Advertisement

ಬೆಳಗಾವಿಯಲ್ಲಿ ಸತತ 26 ಗಂಟೆ ಗಣೇಶ ವಿಸರ್ಜನೆ ಸಂಭ್ರಮ

06:00 AM Sep 25, 2018 | |

ಬೆಳಗಾವಿ: ಗಡಿನಾಡು ಕುಂದಾನಗರಿಯಲ್ಲಿ ಗಣೇಶೋತ್ಸವ ಸಂಭ್ರಮಕ್ಕೆ ಪಾರವೇ ಇಲ್ಲ. ನೋಡುಗರ ಕಣ್ಣಿಗೆ ಹಬ್ಬದೂಟ. ಈ ಬಾರಿಯಂತೂ ಸತತ 26 ಗಂಟೆಗಳ ಕಾಲ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಿ ದಾಖಲೆ ನಿರ್ಮಿಸಲಾಗಿದೆ.

Advertisement

ಡಿಜೆ ಅಬ್ಬರದೊಂದಿಗೆ ಭಾನುವಾರ ಸಂಜೆ 4 ಗಂಟೆಗೆ ಆರಂಭವಾಗಿದ್ದ ವಿಸರ್ಜನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಸೋಮವಾರ ಸಂಜೆ 6:30ಕ್ಕೆ ಮುಕ್ತಾಯವಾಗಿದೆ. ಸತತವಾಗಿ ನಡೆದ ಮೆರವಣಿಗೆಯಲ್ಲಿ ಸಂಗೀತಕ್ಕೆ ಹೆಜ್ಜೆ ಹಾಕಿ ಜನ ಸಂಭ್ರಮಿಸಿದರು. ಗಣೇಶೋತ್ಸವದ ಜನೋತ್ಸಾಹ ನೋಡುಗರ ಕಣ್ಮನ ಸೆಳೆಯಿತು. ಕಳೆದ ಬಾರಿಗೆ ಹೋಲಿಸಿದರೆ 2 ಗಂಟೆ ತಡವಾಗಿ ವಿಸರ್ಜನೆ ಮಾಡಿದ್ದು ವಿಶೇಷ.

ಪ್ರತಿ ಬಾರಿಯೂ ಗಣಪತಿ ವಿಸರ್ಜನೆ ಮಾಡಲು “ಕೊನೆಯ ಮೂರ್ತಿ ನಮ್ಮದೇ’ ಎಂದು ಮಹಾಮಂಡಳದ ನಡುವೆ ತಿಕ್ಕಾಟ ಇದ್ದೇ ಇರುತ್ತದೆ. ಈ ಬಾರಿಯೂ ಇದು ಪುನರಾವರ್ತನೆಯಾಗಿದೆ. ಸಣ್ಣಪುಟ್ಟ ಅಹಿತಕರ ಘಟನೆ ಹೊರತುಪಡಿಸಿ ಎಲ್ಲವೂ ಶಾಂತಿಯುತವಾಗಿತ್ತು. ಕಳೆದ ವರ್ಷ 4:25ರ ಸುಮಾರಿಗೆ ಖಡಕ್‌ ಗಲ್ಲಿಯ ಗಣೇಶ ಮೂರ್ತಿ ಕೊನೆಯದಾಗಿ ವಿಸರ್ಜನೆ ಮಾಡಲಾಗಿತ್ತು. ಈ ಬಾರಿ ಅದಕ್ಕಿಂತ ಎರಡು ತಾಸು ತಡವಾಗಿ ಅಂದರೆ ಸಂಜೆ 6:10ಕ್ಕೆ ವಿಸರ್ಜನೆ ಮಾಡಲಾಯಿತು. ಇದಕ್ಕೂ ಮುನ್ನ ಅನಗೋಳ ರಾಜಹಂಸ ಗಲ್ಲಿಯ ಗಣಪ ಸಂಜೆ 5:30, ಚವಾಟ ಗಲ್ಲಿಯ ಗಣೇಶ 5:15, ಅನಗೋಳದ ಇನ್ನೂ ಎರಡು ಗಣಪ ಮೂರ್ತಿಗಳು 5 ಗಂಟೆ ಸುಮಾರಿಗೆ ವಿಸರ್ಜನೆಯಾದವು. 6:30ಕ್ಕೆ ಮಹಾನಗರ ಪಾಲಿಕೆಯ ಗಣೇಶ ಮೂರ್ತಿ ವಿಸರ್ಜನೆ ಮಾಡಿ ಮುಕ್ತಾಯಗೊಳಿಸಲಾಯಿತು.

329 ಗಣೇಶ ಮೂರ್ತಿ: ಬೆಳಗಾವಿ ನಗರದಲ್ಲಿ ಒಟ್ಟು 329 ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. 11ನೇ ದಿನವಾದ ಭಾನುವಾರ ವಿಸರ್ಜನೆ ಮಾಡಲಾಯಿತು. ಮೆರವಣಿಗೆ ಬೇಗ ನಡೆಯುವಂತೆ ಪೊಲೀಸರು ಎಷ್ಟೇ ಸೂಚಿಸಿದರೂ ಮಂಡಳದವರು ಮಾತ್ರ ತಲೆ ಕೆಡಿಸಿಕೊಳ್ಳದೇ ಸಮಯ ದೂಡುತ್ತ ಕಪಿಲೇಶ್ವರ ಹೊಂಡಕ್ಕೆ ತಡವಾಗಿ ಬಂದು ವಿಸರ್ಜನೆ ಮಾಡಿದರು. ರಾತ್ರಿಯಿಡೀ ನಡೆದ ಮೆರವಣಿಗೆಯಲ್ಲಿ ಜನತೆ ಉತ್ಸಾಹದಿಂದ ಪಾಲ್ಗೊಂಡಿದ್ದರು. ಡಾಲ್ಬಿ, ಡಿಜೆಗಳಿಗೆ ನಿಷೇಧವಿದ್ದರೂ ಲೆಕ್ಕಕ್ಕೆ ಬರಲಿಲ್ಲ. ಯುವ ಪಡೆ ಹುಚ್ಚೆದ್ದು ಕುಣಿದು ಅಭೂತಪೂರ್ವ ಮೆರವಣಿಗೆಗೆ ಸಾಕ್ಷಿಯಾದರು.

ಗಣಪ ಬಿಟ್ಟು ಹೋದವರನ್ನು
ಕರೆ ತಂದು ಮೂರ್ತಿ ವಿಸರ್ಜನೆ

ಕಪಿಲೇಶ್ವರ ಮಂದಿರ ಬಳಿ ಇರುವ ಎರಡು ಹೊಂಡದಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿತ್ತು. ಕೊನೆಯದಾಗಿ ವಿಸರ್ಜನೆ ಮಾಡಲು ಮಂಡಳದವರು ಪೈಪೋಟಿಗೆ ಇಳಿದರು. ಅನಗೋಳ ಮಾರುತಿ ಗಲ್ಲಿ ಗಣಪನನ್ನು ಹೊಂಡದ ಬಳಿ ನಿಲ್ಲಿಸಿ ಹೋದ ಮಂಡಳದವರು ಬರಲೇ ಇಲ್ಲ. ಜತೆಗೆ ಅನಗೋಳ ರಘುನಾಥ ಪೇಟೆಯ ಗಣಪ ಬಂದರೂ ಬೇಗ ವಿಸರ್ಜನೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದರು. ಅನೇಕ ಸಲ ಅಧಿಕಾರಿಗಳು ಹಾಗೂ ಪೊಲೀಸರು ಮಂಡಳದವರಿಗೆ ಸೂಚಿಸಿದರೂ ಯಾರೂ ಮುಂದೆ ಬರುತ್ತಿರಲಿಲ್ಲ. ಬಳಿಕ ಒತ್ತಾಯ ಮಾಡಿ ವಿಸರ್ಜನೆಗೆ ಒಪ್ಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next