ಬೆಂಗಳೂರು: ನೂತನ ವರ್ಷಾಚರಣೆ ಹಾಗೂ ವಾರಾಂತ್ಯ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶುಕ್ರವಾರ ಮದ್ಯದ ಮಳಿಗೆಗಳ ಮುಂದೆ ಮದ್ಯ ಪ್ರಿಯರ ಸಾಲು ಸಾಲು. ಬೆಳಗ್ಗೆಯಿಂದಲೇ ಮದ್ಯದ ಮಳಿಗೆಗಳ ಮುಂದೆ ಪಾನ ಪ್ರಿಯರು ಕಿಕ್ಕಿರಿದು ತುಂಬಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ನೂತನ ವರ್ಷಾಚರಣೆಗೆ ಕ್ಲಬ್, ರೆಸಾರ್ಟ್, ಹೋಟೆಲ್-ರೆಸ್ಟೋರೆಂಟ್ ಗಳಲ್ಲಿ ಅವಕಾಶ ಇಲ್ಲದ ಕಾರಣ ಖಾಸಗಿ ಪಾರ್ಟಿ ಆಯೋಜನೆಗಾಗಿ ಕೇಸ್‌ಗಟ್ಟಲೆ ಮದ್ಯ ಖರೀದಿಸಿದರು.
ಬೆಂಗಳೂರಿನಲ್ಲಂತೂ ಬಹುತೇಕ ಮದ್ಯದಂಗಡಿಗಳ ಮುಂದೆ ದೊಡ್ಡ ಸಾಲು ಕಂಡು ಬಂದಿತು. ಎಂ.ಜಿ.ರಸ್ತೆಯಲ್ಲಿರುವ ಟಾನಿಕ್ ಮಳಿಗೆ ಸೇರಿದಂತೆ ಎಂಆರ್‌ಪಿ ಮಳಿಗೆ ಹಾಗೂ ಮಾಲ್‌ಗಳಲ್ಲಿನ ಮದ್ಯದ ಮಳಿಗೆಗಳಲ್ಲಿ ಪಾನಪ್ರಿಯರು ಮುಗಿಬಿದ್ದು ಮದ್ಯ ಖರೀದಿ ಮಾಡಿದರು.
ಸಾಮಾನ್ಯವಾಗಿ ಹಿಂದಿನ ವರ್ಷಗಳಲ್ಲಿ ಒಂದು ದಿನ ಮಾತ್ರ ನೂತನ ವರ್ಷ ಆಚರಣೆಯಾಗುತ್ತಿತ್ತು. ಆದರೆ, ಈ ಬಾರಿ ಶುಕ್ರವಾರ ರಾತ್ರಿ, ಶನಿವಾರ ಮತ್ತು ಭಾನುವಾರ ಮೂರು ದಿನಗಳ ವಾರಾಂತ್ಯ ರಜೆ ಸಿಕ್ಕಿದೆ. ಹೀಗಾಗಿ, ಮದ್ಯ ಖರೀದಿ ಭರಾಟೆ ಭರ್ಜರಿಯಾಗಿಯೇ ಇತ್ತು.
ನಗರದ ಹೊರ ವಲಯಕ್ಕೆ ಪಾರ್ಟಿ ಶಿಫ್ಟ್: ನಗರದಲ್ಲಿ ಹೋಟೆಲ್‌ಗಳು, ಪಬ್ ಹಾಗೂ ಕ್ಲಬ್‌ಗಳಲ್ಲಿ ಕೊರೊನಾ ನಿಯಮ ಪಾಲನೆ ನಿರ್ಬಂಧ ಹೇರಿರುವುದರಿಂದ ಜನರು ಇಡೀ ರಾತ್ರಿ ಸಂಭ್ರಮಿಸಲು ಅವಕಾಶ ಇಲ್ಲವಾಗಿದೆ.
ಪರಿಣಾಮ, ನಗರದ ನೆಲಮಂಗಲ, ಮಾಗಡಿ, ತಾವರೆಕೆರೆ, ಕನಕಪುರ, ರಾಮನಗರ, ಬಿಡದಿ ಮತ್ತು ಚನ್ನಪಟ್ಟಣ ಸೇರಿದಂತೆ ಸುಮಾರು 50ರಿಂದ 100 ಕಿ.ಮೀ. ದೂರಕ್ಕೆ ಪಾರ್ಟಿಗಳು ಶಿಫ್ಟ್ ಆಗಿದ್ದವು. ಮೂರು ದಿನಗಳ ರಜೆ ಇದೆ. ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಇರುವುದರಿಂದ ಸ್ನೇಹಿತ ರೊಂದಿಗೆ ಹೊಸ ವರ್ಷದ ಸಂಭ್ರಮವನ್ನು ಖುಷಿಯಾಗಿ ಆಚರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಗರದ ಹೊರ ವಲಯಕ್ಕೆ ಹೋಗಲು ನಿರ್ಧರಿಸಿದ್ದೇವೆ. ಸ್ನೇಹಿತರ ತೋಟದಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದೇವೆ. ಶನಿವಾರ ಮತ್ತು ಭಾನುವಾರ ಎರಡು ದಿನ ರಜೆಯನ್ನು ಕಳೆಯಲು ಮದ್ಯವನ್ನು ಖರೀದಿ ಮಾಡುತ್ತಿದ್ದೇವೆ ಎಂದು ಮದ್ಯ ಖರೀದಿಸಿದ ಪ್ರದೀಪ್ ತಿಳಿಸಿದರು.