Advertisement

ಜನರೇ ಸೆಕೆಂಡ್‌ ಹ್ಯಾಂಡ್‌ ಕಾರು ಕೊಡಿಸಿದ್ದರು!

01:17 AM Feb 06, 2023 | Team Udayavani |

ಡಾ.ಎಚ್‌.ಸಿ. ಮಹದೇವಪ್ಪ, ಮಾಜಿ ಸಚಿವರು
ಅವತ್ತಿನ ಚುನಾವಣೆಗೂ ಇವತ್ತಿನ ಚುನಾವಣೆಗೂ ಹೋಲಿಸುವ ಹಾಗೆಯೇ ಇಲ್ಲ. ಆ ಕಾಲದ ಮೌಲ್ಯಗಳೇ ಬೇರೆ, ಈ ಕಾಲದ ಮೌಲ್ಯಗಳೇ ಬೇರೆ. ನಾನು ಮೊದಲು 1985ರಲ್ಲಿ ತಿ.ನರಸೀಪುರ (ಮೀಸಲು) ವಿಧಾನ­ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದೆ. ಅವತ್ತಿನ ರಾಜಕೀಯ ಪಕ್ಷಗಳು, ಮುಖಂಡರು, ಪ್ರಜೆಗಳಿಗೆ ಅಭಿವೃದ್ಧಿ ಹಾಗೂ ಜನಪರ ನಿಲುವುಗಳಲ್ಲಿ ಆಸಕ್ತಿ ಇತ್ತು.

Advertisement

ಅಭಿವೃದ್ಧಿ ಪರ ಕಾಳಜಿ ಇತ್ತು. ರಾಜಕಾರಣಿಗಳು ಜನಸಾಮಾನ್ಯರ ಪರವಾಗಿರುತ್ತಿದ್ದರು. ಜನರು ಇದನ್ನು ಗೌರವಿಸುತ್ತಿದ್ದರು. ಜಾತಿ, ಧರ್ಮ, ಹಣಕ್ಕೆ ಪ್ರಾಮುಖ್ಯ ಇರಲಿಲ್ಲ. ಜಾತಿ ವ್ಯವಸ್ಥೆ ಅಸ್ತಿತ್ತದಲ್ಲಿದ್ದರೂ ಚುನಾವಣ ರಾಜಕಾರಣದಲ್ಲಿ ಇವು ಮುಂಚೂಣಿಗೆ ಬಂದಿರಲಿಲ್ಲ. ಪಕ್ಷ ಹಾಗೂ ಪಕ್ಷಗಳ ಕಾರ್ಯಕ್ರಮಗಳ ಆಧಾರದ ಮೇಲೆ ಕಾರ್ಯಕರ್ತರು ಕೆಲಸ ಮಾಡುತ್ತಿದ್ದರು. ಚುನಾವಣೆ ವೇಳೆ ಬೂತ್‌ ಖರ್ಚು ಕೊಡಿ ಅಂತ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೇಳಿದ ಉದಾಹರಣೆಯೇ ಇಲ್ಲ.

ಬೂತ್‌ ಖರ್ಚಿಗೆ ಅಭ್ಯರ್ಥಿ­ಗಳು ತಾವಾಗಿಯೇ 100 ರಿಂದ 500 ರೂಪಾಯಿವರೆಗೆ ಕಾರ್ಯಕರ್ತರಿಗೆ ಕೊಟ್ಟರೆ ಅದು ತಮಗೆ ಮಾಡಿದ ಅವಮಾನ ಅಂತ ರಾಜಕೀಯ ಪಕ್ಷಗಳ ಕಾರ್ಯಕರ್ತರು ಭಾವಿಸುತ್ತಿದ್ದರು. ಹಣವನ್ನು ತಿರಸ್ಕರಿಸುತ್ತಿದ್ದರು. ಕಾರ್ಯಕರ್ತರು ಹಣಕ್ಕಾಗಿ ಕೆಲಸ ಮಾಡುತ್ತಿರಲಿಲ್ಲ. ಆಯಾ ರಾಜಕೀಯ ಪಕ್ಷಗಳ ತಣ್ತೀ, ಸಿದ್ದಾಂತಕ್ಕಾಗಿ ಬದ್ಧತೆಯಿಂದ ದುಡಿಯುತ್ತಿದ್ದರು. ಆ ಕಾಲದ ರಾಜಕಾರಣ ಮೌಲ್ಯಯುತವಾಗಿತ್ತು.

ನನ್ನ ಮೊದಲ ಚುನಾವಣೆಯಲ್ಲಿ ನನ್ನ ಬಳಿ ದುಡ್ಡೇ ಇರಲಿಲ್ಲ. ಜನರೇ ದುಡ್ಡು ಕೊಟ್ಟು ಗೆಲ್ಲಿಸಿದರು. ವಿಧಾನಸಭೆಗೆ 1989ರಲ್ಲಿ ನಡೆದ ಚುನಾವಣೆಯಲ್ಲಿ ನಾನು ಸೋತಾಗ ನನಗೆ ಓಡಾಡಲು ಜನರೇ ಸೆಕೆಂಡ್‌ ಹ್ಯಾಂಡ್‌ ಅಂಬಾಸಿಡರ್‌ ಕಾರು ಕೊಡಿಸಿದ್ದರು. ರಾಜಕೀಯ ಪಕ್ಷಗಳ ಕಾರ್ಯಕ್ರಮಗಳು ಈಗ ಬದಲಾಗಿದೆ. ಕಾರ್ಯತಂತ್ರ ಬದಲಾಗಿದೆ. ರಾಜಕಾರಣಿಗಳ ಆಲೋಚನೆ, ನಿಲುವು ಬದಲಾಗಿದೆ. ರಾಜಕಾರಣಿಗಳ ಹಿನ್ನೆಲೆ ವಿಭಿನ್ನವಾಗಿವೆ. ಜನಸೇವೆಯ ಉದ್ದೇಶ ಬದಿಗೆ ಸರಿದಿದೆ.

ಮೌಲ್ಯಗಳು ಸರಿದು ಹೋಗಿವೆ. ಜಾತಿ, ಧರ್ಮ, ಹಣ ಮುಂಚೂಣಿಗೆ ಬಂದಿದೆ. ಅಭಿವೃದ್ಧಿ ಬದಿಗೆ ಸರಿದು ಭಾವನಾತ್ಮಕ ವಿಚಾರ ಮುನ್ನೆಲೆಗೆ ಬಂದಿದೆ. ಗುಣಾತ್ಮಕ ರಾಜಕಾರಣ, ಸಾಂಸ್ಕೃತಿಕ ನಾಯಕತ್ವ ಕ್ಷೀಣಿಸುತ್ತಿದೆ.
ಕೆಲವು ಅಧಿಕಾರಿಗಳೇ ಚುನಾವಣೆ ವೇಳೆ ಪಕ್ಷಪಾತದಿಂದ ಕೆಲಸ ಮಾಡುವುದನ್ನು ಕಾಣುತ್ತೇವೆ. ಮತದಾರರು ಮತದ ಮೌಲ್ಯ ಕಳೆದುಕೊಂಡರೆ ಪ್ರಜಾಪ್ರಭುತ್ವಕ್ಕೆ ನಷ್ಟವಾಗುತ್ತದೆ. ಜಾತಿ, ಧರ್ಮ, ಹಣವನ್ನು ಹಿಮ್ಮೆಟ್ಟಿಸಬೇಕು. ಸಾಮಾಜಿಕ ಚಳವಳಿ ಆಗಬೇಕು. ಗುಣ ಹಾಗೂ ಸೇವಾ ಮನೋಭಾವನೆಯನ್ನು ಜನರು ಗುರುತಿಸಬೇಕು.
ಆಗ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮೆರುಗು ಬರುತ್ತದೆ. ಇವತ್ತು ಎಲ್ಲ ರಾಜಕೀಯ ಪಕ್ಷಗಳು ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್‌ ಕೊಡುವ ಮುನ್ನ ಚುನಾವಣೆ ಎದುರಿಸಲು ಕನಿಷ್ಠ 10 ಕೋಟಿ ರೂಪಾಯಿ ಇಟ್ಟುಕೊಂಡಿದ್ದೀರಾ ಅಂತ ಟಿಕೆಟ್‌ ಆಕಾಂಕ್ಷಿಗಳನ್ನು ಕೇಳುತ್ತಾರೆ. ಮೀಸಲು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹುಡುಕಿ ದುಡ್ಡು ಕೊಟ್ಟು ಕಣಕ್ಕೆ ಇಳಿಸುತ್ತಿದ್ದ ಕಾಲವಿತ್ತು. ಅಂತಹ ಪರಿಸ್ಥಿತಿ ಈಗಿಲ್ಲ.

Advertisement

ರಾಜಕೀಯ ಪಕ್ಷಗಳನ್ನು ಮುನ್ನಡೆಸುವವರಲ್ಲಿಯೂ ನೈತಿಕತೆ ಇರುತ್ತಿತ್ತು. ಮತದಾರರು ಯೋಗ್ಯರು, ಸಮರ್ಥರು, ಒಳ್ಳೆಯವರನ್ನು ಹುಡುಕಿ ಬೆಂಬಲಿಸಬೇಕು.

ಚುನಾವಣೆ ಎಂಬುದು ವ್ಯಾಪಾರವಾದರೆ ಹೇಗೆ? ಹಣ ಇರುವವರ ಕೈಗೆ ರಾಜಕೀಯ ಅಧಿಕಾರ ಹೋಗಬಾರದು. ಕೆಟ್ಟು ಹೋಗಿರುವ ಪರಿಸ್ಥಿತಿಯನ್ನು ಮತದಾರರೇ ಸರಿಪಡಿಸಬೇಕಿದೆ. ಸರ್ಕಾರವೇ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಹಣ ನೀಡುವ ವ್ಯವಸ್ಥೆ ಜಾರಿಯಾಗಬೇಕು. ಚುನಾವಣ ಕ್ರಮದಲ್ಲಿ ಬದಲಾಗಬೇಕು.

-ಕೂಡ್ಲಿ ಗುರುರಾಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next