Advertisement
-ಹೀಗೆ ಅರ್ಜುನ ಆನೆಯ ಕಳೇಬರದ ಎದುರು ಕಣ್ಣೀರು ಹಾಕುತ್ತಿದ್ದ ಮಾವುತರ ಗೋಳಾಟ ನೆರೆದಿದ್ದವರ ಮನಕಲಕುವಂತಿತ್ತು. ಮೈಸೂರು ದಸರಾದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಬೆನ್ನಮೇಲೆ ಹೊತ್ತು ಮೆರೆಸಿದ ಅರ್ಜುನ ಆನೆ ತಾಲೂಕಿನ ಯಸಳೂರು ಸಮೀಪದ ದಬ್ಬಳ್ಳಿ ಬಳಿ ಸೋಮವಾರ ಪುಂಡಾನೆ ಸೆರೆಗೆ ನಡೆದ ಕಾರ್ಯಾಚರಣೆ ವೇಳೆ ಅಸುನೀಗಿದ್ದ. ಪ್ರಾಣ ಕಳೆದುಕೊಂಡ ಜಾಗದಲ್ಲೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಮಂಗಳವಾರ ನಡೆಯಿತು. ಈ ಹೊತ್ತಿನಲ್ಲಿ ಆನೆಯನ್ನು ತಬ್ಬಿಕೊಂಡು ಮಾವುತರು ಕಣ್ಣೀರು ಹಾಕಿದರು.
Related Articles
Advertisement
ಸಕಲೇಶಪುರ: ಸೋಮವಾರ ಸಂಜೆ ಮೃತಪಟ್ಟ ದಸರಾ ಅಂಬಾರಿ ಆನೆ ಅರ್ಜುನನ ಅಂತ್ಯಸಂಸ್ಕಾರ ಸಾವಿರಾರು ಜನರ ಕಂಬನಿ ಹಾಗೂ ಸಕಲ ಸರ್ಕಾರಿ ಗೌರವದ ನಡುವೆ ತಾಲೂಕಿನ ಯಸಳೂರು ಸಮೀಪದ ದಬ್ಬಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ನಡೆಯಿತು.
ಅರ್ಜುನನಿಗೆ ಮೈಸೂರು ದಸರಾ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಿದ್ದ ಪ್ರಹ್ಲಾದ್ ಜೋಷಿ ಅವರು ಮೃತದೇಹದ ಅಂತಿಮ ದರ್ಶನ ಪಡೆದು ಶಾಸ್ತ್ರೋಕ್ತವಾಗಿ ಅಂತಿಮ ಸಂಸ್ಕಾರಕ್ಕೆ ವಿಧಿವಿಧಾನಗಳನ್ನು ನೆರವೇರಿಸಿ ದರು. ಸಕಲ ಸರ್ಕಾರಿ ಗೌರವದೊಂದಿಗೆ ಅರ್ಜುನನನ್ನು ಮಣ್ಣು ಮಾಡಲಾಯಿತು. ಪೊಲೀಸ್ ಪಡೆಗಳಿಂದ 3 ಸುತ್ತು ಆಕಾಶಕ್ಕೆ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಈ ವೇಳೆ ಹಾಜರಿದ್ದ ಸಾವಿರಾರು ಮಂದಿ ಕಂಬನಿ ಮಿಡಿದರು.
ಅಂತಿಮ ಕ್ಷಣದಲ್ಲಿ ಲಾಠಿಚಾರ್ಜ್: ಅರ್ಜುನನ ಅಂತ್ಯಸಂಸ್ಕಾರ ಅರಣ್ಯ ಪ್ರದೇಶದಲ್ಲಿ ಮಾಡಬಾರದು, ಸಮೀಪದ ದಬ್ಬಳ್ಳಿ ಗ್ರಾಮದ ವೃತ್ತದಲ್ಲಿ ಅಥವಾ ರಸ್ತೆ ಇರುವ ಕಡೆ ಮಾಡಿದರೆ ಸ್ಮಾರಕ ನಿರ್ಮಿಸಬಹುದು ಎಂದು ಸ್ಥಳೀಯರು ಗದ್ದಲ ಆರಂಭಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರು ಲಾಠಿ ಪ್ರಹಾರ ಮಾಡುವ ಮೂಲಕ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಂಡರು.
-ಸುಧೀರ್ ಎಸ್.ಎಲ್.