Advertisement

ಜನರಿಗೆ ಗುಂಡಿ ಮುಕ್ತ ರಸ್ತೆ ಹಕ್ಕು ಇದೆ; ಹೈಕೋರ್ಟ್‌

03:19 PM Sep 20, 2022 | Team Udayavani |

ಬೆಂಗಳೂರು: ನಗರದಲ್ಲಿ ರಾಜಕಾಲುವೆಗಳ ನಿರ್ವಹಣೆ ಸಂಬಂಧ ಸಿಎಜಿ ವರದಿಯ ಶಿಫಾರಸು ಗಳನ್ನು ಅನುಷ್ಠಾನಗೊಳಿಸಲು ಮಂಗಳವಾರ ದೊಳಗೆ (ಸೆ.20) ಮೂವರು ಅಧಿಕಾರಿಗಳ ಸಮಿತಿ ರಚಿಸಲು ಹೈಕೋರ್ಟ್‌ ಆದೇಶಿಸಿದೆ. ನಗರದ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ವಿಜಯನ್‌ ಮೆನನ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಹಾಗೂ ನ್ಯಾ. ಎಸ್‌. ವಿಶ್ವಜಿತ್‌
ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬಿಬಿಎಂಪಿಗೆ ಈ ಆದೇಶ ನೀಡಿದೆ.

Advertisement

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ನಗರದ ರಾಜಕಾಲುವೆ ನಿರ್ವಹಣೆಗೆ ಸಂಬಂಧ ಶಿಫಾರಸು ಮಾಡಿ 2021ರ ಸೆಪ್ಟೆಂಬರ್‌ನಲ್ಲೇ ಸಿಎಜಿ ವರದಿ ನೀಡಿದೆ. ಆ ವರದಿ ಆಧರಿಸಿ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಬಳಿಕ ಸಿಎಜಿ ವರದಿ ಜಾರಿ ಮಾಡಬಲ್ಲ ಎಂದೆನಿಸುವ ಮೂವರು ಅಧಿಕಾರಿಗಳ ಸಮಿತಿಯನ್ನು ಮಂಗಳವಾರದೊಳಗೆ (ಸೆ.20)  ರಚಿಸಬೇಕು. ಆ ಸಮಿತಿಯು ಸಿಎಜಿ ವರದಿಯ ಶಿಫಾರಸುಗಳ ಜಾರಿಗೊಳಿಸಲು ಕ್ರಮ ಕೈಗೊಂಡು 15 ದಿನಗಳಿಗೊಮ್ಮೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು.

ಈ ನಿರ್ದೇಶನಗಳ ಉಲ್ಲಂ ಸಿದರೆ ಅಥವಾ ಪಾಲಿಸದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಅಲ್ಲದೆ, ರಾಜಕಾಲುವೆ ಒತ್ತುವರಿ ಸೇರಿದಂತೆ ಅರ್ಜಿ ಸಂಬಂಧ ಹೈಕೋರ್ಟ್‌ ವಿಚಾರಣೆ ನಡೆಸುತ್ತಿರುವ ವಿಚಾರಗಳ ಕುರಿತು ಯಾವುದೇ ಪ್ರಾಧಿಕಾರವು ಪರ್ಯಾಯ ತನಿಖೆ ಅಥವಾ ಆದೇಶ ಮಾಡುವಂತಿಲ್ಲ. ಈ ಆದೇಶವು ಎಲ್ಲಾ ಪ್ರಾಧಿಕಾರಿಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

2 ಸಾವಿರ ಒತ್ತುವರಿ ತೆರವು: ಇದಕ್ಕೂ ಮುನ್ನ ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, ಬೆಂಗಳೂರಿನಲ್ಲಿ ಸೆ.16ರವರೆಗೆ ಒಟ್ಟು 2,626 ಕಡೆ ರಾಜಕಾಲುವೆ ಒತ್ತುವರಿ ಗುರುತಿಸಲಾಗಿದೆ. ಆ ಪೈಕಿ 2,024 ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದ 602 ಒತ್ತುವರಿಗಳ ತೆರವು ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, 602 ಒತ್ತುವರಿಗಳನ್ನು ಬಿಬಿಎಂಪಿ ತೆರವುಗೊಳಿಸಿ ವರದಿ ಸಲ್ಲಿಸಬೇಕು ಎಂದು ನಿದೇಶಿಸಿತು.

ಕುಂದು ಕೊರತೆ ಪರಿಹರಿಸುವ ರೀತಿ ಹೀಗೇನಾ?
ಮಳೆ ನೀರು ಪ್ರವಾಹದಿಂದ ನಗರದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಕುಂದುಕೊರತೆ ಪರಿಹಾರ ಕೇಂದ್ರ ಆರಂಭಿಸಲು ಹೈಕೋರ್ಟ್‌ ನಿರ್ದೇಶಿಸಿತ್ತು. ಅದರಂತೆ ಕುಂದು ಕೊರತೆ ನಿವಾರಣೆಗೆ ವೆಬ್‌ಸೈಟ್‌ ಆರಂಭಿಸಿರುವುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ. ಆದರೆ, ವೆಬ್‌ ಸೈಟ್‌ನಲ್ಲಿ ನೀಡಲಾಗಿರುವ ಕೆಲ ದೂರವಾಣಿ ಸಂಖ್ಯೆಯಲ್ಲಿ 9 ಸಂಖ್ಯೆ ಮಾತ್ರ ಇದೆ. ಮತ್ತಷ್ಟು ಸಂಖ್ಯೆಗಳು ಕಾರ್ಯ ನಿರ್ವಹಿಸುತ್ತಲೇ ಇಲ್ಲ. ಕುಂದು ಕೊರತೆ ಪರಿಹರಿಸುವ ರೀತಿ ಹೀಗೇನಾ? ಎಂದು ಬಿಬಿಎಂಪಿಯನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.

Advertisement

ಜನ ರಿಗೆ ಗುಂಡಿ ಮುಕ್ತ ರಸ್ತೆ ಹಕ್ಕು ಇದೆ
ನಗರದ ಪ್ರಮುಖ ರಸ್ತೆಗಳ 427.12 ಕಿ.ಮೀ. ರಸ್ತೆ ರಿಪೇರಿ ಮತ್ತು ಡಾಂಬರೀಕರಣ ಕಾರ್ಯಕ್ಕೆ ಟೆಂಡರ್‌ ನೀಡಲಾಗಿದೆ. ಅದರಲ್ಲಿ ಕೆಲ ಕೆಲಸಗಳು 2023ರ ಜ.31ರೊಳಗೆ ಪೂರ್ಣಗೊಳ್ಳಲಿದೆ. ಇನ್ನೂ ಪಾಲಿಕೆಯ 8 ವಲಯಗಳ ವಾರ್ಡ್‌ ಮಟ್ಟದಲ್ಲಿ ಒಟ್ಟು 2,500 ಕಿ.ಮೀ. ರಸ್ತೆಗಳ ಗುಂಡಿ ಮುಚ್ಚುವ, ರಸ್ತೆ ರಿಪೇರಿ ಮತ್ತು ಡಾಂಬರೀಕರಣ ಕಾರ್ಯವನ್ನು 2023ರ ಮಾ.31ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.

ಜತೆಗೆ ನಗರದಲ್ಲಿ ಸೆ.14ರವರೆಗೆ ಒಟ್ಟು ಪ್ರಮುಖ ರಸ್ತೆಗಳ 2,010 ರಸ್ತೆ ಗುಂಡಿ ಮುಚ್ಚಲಾಗಿದ್ದು, ಉಳಿದ 221 ಗುಂಡಿ ಭರ್ತಿ ಮಾಡಬೇಕಿದೆ. ಅವುಗಳನ್ನು ಮುಂದಿನ ಹತ್ತು ದಿನಗಳಲ್ಲಿ ಹಾಟ್‌ ಮಿಕ್ಸ್‌ ಬಳಸಿ ಮುಚ್ಚಲಾಗುವುದು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಗರದಲ್ಲಿ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ಅವುಗಳನ್ನು ನಿರ್ವಹಣೆ ಮಾಡುವುದು ಶಾಸನಬದ್ಧ ಸಂಸ್ಥೆಯಾದ ಬಿಬಿಎಂಪಿ ಜವಾಬ್ದಾರಿ. ಗುಂಡಿ ಮುಕ್ತ ರಸ್ತೆ ಹೊಂದುವ ಹಕ್ಕು ನಾಗರಿಕರಿಗೆ ಇದೆ. ಸಾಕಷ್ಟು ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದೆ. ಅದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯವಿದೆ. ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಬಿಬಿಎಂಪಿಗೆ ಸೂಚಿಸಿ, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next