಮಶೇಖರ ಹತ್ತಿ