Advertisement

ಜೀವಜಲಕ್ಕಾಗಿ ಜನರ ಹಾಹಾಕಾರ!

04:35 PM Apr 30, 2019 | Team Udayavani |

ಮುದಗಲ್ಲ: ಬರದ ನಾಡಿನಲ್ಲಿ ಬದುಕು ಸಾಗಿಸುತ್ತಿರುವ ಜನರಿಗೆ ಬಿಸಿಲಿನ ತಾಪ ನೆತ್ತಿ ಸುಡಲಾರಂಭಿಸಿದೆ. ಕುಡಿಯುವ ನೀರಿಗೆ ಆಸೆರೆಯಾಗಿದ್ದ ಕೆರೆ-ಬಾವಿ, ಕೊಳವೆಬಾವಿ ಸೇರಿದಂತೆ ಇತರೆ ಜಲಮೂಲಗಳು ಬತ್ತಿ ಅಂತರ್ಜಲ ಪಾತಾಳದತ್ತ ಮುಖ ಮಾಡಿದೆ. ನೀರು ಪೂರೈಕೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ಈ ಭಾಗದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ.

Advertisement

ತಾಲೂಕಿನಲ್ಲಿ ಕೃಷ್ಣಾ ಮತ್ತು ತುಂಗೆ ಹರಿದರೂ ಇಲ್ಲಿನ ಜನರಿಗೆ ನೀರಿನ ಹಾಹಾಕಾರ ತಪ್ಪಿಲ್ಲ. ಪಟ್ಟಣ ಸೇರಿದಂತೆ ಬ್ಯಾಲಿಹಾಳ, ಯರದಿಹಾಳ, ಛತ್ತರ, ರಾಮಜಿ ನಾಯ್ಕ ತಾಂಡಾ, ಬನ್ನಿಗೋಳ, ಜಕ್ಕರಮಡು, ಹಡಗಲಿ, ಹಡಗಲಿ ರಾಮಪ್ಪನ ತಾಂಡಾ, ಪಿಕಳಿಹಾಳ, ಮಟ್ಟೂರ ಸೋಂಪುರ, ಗೊಲ್ಲರಹಟ್ಟಿ ಸೇರಿದಂತೆ ಮುದಗಲ್ಲ ಭಾಗದಲ್ಲಿ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ.

ಕುಡಿಯುವ ನೀರಿನ ಸಮಸ್ಯೆಗೆ ಇದುವರೆಗೆ ಜಾರಿಗೊಳಿಸಿದ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ ನೀರಿನ ಸಮಸ್ಯೆಯೇ ಇರುತ್ತಿರಲಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ನೀರಿನ ಸಮಸ್ಯೆಯನ್ನು ಗಂಭೀರ‌ವಾಗಿ ಪರಿಗಣಿಸದೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಪಿತೂರಿಯಿಂದ ಕುಡಿಯುವ ನೀರಿನ ಯೋಜನೆಗಳು ಹಳ್ಳ ಹಿಡಿದು, ಜನ-ಜಾನುವಾರುಗಳು ವರ್ಷವಿಡಿ ಕುಡಿಯುವ ನೀರಿಗಾಗಿ ಪರಿತಪಿಸುವ ಪರಸ್ಥಿತಿ ನಿರ್ಮಾಣವಾಗಿದೆ.

ಲಿಂಗಸುಗೂರು ತಾಲೂಕಿನ 39 ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 57ಕ್ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನೀರು ಪೂರೈಕೆಗೆ ಸಮರ್ಪಕ ವ್ಯವಸ್ಥೆ ಇಲ್ಲ. ಕೊಳವೆಬಾವಿ ನೀರಿನ ವ್ಯವಸ್ಥೆ ಇರುವ ಅನೇಕ ಹಳ್ಳಿಗಳಲ್ಲಿ ಫ್ಲೋರೈಡ್‌, ಆರ್ಸೆನಿಕ್‌ ಅಂಶ ಇದ್ದು, ಇಂತಹ ನೀರು ಕುಡಿದ ಜನ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆ.

ಯೋಜನೆಗಳು ವಿಫಲ: 2008-09ರಲ್ಲಿ ಫ್ಲೋರೈಡ್‌, ಆರ್ಸೆನಿಕ್‌ ಅಂಶವುಳ್ಳ ನೀರು ಸೇವೆನೆ ಮಾಡುವುದನ್ನು ಗಂಭಿರವಾಗಿ ಪರಿಗಣಿಸಿದ ಸರಕಾರ 2012-13ರಲ್ಲಿ ಲಿಂಗಸುಗೂರು ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೆಲ ಹಳ್ಳಿಗಳಿಗೆ ಹತ್ತಿರದ ಜಲಮೂಲ ಬಳಸಿಕೊಂಡು ಶುದ್ಧ ಕುಡಿಯುವ ನೀರು ಪೂರೈಕೆಗೆ ಯೋಜನೆ ಅನುಷ್ಠಾನಗೊಳಿಸಿತ್ತು. ಇದರ ಜೊತೆಗೆ ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಮುಂದಾಗಿತ್ತು.

Advertisement

ಆದರೆ ಇಂದು ಬಹುತೇಕ ಕಡೆ ಶುದ್ಧ ನೀರಿನ ಘಟಕಗಳು ಹಲವು ಕಾರಣಗಳಿಂದ ಬಾಗಿಲು ಮುಚ್ಚಿವೆ. ಸ್ಕೇರ್‌ಸಿಟಿ ಹಾಗೂ ಜಿಪಂ ಅನುದಾನದಲ್ಲಿ ಬುದ್ದಿನ್ನಿ, ಚಿಕ್ಕಯರದಿಹಾಳ, ಪಿಕಳಿಹಾಳ, ಛತ್ತರ, ಕಿಲಾರಹಟ್ಟಿ , ದಾದುಡಿ ತಾಂಡಾ, ನಿರುಪಾದೇಶ್ವರ ನಗರ, ರಾಮಪ್ಪನ ತಾಂಡಾ ಜುಲಗುಡ್ಡ, ಮಟ್ಟೂರ, ಬ್ಯಾಲಿಹಾಳ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರು ಸಂಗ್ರಹ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳಿಗೆ ಈವರೆಗೆ ಹನಿ ನೀರು ಸರಬರಾಜು ಆಗಿಲ್ಲ. ಸರಕಾರದ ಅನುದಾನ ವ್ಯರ್ಥವಾಗಿ ಪೋಲಾಗುತ್ತಿದೆ. ಅನೇಕ ಕಡೆ ಯೋಜನೆ ಅನುಷ್ಠಾನಗೊಳಿಸಲು ಲಕ್ಷಾಂತರ ಹಣ ಖರ್ಚಾದರೂ ಯೋಜನೆ ಅರ್ಧಕ್ಕೆ ನಿಂತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಅಮರಣ ಗುಡಿಹಾಳ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next