ಹಾವೇರಿ: ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಬಹುತೇಕ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕಳೆದ ಆಗಸ್ಟ್ ಹಾಗೂ ಅಕ್ಟೋಬರ್‌ನಲ್ಲಿ ಉಲ್ಬಣಿಸಿದ ನೆರೆ ಮತ್ತು ಅತಿವೃಷ್ಟಿ ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನೆರೆ ಹಾಗೂ ಅತಿವೃಷ್ಟಿ ಪರಿಹಾರ ಕೆಲಸಗಳಿಗೆ ಮೊದಲು ಸಮೀಕ್ಷೆ ಸರಿಯಾಗಿಲ್ಲ ಹಾಗೂ ಪರಿಹಾರ ಸರಿಯಾಗಿ ಮುಟ್ಟಿಲ್ಲ ಎಂಬ ಆರೋಪ ಎದುರಾಯಿತು. ಪರಿಣಾಮ ಎರಡ್ಮೂರು ಬಾರಿ ಸಮೀಕ್ಷೆ ನಡೆಸಬೇಕಾಯಿತು. ಬಳಿಕ ಉಪಚುನಾವಣಾ ನೀತಿ ಸಂಹಿತೆ ಅಡ್ಡಿಯಾಯಿತು. ಇದನ್ನೆಲ್ಲ ಸರಿಪಡಿಸಿಕೊಂಡು ಇನ್ನೇನು ಕಾಮಗಾರಿಗೆ ಚುರುಕು ನೀಡಬೇಕು ಎನ್ನುವಷ್ಟರಲ್ಲಿ ಲಾಕ್ ಡೌನ್ ಎದುರಾಗಿದೆ.
ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡವರು ಈವರೆಗೂ ಮನೆ ನಿರ್ಮಾಣವಾಗದೆ ಸಂಕಷ್ಟಪಡುತ್ತಿದ್ದರೆ, ಸ್ಥಳಾಂತರ ಅಗತ್ಯವಿರುವ ನದಿ ಪಾತ್ರದ ಹಳ್ಳಿಗರು ಮತ್ತೆ ಮಳೆಗಾಲದ ಆತಂಕದಲ್ಲಿದ್ದಾರೆ. ಹಾಳಾದ ಸೇತುವೆ, ರಸ್ತೆಗಳು ಈವರೆಗೂ ದುರಸ್ತಿಯಾಗದೆ ಮಳೆಗಾಲದಲ್ಲಿ ಸಂಚಾರ, ಸಂಪರ್ಕಕ್ಕೂ ಅಡ್ಡಿಯಾಗುವ ಭಯ ಎದುರಾಗಿದೆ.
ಸೂರಿಲ್ಲದವರ ಗೋಳು: ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 21,915 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 359 ಮನೆಗಳು ಸಂಪೂರ್ಣ, 4528 ಮನೆಗಳು ತೀವ್ರ, 17028 ಮನೆಗಳು ಅಲ್ಪಸ್ವಲ್ಪ ಹಾನಿಯಾಗಿವೆ. ಸಂಪೂರ್ಣ ಹಾಗೂ ತೀವ್ರ ಹಾನಿಗೊಗಾದವರಿಗೆ ಮಳೆಗಾಲದ ಚಿಂತೆ ಶುರುವಾಗಿದೆ. ಇವರಿಗೆ ತುರ್ತು ಪರಿಹಾರವಾಗಿ 10 ಸಾವಿರ, ಮನೆ ಹಾನಿ ಪರಿಹಾರವಾಗಿ ಒಂದು ಲಕ್ಷ ರೂ. ಮೊದಲ ಕಂತು ಬಿಡುಗಡೆಯಾಗಿದ್ದು ಬಿಟ್ಟರೆ ಬೇರೇನೂ ಪರಿಹಾರ ಬಂದಿಲ್ಲ. ಹಲವೆಡೆ ಮನೆ ನಿರ್ಮಾಣಕ್ಕೆ ಅಡಿಪಾಯವೂ ಬಿದ್ದಿಲ್ಲ. ಸಾವಿರಾರು ಕುಟುಂಬಗಳಿಗೆ ಮಳೆಯಲ್ಲಿಯೇ ಕಳೆಯಬೇಕಾದ ಆತಂಕ ಎದುರಾಗಿದೆ. ಸ್ವತಃ ತಾವೇ ತಾತ್ಪೂರ್ತಿಕವಾಗಿ ಸೂರು ಕಟ್ಟಿಕೊಳ್ಳೋಣ ಎಂದರೆ ಕಚ್ಚಾ ಸಾಮಗ್ರಿಗಳೂ ಸಿಗುತ್ತಿಲ್ಲ.
ಮತ್ತೆ ನೆರೆ ಭೀತಿ: ನೆರೆ ಭೀತಿಯಲ್ಲಿರುವ 19 ಗ್ರಾಮಗಳ ಸ್ಥಳಾಂತರ ಆಗಬೇಕಿತ್ತು. ಜತೆಗೆ 19 ಗ್ರಾಮಗಳಲ್ಲಿ ತಡೆಗೋಡೆ ನಿರ್ಮಾಣವೂ ಆಗಬೇಕಿತ್ತು. ಈ ಬೇಸಿಗೆಯಲ್ಲಿ ಕಾಮಗಾರಿ ಶೀಘ್ರ ಮಾಡಿ ನದಿ ಪಾತ್ರದ ಜನರ ಮಳೆಗಾಲದ ನೆಮ್ಮದಿಯ ಜೀವನಕ್ಕೆ ಅನುಕೂಲ ಕಲ್ಪಿಸಬೇಕಿತ್ತು. ಆದರೆ, ಲಾಕ್ ಡೌನ್ ಪರಿಣಾಮ ಇದ್ಯಾವುದೂ ಸಾಧ್ಯವಾಗದೆ ಜನ ಮಳೆಗಾಲದ ಆತಂಕದಲ್ಲಿಯೇ ದಿನ ಕಳೆಯಬೇಕಾಗಿದೆ.
ಮೂಲಸೌಕರ್ಯ ಮರೀಚಿಕೆ: ನೆರೆಯಿಂದ ಜಿಪಂ ವ್ಯಾಪ್ತಿಯ ಅಂದಾಜು 1,200 ಕಿಮೀಗೂ ಅಧಿಕ ಗ್ರಾಮೀಣ ರಸ್ತೆಗಳು ಹಾಳಾಗಿದ್ದು 30 ಕೋಟಿಗೂ ಹೆಚ್ಚು ಹಾನಿಯಾಗಿದೆ. ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆ ಆರ್ಭಟ ಹಾಗೂ ನೆರೆಗೆ 875.80 ಕಿಮೀ ಗ್ರಾಮೀಣ ರಸ್ತೆ ಹಾಳಾಗಿದ್ದರೆ, ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆ, ನೆರೆಗೆ 157.50 ಕಿಮೀ ರಸ್ತೆ ಹಾಳಾಗಿದೆ. ಈ ರಸ್ತೆಗಳ ದುರಸ್ತಿ ಜೂನ್ ಒಳಗೆ ಆಗದಿದ್ದರೆ ಮಳೆಗಾಲದಲ್ಲಿ ಸಂಬಂಧಪಟ್ಟ ಗ್ರಾಮಸ್ಥರ ಸಂಚಾರ ದುಸ್ತರವಾಗಲಿದೆ.
ಮನೆ ಕಳೆದುಕೊಂಡವರಿಗೆ ಶೀಘ್ರ ಮನೆ ಕಟ್ಟಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಅತಿವೃಷ್ಟಿಯಿಂದ ಹಾನಿಯಾದ ಮೂಲಸೌಕರ್ಯ ಅಭಿವೃದ್ಧಿಗೆ 35 ಕೋಟಿ ರೂ. ಬಿಡುಗಡೆಯಾಗಿದ್ದು, ಲಾಕ್‌ಡೌನ್ ಮುಗಿಯುತ್ತಿದ್ದಂತೆ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲಾಗುವುದು.
-ಕೃಷ್ಣ ಭಾಜಪೇಯಿ, ಜಿಲ್ಲಾಧಿಕಾರಿ
-ಎಚ್.ಕೆ. ನಟರಾಜ