Advertisement

“ಪರಿಸರ ಸ್ನೇಹಿ ಗಣೇಶ ಹಬ್ಬ-2022: 30 ನಿಮಿಷದಲ್ಲಿ 3,308 ಗಣೇಶ: ಗಿನ್ನೆಸ್‌ ದಾಖಲೆ

10:33 PM Aug 28, 2022 | Team Udayavani |

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ನ್ಯಾಷನಲ್‌ ಕಾಲೇಜಿನ ಮೈದಾನದಲ್ಲಿ ರವಿವಾರ ಹಮ್ಮಿಕೊಂಡ “ಪರಿಸರ ಸ್ನೇಹಿ ಗಣೇಶ ಹಬ್ಬ-2022′ ಗಿನ್ನೆಸ್‌ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಿದೆ.

Advertisement

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಗಣೇಶ ಉತ್ಸವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಜೇಡಿಮಣ್ಣಿನ ಗಣಪತಿ ನಿರ್ಮಾಣದ ಜಾಗೃತಿ ಕಾರ್ಯಕ್ರಮದಲ್ಲಿ ಕೇವಲ 30 ನಿಮಿಷದಲ್ಲಿ 3,308 ಜನರು ಪರಿಸರ ಸ್ನೇಹಿ ಗಣಪತಿಯನ್ನು ರಚಿಸುವ ಮೂಲಕ ಗಿನ್ನೆಸ್‌ ದಾಖಲೆಯ ಪುಟ ಸೇರಿದೆ. ಈ ಹಿಂದೆ 2,183 ಮಂದಿ ನಿರ್ಮಿಸಿದ ಪರಿಸರ ಸ್ನೇಹಿ ಗಣಪತಿ ದಾಖಲೆ ಬರೆದಿತ್ತು.

ನೂರಾರು ತರಬೇತುದಾರರು:
ಎಲ್ಲಿಯೂ ಗಣಪತಿಯ ಮೂರ್ತಿಗೆ ಚ್ಯುತಿ ಬರದಂತೆ ನೋಡಿಕೊಳ್ಳಲು ನೂರಾರು ಮಂದಿ ತರಬೇತಿದಾರರನ್ನು ನೇಮಿಸಲಾಗಿತ್ತು. ಮೈದಾನದಲ್ಲಿ ಬೃಹದಾಕಾರದ ಎಲ್‌ಇಡಿ ಪರೆದ ಮೇಲೆ ಮೂರ್ತಿ ನಿರ್ಮಾಣದ ಲೈವ್‌ ವಿಡಿಯೋ ಸಹ ಪ್ರಸಾರವಾಗಿತ್ತು. ತಮ್ಮ ಕೈಯಾರೆ ಮೂರ್ತಿ ತಯಾರಿಸಿ ನೆರೆದಿದ್ದವರು ಖುಷಿಪಟ್ಟರು. ತಯಾರಿಸಿದ ಮೂರ್ತಿಗಳನ್ನು ಮನೆಗಳಿಗೆ ತೆಗೆದುಕೊಂಡು ಹೋದರು. ಮನೆಯಲ್ಲಿ ರಾಸಾಯನಿಕ ಬಣ್ಣ ಬಳಿಯದೇ ಆಹಾರ ಧಾನ್ಯ, ತರಕಾರಿ, ಕುಂಕುಮ, ಅರಿಶಿಣದಲ್ಲಿ ಮೂರ್ತಿ ಅಲಂಕಾರ ಮಾಡಿ ಪೂಜಿಸಲು ಆಯೋಜಕರು ಸಲಹೆ ನೀಡಿದರು.

ಉಚಿತ ಕಿಟ್‌:
ಕಾರ್ಯಕ್ರಮದಲ್ಲಿ ಭಾಗಿಯಾಗಿದ ಪ್ರತಿಯೊಬ್ಬರಿಗೂ ಗಣೇಶ ಮೂರ್ತಿ ತಯಾರಿಕೆಗೆ ಹದ ಮಾಡಿದ 3.5 ಕೆ.ಜಿ. ಜೇಡಿ ಮಣ್ಣು, ಹೂವು ಮತ್ತು ಔಷಧ ಗುಣವುಳ್ಳ ಸಸ್ಯಗಳ ಬೀಜ, ತಯಾರಿಕೆ ಬೇಕಾದ ಕಡ್ಡಿ, ಒಂದು ನೀರಿನ ಲೋಟ, ಅರ್ಧ ಮೀಟರ್‌ ಬಟ್ಟೆ, ಒಂದು ಮರದ ರಟ್ಟನ್ನು ಒಳಗೊಂಡ ಉಚಿತ ಕಿಟ್‌ ನೀಡಲಾಗಿತ್ತು. ಜತೆಗೆ ವಿದ್ಯಾರ್ಥಿಗಳನ್ನು ಕರೆ ತರಲು ಮಾಲಿನ್ಯ ನಿಯಂತ್ರಣ ಮಂಡಳಿ 20 ಬಿಎಂಟಿಸಿ ಬಸ್‌ಗಳ ನಿಯೋಜನೆ ಮಾಡಿದೆ.

ಮುಂದಿನ ವರ್ಷ ರಾಜ್ಯಾದ್ಯಂತ
ಪರಿಸರ ಸ್ನೇಹಿ ಗಣೇಶ ಕಾರ್ಯಾಗಾರ
ಬೆಂಗಳೂರು: ಮುಂದಿನ ವರ್ಷದಿಂದ ಗಣೇಶ ಹಬ್ಬದ ಸಂದರ್ಭದಲ್ಲಿ ರಾಜ್ಯಾದ್ಯಂತ ಸಾರ್ವಜನಿಕರಲ್ಲಿ ಪರಿಸರ ಸ್ನೇಹಿ ಗಣಪತಿ ನಿರ್ಮಾಣ ಬೃಹತ್‌ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಶಾಂತ ಎ.ತಿಮ್ಮಯ್ಯ ತಿಳಿಸಿದರು.

Advertisement

ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆದ ಪರಿಸರ ಸ್ನೇಹಿ ಗಣೇಶ ಹಬ್ಬ-2022′ ಕಾರ್ಯಕ್ರಮದಲ್ಲಿ ಮಾತನಾಡಿದ ಅವ ರು, ಮುಂದಿನ ವರ್ಷದಿಂದ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಅಲ್ಲಿನ ಸ್ಥಳೀಯ ಗಣೇಶೋತ್ಸವ ಸಮಿತಿಗಳ ಸಹಯೋಗದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.

ಕಳೆದ ವರ್ಷ ಸಾಮಾಜಿಕ ಜಾಲತಾಣಗಳ ಮೂಲಕ ಪಿಒಪಿ ಗಣೇಶ ಬದಲು ಅರಿಶಿಣ ಗಣೇಶ ಮೂರ್ತಿ ತಯಾರಿಸಿ ಬಳಸುವ ಬಗ್ಗೆ ಅರಿಶಿನ ಗಣೇಶ ಅಭಿಯಾನವನ್ನು ಮಂಡಳಿ ಆಯೋಜಿಸಿತ್ತು. ಈ ಅಭಿಯಾನದಲ್ಲಿ 2,138 ಮೂರ್ತಿಗಳನ್ನು ತಯಾರಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿತು. ಜತೆಗೆ ಏಷಿಯಾ ಬುಕ್‌ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿತ್ತು. ಈ ಬಾರಿ ರಾಸಾಯನಿಕ ಬಣ್ಣಲೇಪಿತ ಬದಲು ಮಣ್ಣಿನ ಮತ್ತು ಔಷಧೀಯ ಸಸ್ಯಗಳ ಬೀಜ ಒಳಗೊಂಡ ಗಣೇಶ ಮೂರ್ತಿ ಬಳಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದಾರೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಬೆಂಗಳೂರು ಗಣೇಶೋತ್ಸವ ಸಮಿತಿ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next