ಮುಳಬಾಗಿಲು: ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಂದ ಮಹಿಳೆಯರು, ವೃದ್ಧರು, ಮಕ್ಕಳು ಆತಂಕದಲ್ಲೇ ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ಸಣ್ಣ ರಸ್ತೆ ಅಭಿವೃದ್ಧಿ ಪಡಿಸಲು ಎರಡು ಮೂರು ತಿಂಗಳು ತೆಗೆದುಕೊಳ್ಳುವುದರಿಂದ ಜನ ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿಕೊಂಡು ಓಡಾಡುವಂತಾಗಿದೆ.
ನಗರದ ವರದರಾಜ ಟ್ಯಾಕೀಸ್‌ನಿಂದ ಮುತ್ಯಾಲಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಿವಿಧ ಕಾರಣಗಳಿಗಾಗಿ ಹಲವು ವಾರಗಳಿಂದ ಹಗೆಯುತ್ತಲೇ ಇದ್ದಾರೆ. ಮೊದಲು ಚರಂಡಿ ನಿರ್ಮಾಣಕ್ಕಾಗಿ ಹಗೆದು ಹಲವು ವಾರಗಳ ಕಾಲ ಚರಂಡಿ ಕಾರ್ಯ ನಡೆಯದೆ ಹಾಗೆ ಬಿಡಲಾಗಿತ್ತು.
ನಂತರ ಚರಂಡಿ ನಿರ್ಮಾಣಗೊಂಡರೂ ಚರಂಡಿ ಪಕ್ಕದಲ್ಲಿ ತೋಡಿದ್ದ ಗುಂಡಿಗಳನ್ನು ಮುಚ್ಚಿಲ್ಲ. ಪ್ರತಿನಿತ್ಯ ಶಾಲಾ ಮಕ್ಕಳು ಓಡಾಡುವ ಈ ರಸ್ತೆಯು ಎಷ್ಟು ಅಪಾಯಕಾರಿಯಾಗಿದೆ ಎಂದರೆ ಸೈಕಲ್ ತುಳಿಯಲು ಆಗದ ಮಟ್ಟಿಗೆ ಹದಗೆಟ್ಟಿದೆ. ಕೆಲವರು ತೆರೆದ ಗುಂಡಿಗಳಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ವಾರದ ಹಿಂದೆ ರಸ್ತೆ ಅಭಿವೃದ್ಧಿ ಪಡಿಸುವುದಾಗಿ ಹೇಳಿ ಸಮತಟ್ಟು ಮಾಡಿದ್ದು, ಈಗ ಮೇಲೆದ್ದ ಕಲ್ಲುಗಳಿಂದ ಸಂಚಾರ ದುಸ್ಥರವಾಗಿದೆ.
ಸಾಹಿತಿ ಬೇಸರ: ರಸ್ತೆಯ ನಿರ್ಮಾಣ ಕಾಮಗಾರಿಯಿಂದಾಗಿ ಮನೆಗಳಿಗೆ ಹಾಕಿಕೊಂಡಿದ್ದ ನೀರು, ಶೌಚಾಲಯ, ಚರಂಡಿ ಪೈಪುಗಳು ಹಾಳಾಗಿವೆ. ಮನೆ ಒಳಗೆ ವಾಹನಗಳನ್ನು ನಿಲ್ಲಿಸಲು, ನಿಲ್ಲಿಸಿದ್ದನ್ನು ಹೊರತೆಗೆಯಲು ಸಾಧ್ಯವಾಗದಷ್ಟು ಆಳಕ್ಕೆ ರಸ್ತೆ ಹಗೆಯಲಾಗಿದೆ. ಇದರಿಂದ ದೂರದ ಯಾರಧ್ದೋ ಮನೆಗಳಲ್ಲಿ ವಾಹನ ನಿಲ್ಲಿಸುವ ಅನಿವಾರ್ಯತೆ ಇದೆ. ಕಾಮಗಾರಿ ಬೇಗ ಮುಗಿದ್ರೆ ಸಹಿಸಿಕೊಳ್ಳಬಹುದು. ಆದರೆ, ವಾರ, ತಿಂಗಳು ಕಳೆದ್ರೂ ಹಗೆದ ರಸ್ತೆಗಳು, ಕಿತ್ತು ಹಾಕಿದ ಪೈಪ್‌ಲೈನ್ ಸಂಪರ್ಕ ಸರಿಪಡಿಸದೇ ಇದ್ದರೆ ಹೇಗೆ ಎಂದು ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಶಿವಪ್ಪ ಅರಿವು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಸರಿಯಾಗಿ ಮಾಡಲ್ಲ: ಪೂರ್ವ ಯೋಜನೆ ಇಲ್ಲದೇ, ಪೈಪ್‌ಲೈನ್, ಕೇಬಲ್, ಮುಂತಾದ ಕಾರಣಗಳಿಗಾಗಿ ನಗರಸಭೆ ಅಧಿಕಾರಿಗಳು ರಸ್ತೆ ಹಗೆಯುತ್ತಲೇ ಇರುತ್ತಾರೆ. ಗುಂಡಿ ತೆಗೆದು ಎರಡು ವಾರಗಳಾದ್ರೂ ನೀರಿನ ಪೈಪ್ ಹಾಕದೇ ಸತಾಯಿಸುತ್ತಿದ್ದಾರೆ. ಒಂದು ದಿನ ಕೆಲಸ ನಡೆದರೆ ಮೂರು ದಿನ ಇತ್ತ ತಲೆಯೂ ಹಾಕುವುದಿಲ್ಲ. ಪೈಪುಗಳು ರಸ್ತೆಯಲ್ಲಿ ಬಿದ್ದಿರುವುದು ಕಂಡು ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೀರು ಸೋರುತ್ತಿದೆ ಎಂಬ ಕಾರಣಕ್ಕೆ ಇತ್ತೀಚಿಗೆ ನಡು ರಸ್ತೆಯಲ್ಲಿ ದೊಡ್ಡ ಗುಂಡಿ ತೆಗೆಯಲಾಗಿದೆ. ಅದನ್ನು ಮುಚ್ಚುವ ಗೋಜಿಗೆ ಹೋಗಿಲ್ಲ. ಮೂರು ದಿನಗಳಿಂದ ವಾಹನ ಸಂಚಾರ ನಿಂತು ಹೋಗಿದೆ. ಕ್ರಮಬದ್ದ ಕೆಲಸವಾಗಲಿ, ಸಮಯ ಮಿತಿಯಲ್ಲಿ ಪೂರ್ಣಗೊಳಿಸುವ ಲಕ್ಷಣಗಳಾಗಲಿ ಕಾಣುತ್ತಿಲ್ಲ. ಜನಸಾಮಾನ್ಯರಲ್ಲಿ ತಳಮಳ ಉಂಟಾಗಿದೆ. ಹದಗೆಟ್ಟ ರಸ್ತೆಗಳು ಸುಧಾರಣೆಯಾಗಬೇಕೆಂದು ಎಲ್ಲರೂ ಬಯ ಸುತ್ತಾರಾದರೂ ದುರಸ್ತಿಗೆ ತೆಗೆದುಕೊಳ್ಳುವ ಕಾಲ ನೋಡಿ ಬೆಚ್ಚಿ ಬೀಳುವಂತಾಗಿದೆ.